ಬೆಂಗಳೂರು: ಇ ಖಾತಾ ಮಾಹಿತಿ ನೀಡಲು ಬರಲಿದೆ ಮೊಬೈಲ್ ಆ್ಯಪ್!
ಇ-ಖಾತಾ ಮೂಲಕ ಆಸ್ತಿದಾರರಿಗೆ ಹೊಸ ಟಾಸ್ಕ್ ನೀಡಿದ್ದ ಸರ್ಕಾರ, ಇದೀಗ ಇ-ಖಾತಾ ನೋಂದಣಿಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಹೊಸ ಪ್ರಯೋಗ ನಡೆಸಲು ಸಜ್ಜಾಗಿದೆ. ಆಸ್ತಿ ಮಾಲೀಕರಿಗೆ ಇ ಖಾತಾ ಬಗ್ಗೆ ಮಾಹಿತಿ ನೀಡಲು ಮೊಬೈಲ್ ಆ್ಯಪ್ ಪರಿಚಯಿಸಲು ಜಿಬಿಎ ಸಜ್ಜಾಗುತ್ತಿದ್ದರೆ, ಇತ್ತ ಈಗ ಇರುವ ಸಮಸ್ಯೆಗಳನ್ನೇ ಬಗೆಹರಿಸದ ಜಿಬಿಎ ನಡೆಗೆ ಆಸ್ತಿಮಾಲೀಕರ ಅಸಮಾಧಾನ ವ್ಯಕ್ತವಾಗುತ್ತಿದೆ.

ಬೆಂಗಳೂರು, ಸೆಪ್ಟೆಂಬರ್ 29: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಆಸ್ತಿಗಳ ಖರೀದಿ ಹಾಗೂ ಮಾರಾಟದಲ್ಲಿ ಯಾವುದೇ ಸಮಸ್ಯೆ ಆಗಬಾರದು ಎಂದು ಇ ಖಾತಾ ಪರಿಚಯಿಸಲಾಗಿದೆ. ಆದರೆ, ಬೆಂಗಳೂರಿನಲ್ಲಿ ಅಂದಾಜು 25 ಲಕ್ಷ ಆಸ್ತಿಗಳಿದ್ದು ಇಲ್ಲಿಯ ವರೆಗೆ 5 ಲಕ್ಷದ ಆಸ್ತಿಗಳಿಗೆ ಮಾತ್ರ ಇ ಖಾತಾ ನೀಡಲಾಗಿದೆ. ಇದೀಗ ಕೊನೆಗೂ ಇ ಖಾತಾ ಸಮಸ್ಯೆಗೆ ಪರಿಹಾರ ಹುಡುಕಲು ಹೊರಟಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (GBA) ಇ-ಖಾತಾ (E Khata) ನೋಂದಣಿ ಹಾಗೂ ಮಾಹಿತಿ ಪಡೆಯಲು ಮೊಬೈಲ್ ಆ್ಯಪ್ ಪರಿಚಯಿಸಲು ಸಜ್ಜಾಗಿದೆ.
ಬೆಂಗಳೂರಿನಲ್ಲಿ ಇ ಖಾತಾ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಪರಿಚಯಿಸುತ್ತಿರುವ ಹೊಸ ಆ್ಯಪ್ನಿಂದ ಆಸ್ತಿ ಮಾಲೀಕರಿಗೆ ಅರ್ಜಿ ಪ್ರಕ್ರಿಯೆ ಜೊತೆಗೆ ಇ ಖಾತಾ ಕುರಿತ ಮಾಹಿತಿಗಳನ್ನು ಪಡೆಯಲು ಸುಲಭವಾಗಲಿದೆ ಎಂಬುದು ಜಿಬಿಎ ಲೆಕ್ಕಾಚಾರ. ಆದರೆ, ಇತ್ತ ಈಗಾಗಲೇ ಇ ಖಾತಾ ನೋಂದಣಿಯಲ್ಲಿರುವ ಸರ್ವರ್ ಸಮಸ್ಯೆ, ಅರ್ಜಿ ನೋಂದಣಿಯ ವಿಳಂಬದ ಸಮಸ್ಯೆ ಬಗೆಹರಿಸದ ಜಿಬಿಎ ಇದೀಗ ಆ್ಯಪ್ ಪರಿಚಯಿಸಲು ಹೊರಟಿರುವುದು ಹಾಸ್ಯಾಸ್ಪದ ಎಂದು ಬೆಂಗಳೂರಿನ ಆಸ್ತಿ ಮಾಲೀಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಅಲ್ಲದೇ, ಮೊಬೈಲ್ ಆ್ಯಪ್ ಮೂಲಕ ಇ ಖಾತಾ ನೋಂದಣಿ ಅಸಾಧ್ಯ ಎಂದಿದ್ದಾರೆ.
ಸ್ಮಾರ್ಟ್ಫೋನ್ನಿಂದಲೇ ನೇರವಾಗಿ ಇ-ಖಾತಾ ಅರ್ಜಿ ಸಲ್ಲಿಸಲು ಅವಕಾಶ
ಸದ್ಯ ಬೆಂಗಳೂರಿನಲ್ಲಿ ಇ-ಖಾತಾ ಅರ್ಜಿಗಳನ್ನು ಅಧಿಕೃತ ವೆಬ್‌ಸೈಟ್, ಬೆಂಗಳೂರು ಒನ್ ಕೇಂದ್ರಗಳು ಮತ್ತು ಸೈಬರ್ ಕೇಂದ್ರಗಳ ಮೂಲಕ ನಿರ್ವಹಿಸಲಾಗುತ್ತಿತ್ತು. ಹೊಸ ಅಪ್ಲಿಕೇಶನ್‌ನೊಂದಿಗೆ, ಆಸ್ತಿ ಮಾಲೀಕರು ಇನ್ಮುಂದೆ ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ನೇರವಾಗಿ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ರದ್ದಾಗುತ್ತಾ ಅನರ್ಹ ಬಿಪಿಎಲ್ ಕಾರ್ಡ್? ಸ್ವಯಂ ಪ್ರೇರಿತವಾಗಿ ಎಪಿಎಲ್ಗೆ ಬರುವಂತೆ ಸಚಿವ ಮುನಿಯಪ್ಪ ಮನವಿ
ಈವರೆಗೆ ಇ ಖಾತಾ ವಿತರಣೆಗೆ ಅನೇಕ ಹೊಸ ಹೊಸ ಟಾಸ್ಕ್ಗಳನ್ನು ಜಿಬಿಎ ಅನುಷ್ಠಾನಗೊಳಿಸಿದೆ. ಆದಾಗ್ಯೂ, ವಿತರಣೆಯಾದ ಇ ಖಾತಾಗಳ ಸಂಖ್ಯೆ ಅಷ್ಟಕ್ಕಷ್ಟೆ. ಸದ್ಯ ಜಿಬಿಎ ಜಾರಿ ಮಾಡಲು ಹೊರಟಿರುವ ಹೊಸ ಪ್ಲಾನ್ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.



