ನವದೆಹಲಿ, ಜೂನ್ 7: ಕೇಂದ್ರದಲ್ಲಿ ಎನ್ಡಿಎ ಸರ್ಕಾರ (NDA Government) ರಚನೆಗೆ ಸಿದ್ಧತೆ ಬಿರುಸಿನಿಂದ ಸಾಗುತ್ತಿದ್ದು, ಇಂದು ಮೈತ್ರಿಕೂಟದ ಸಭೆ ದೆಹಲಿಯಲ್ಲಿ ನಡೆಯುತ್ತಿದೆ. ಸಭೆಗೆ ತೆರಳುವುದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳ ಬಳಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ನೂತನ ಸಂಸದ ಡಾ. ಮಂಜುನಾಥ್ (Dr CN Manjunath), ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿ ಆಗುತ್ತಿರುವುದು ಸಂತೋಷದ ವಿಷಯ ಎಂದರು.
ಜವಾಹರ್ ಲಾಲ್ ನೆಹರು ಬಳಿಕ ಮೋದಿ ಸತತ ಮೂರನೇ ಬಾರಿಗೆ ಪ್ರಧಾನಿಯಾಗುತ್ತಿದ್ದಾರೆ. ನಾನು ಸಚಿವ ಆಗಬೇಕೆಂದು ಜನರ ನಿರೀಕ್ಷೆ ಇದೆ. ಹೆಚ್ಡಿ ಕುಮಾರಸ್ವಾಮಿ ನನ್ನ ಹೆಸರು ಹೇಳಿರುವ ಬಗ್ಗೆ ಮಾಹಿತಿ ಇಲ್ಲ. ಮೊದಲು ಎನ್ಡಿಎ ಸರ್ಕಾರ ರಚನೆ ಆಗಬೇಕು ಅಷ್ಟೆ. ಮೈತ್ರಿ ಸರ್ಕಾರ ಆಗಿರುವುದರಿಂದ ಅದರದ್ದೇ ಆದ ಸಮಸ್ಯೆಗಳು ಇರುತ್ತವೆ. ಸಚಿವ ಸ್ಥಾನದ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಹಾಗೆಂದು, ನಾನು ಆರೋಗ್ಯ ಸಚಿವ ಆಗಬೇಕು ಎಂಬುದು ಜನರ ಅನಿಸಿಕೆಯಷ್ಟೆ ಎಂದು ಮಂಜುನಾಥ್ ಹೇಳಿದರು.
ಈ ಮಧ್ಯೆ, ಕೇಂದ್ರ ಸಚಿವ ಸ್ಥಾನದ ಬಗ್ಗೆ ನನಗೆ ಅಧಿಕೃತ ಮಾಹಿತಿ ಬಂದಿಲ್ಲ ಎಂದು ದೆಹಲಿಯಲ್ಲಿ ಜೆಡಿಎಸ್ ಸಂಸದ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇವತ್ತಿನ ಎನ್ಡಿಎ ಸಭೆಯಲ್ಲಿ ಭಾಗವಹಿಸಲು ಬಂದಿದ್ದೇನೆ. ಮೋದಿ ನಾಯಕತ್ವದಲ್ಲಿ ಮತ್ತೆ ಸರ್ಕಾರ ಎಂಬ ಮಾಹಿತಿ ಇದೆ. ನಮಗೂ ಸಹ ಸಚಿವ ಸ್ಥಾನ ನೀಡ್ತಾರೆ ಎಂಬ ಮಾಹಿತಿ ಇದೆ. ನಮ್ಮಿಂದ ಒಳ್ಳೆ ಕೆಲಸ ಮಾಡಿಸಲು ಸಾಧ್ಯ ಎಂಬದು ವರಿಷ್ಠರಿಗೆ ಗೊತ್ತಿದೆ. ರಾಜ್ಯದ ಜನರಿಗೂ ಸಹ ಒಂದು ವಿಶ್ವಾಸ ಇದೆ ಎಂದರು.
ನಾಡಿನ ಜನತೆಗೆ ಒಳ್ಳೆಯದಾಗುವ ಖಾತೆ ಸಿಕ್ಕಿದರೆ ಉತ್ತಮ ಕೆಲಸ ಮಾಡುವೆ. ಮಂಜುನಾಥ್ಗೆ ಖಾತೆ ನೀಡುವ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ನನಗೆ ಮಂತ್ರಿ ಗಿರಿ ಕೊಡಬೇಕು ಎಂದು ಒತ್ತಡ ಹಾಕುತ್ತಿಲ್ಲ. ಬಿಜೆಪಿ ವರಿಷ್ಠರು ನೀಡಿದರೆ ಜವಾಬ್ದಾರಿ ನಿರ್ವಹಿಸುತ್ತೇನೆ ಅಷ್ಟೇ ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಮಿತ್ರಪಕ್ಷಗಳ ಬೇಡಿಕೆಯೇನು, ಮಂತ್ರಿಗಿರಿ ನೀಡಲು ಬಿಜೆಪಿ ಸೂತ್ರವೇನು? ಇಲ್ಲಿದೆ ವಿವರ
ಇಂದು ನಡೆಯುವ ಎನ್ಡಿಎ ಸಭೆಯಲ್ಲಿ ಸರ್ಕಾರ ರಚನೆ ತೀರ್ಮಾನ ಅಂತಿಮಗೊಳ್ಳುವ ನಿರೀಕ್ಷೆ ಇದೆ. ಮೋದಿ ಅವರು ಪ್ರಧಾನಿಯಾಗಿ ಭಾನುವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ