ಫುಡ್ ಡೆಲಿವರಿ ಮಾಡುವವರೇ ಟಾರ್ಗೆಟ್​: ನೇಪಾಳಿ ರಾಬರಿ ಗ್ಯಾಂಗ್​ ಅಂದರ್

ಫುಲ್​ ಟೈಂ ಸೆಕ್ಯೂರಿಟಿ ಮತ್ತು ಹೌಸ್​ ಕೀಪಿಂಗ್​ ಕೆಲಸ ಮಾಡಿಕೊಂಡು ಬಿಡುವಿನ ವೇಳೆಯಲ್ಲಿ ರಾಬರಿ ಮಾಡುತ್ತಿದ್ದ ಖತರ್ನಾಕ್ ನೇಪಾಳಿ​ ರಾಬರಿ ಗ್ಯಾಂಗ್​ನ ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಫುಡ್​ ಡೆಲಿವರಿಗೆಂದು ತೆರಳುವವರನ್ನೇ ಟಾರ್ಗೆಟ್​ ಮಾಡಿ ಅಡ್ಡಗಟ್ಟಿ ಮೊಬೈಲ್​ ಮತ್ತು ಹಣವನ್ನು ಗ್ಯಾಂಗ್​ ಪೀಕುತ್ತಿತ್ತು ಎನ್ನಲಾಗಿದೆ.

ಫುಡ್ ಡೆಲಿವರಿ ಮಾಡುವವರೇ ಟಾರ್ಗೆಟ್​: ನೇಪಾಳಿ ರಾಬರಿ ಗ್ಯಾಂಗ್​ ಅಂದರ್
ಖತರ್ನಾಕ್​ ಗ್ಯಾಂಗ್​ ಅಂದರ್​
Updated By: ಪ್ರಸನ್ನ ಹೆಗಡೆ

Updated on: Oct 21, 2025 | 4:40 PM

ಬೆಂಗಳೂರು, ಅಕ್ಟೋಬರ್​ 21: ಫುಡ್ ಡೆಲಿವರಿ ಮಾಡುವವರನ್ನು ಟಾರ್ಗೆಟ್ ಮಾಡಿ ರಾಬರಿ (Robbery) ಮಾಡುತ್ತಿದ್ದ ನೇಪಾಳಿ ಗ್ಯಾಂಗ್​ನ ಬೆಳ್ಳಂದೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ. ಪಾರಸ್ ಸಿಂಗ್, ಮುಕೇಶ್ ಸಾಯಿ, ಬಿಪಿನ್ ಕರ್ಕಿ, ಸಮೀರ್ ಲೋಹಾರ್ ಬಂಧಿತರು. ಆರೋಪಿಗಳು ನೇಪಾಳದಿಂದ ಬಂದು ಸೆಕ್ಯೂರಿಟಿ ಹಾಗೂ ಹೌಸ್​ ಕೀಪಿಂಗ್​ ಕೆಲಸ ಮಾಡಿಕೊಂಡಿದ್ದರು. ಬಿಡುವಿನ ವೇಳೆ ದರೋಡೆ ನಡೆಸುತ್ತಿದ್ದರು ಎನ್ನಲಾಗಿದೆ.

ಫುಡ್​ ಡೆಲಿವರಿಗೆಂದು ತೆರಳುವವರನ್ನು ಅಡ್ಡಗಟ್ಟಿ ಮೊಬೈಲ್​ ಮತ್ತು ಹಣವನ್ನು ಪೀಕುತ್ತಿದ್ದ ಗ್ಯಾಂಗ್​, ಕಳೆದ ತಿಂಗಳು ಸೆ.13ರ ರಾತ್ರಿ ಕಸವನಹಳ್ಳಿ ರಸ್ತೆಯಲ್ಲಿಯೂ ಕೈಚಳಕ ತೋರಿಸಿತ್ತು. ಫುಡ್ ಡೆಲಿವರಿ ಬಾಯ್ ಸುರೇಶ್ ಎಂಬಾತನಿಗೆ ಹಲ್ಲೆ ಮಾಡಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿತ್ತು. ಮೂರು ಬೈಕ್​ ಗಳಲ್ಲಿ ಬಂದಿದ್ದ ಆರೋಪಿಗಳು ಕೃತ್ಯ ಎಸಗಿದ್ದರು. ಸುರೇಶ್ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 9 ಮೊಬೈಲ್ ಗಳು ಮತ್ತು ಮೂರು ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ. ಬೆಳ್ಳಂದೂರು ಮಾತ್ರವಲ್ಲದೆ, ಹೆಬ್ಬಗೋಡಿ, ಪರಪ್ಪನ ಅಗ್ರಹಾರ, ಬಂಡೆಪಾಳ್ಯ, HSR ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿಯೂ ಈ ಗ್ಯಾಂಗ್​ ಕೃತ್ಯವೆಸಗಿರೋದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಆನೇಕಲ್​ನ ಕಲ್ಲುಬಾಳು ಗ್ರಾಮದಲ್ಲಿ ಲಿವಿಂಗ್​ ಟುಗೆದರ್​ನಲ್ಲಿದ್ದ ಜೋಡಿ ಆತ್ಮಹತ್ಯೆ

ಬೀಗ ಹಾಕಿರುವ ಮನೆಗಳನ್ನೇ ಟಾರ್ಗೆಟ್​ ಮಾಡಿ ಕಳ್ಳತನ

ಬೀಗ ಹಾಕಿರುವ ಮನೆಗಳನ್ನೇ ಟಾರ್ಗೆಟ್​ ಮಾಡಿಕೊಂಡು ಖದೀಮರು ಕಳ್ಳತನ ನಡೆಸಿರುವ ಘಟನೆ ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಗ್ರಾಮದ ಆದರ್ಶ ನಗರದಲ್ಲಿ ನಡೆದಿದೆ. ದೀಪಾವಳಿ ಹಿನ್ನಲೆ ಮನೆಗಳಿಗೆ ಬೀಗ ಹಾಕಿ ಕೆಲವರು ಊರಿಗೆ ತೆರಳಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಗ್ಯಾಂಗ್​ ಕೈಚಳಕ ತೋರಲು ಮುಂದಾಗಿದೆ. ಮಂಕಿ ಕ್ಯಾಪ್ ಧರಿಸಿ ಓಡಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬೀದಿನಾಯಿಗಳ ಹಾವಳಿ ಹಿನ್ನಲೆ ಕಳ್ಳರು ಒಂದು ಕ್ಷಣ ನಿಂತಲ್ಲೆ ನಿಂತಿದ್ದಾರೆ. ಬಳಿಕ ಪಕ್ಕದ ನಂಜಪ್ಪ ಬಡಾವಣೆಯಲ್ಲಿ ಕಳ್ಳತನ ನಡೆಸಿದ್ದು, ಬೀಗ ಮುರಿದು ಕೈಗೆ ಸಿಕ್ಕ ಐಫೋನ್‌ ಕದ್ದೊಯ್ದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:39 pm, Tue, 21 October 25