ಅಕ್ರಮ ಮರಳುಗಾರಿಕೆ ಆರೋಪ: ಅಧಿಕಾರಿಗಳು Vs ರಾಯರೆಡ್ಡಿ ವಿಚಾರದಲ್ಲೀಗ ಸಿಎಂ ಕಚೇರಿ ಮಧ್ಯಪ್ರವೇಶ
ಅಕ್ರಮ ಮರಳುಗಾರಿಕೆ ಆರೋಪ ವಿಚಾರದಲ್ಲಿ ಅಧಿಕಾರಿಗಳು v/s ಬಸವರಾಜ ರಾಯರೆಡ್ಡಿ ವಿಚಾರದಲ್ಲೀಗ ಸಿಎಂ ಸಿದ್ದರಾಮಯ್ಯ ಕಚೇರಿಯ ಮಧ್ಯಪ್ರವೇಶವಾಗಿದೆ. ಕೊಪ್ಪಳ ಗಣಿ ಇಲಾಖೆಯ ಹಿರಿಯ ಅಧಿಕಾರಿಗೆ ಮುಖ್ಯಮಂತ್ರಿಗಳ ಆಫೀಸ್ ನಿಂದ ಕರೆ ಹೋಗಿರುವ ಬಗ್ಗೆ ಟಿವಿ9ಗೆ ಗಣಿ & ಭೂವಿಜ್ಞಾನ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ದೊರಕಿದೆ.

ಕೊಪ್ಪಳ, ಅಕ್ಟೋಬರ್ 21: ತುಂಗಭದ್ರಾ ನದಿ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಬಗ್ಗೆ ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ (Basvaraj Rayareddi) ಬರೆದಿದ್ದ ಲೆಟರ್ ಮತ್ತು ಇದಕ್ಕೆ ಪ್ರತಿಯಾಗಿ ಇಲಾಖೆ ಅಧಿಕಾರಿಗಳ ವರ್ಗದಿಂದಲೂ ಪತ್ರ ವಿಚಾರದಲ್ಲಿ ಸಿಎಂ ಕಚೇರಿ ಮಧ್ಯ ಪ್ರವೇಶ ಮಾಡಿದೆ. ಕೊಪ್ಪಳ ಗಣಿ ಇಲಾಖೆಯ ಹಿರಿಯ ಅಧಿಕಾರಿ ಪುಷ್ಪಲತಾಗೆ ಸಿಎಂ ಕಚೇರಿಯಿಂದ ಕರೆ ಹೋಗಿದ್ದು, ಈ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಟಿವಿ9ಗೆ ಗಣಿ & ಭೂವಿಜ್ಞಾನ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ದೊರಕಿದೆ.
ಇಲಾಖೆ ಸಿಬ್ಬಂದಿ ಜೊತೆ ಪುಷ್ಪಲತಾ ಸಭೆ
ರಾಯರೆಡ್ಡಿಗೆ ಕೌಂಟರ್ ಆಗಿ ಸಹಿ ಇರದ ಪತ್ರ ವೈರಲ್ ವಿಚಾರ ಸಂಬಂಧ ಸಿಬ್ಬಂದಿ ಜೊತೆ ಹಿರಿಯ ಗಣಿ & ಭೂ ವಿಜ್ಞಾನ ಇಲಾಖೆ ಅಧಿಕಾರಿ ಪುಷ್ಪಲತಾ ಸಭೆ ನಡೆಸಿದ್ದಾರೆ. ಬಸವರಾಜ ರಾಯರೆಡ್ಡಿಗೆ 20 ಪ್ರಶ್ನೆ ಕೇಳಿದ್ದ ಯಾವದೇ ಸಹಿ ಇಲ್ಲದೆ ಲೆಟರ್ ವೈರಲ್ ಆಗಿತ್ತು. ರಾಜಧನ, ಅಕ್ರಮದ ವಿಚಾರವಾಗಿ ಅದರಲ್ಲಿ ಪ್ರಶ್ನೆ ಮಾಡಲಾಗಿತ್ತು. ಈ ವಿಚಾರವನ್ನ ಇಲಾಖೆ ಗಂಭೀರವಾಗಿ ಪರಿಗಣಿಸಿರುವ ಹಿನ್ನಲೆ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ: RSS ಬಿಸಿಬಿಸಿ ಚರ್ಚೆಗೆ ತುಪ್ಪ ಸುರಿದು ವಿವಾದದ ಕಿಡಿ ಹೊತ್ತಿಸಿದ ಸಚಿವ ಶಿವರಾಜ್ ತಂಗಡಗಿ
ಘಟನೆ ಏನು?
ತುಂಗಭದ್ರಾ ನದಿಯಿಂದ ಸುಮಾರು 85 ಕಿ.ಮೀ. ದೂರದ ಪ್ರದೇಶಗಳಲ್ಲಿ ಪ್ರತಿದಿನ ಅಕ್ರಮವಾಗಿ 100 ರಿಂದ 150 ಟ್ರಕ್ ಮರಳು ಮತ್ತು ಜಲ್ಲಿಕಲ್ಲು ಸಾಗಾಟವಾಗುತ್ತಿದೆ. 200ಕ್ಕೂ ಹೆಚ್ಚು ಜನರು ಈ ಕೆಲಸದಲ್ಲಿ ಭಾಗಿಯಾಗಿದ್ದು, ಇದನ್ನು ತಡೆಯಬೇಕಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೇ ಅಕ್ರಮಕ್ಕೆ ಸಾಥ್ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದ ರಾಯರೆಡ್ಡಿ, ಸಿಎಂ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಪತ್ರವನ್ನೂ ಬರೆದಿದ್ದರು. ಇಲಾಖೆಯಲ್ಲಿರುವ ಕೆಲ ಅಧಿಕಾರಿಗಳು ಕಳೆದ 12–13 ವರ್ಷಗಳಿಂದ ಇದೇ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಈ ಕೂಡಲೇ ವಗರ್ಗವಣೆ ಮಾಡಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಮರಳು ಮಾಫಿಯಾ ವಿರುದ್ಧ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೇ ಈ ರೀತಿ ಧ್ವನಿ ಎತ್ತಿದ್ದ ಕಾರಣ ವಿಷಯ ಗಂಭೀರತೆ ಪಡೆದುಕೊಂಡಿತ್ತು.
ಇತ್ತ ರಾಯರೆಡ್ಡಿ ಅವರ ಆರೋಪಕ್ಕೆ ಅಧಿಕಾರಿ ವಲಯದಿಂದಲೂ ಕೌಂಟರ್ ವ್ಯಕ್ತವಾಗಿತ್ತು. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಿಗೆ 20 ಪ್ರಶ್ನೆ ಕೇಳಿರುವ ಸಹಿ ಇಲ್ಲದ ಪತ್ರ ವೈರಲ್ ಆಗಿತ್ತು. ವಿಚಾರವೀಗ ಸಿಎಂ ಸಿದ್ದರಾಮಯ್ಯ ಅವರ ಕಚೇರಿ ತಲುಪಿದ್ದು, ಈ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕೊಪ್ಪಳ ಗಣಿ ಇಲಾಖೆ ಅಧಿಕಾರಿಗಳ ವಿರುದ್ದ ರಾಯರೆಡ್ಡಿ ಬರೆದಿದ್ದ ಪತ್ರ ಮತ್ತು ವೈರಲ್ ಆಗಿದ್ದ ಪ್ರಶ್ನೆಗಳ ಬಗ್ಗೆಯೂ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



