RSS ಬಿಸಿಬಿಸಿ ಚರ್ಚೆಗೆ ತುಪ್ಪ ಸುರಿದು ವಿವಾದದ ಕಿಡಿ ಹೊತ್ತಿಸಿದ ಸಚಿವ ಶಿವರಾಜ್ ತಂಗಡಗಿ
ಕರ್ನಾಟಕದಲ್ಲಿ RSS ಹಾಗೂ ಕಾಂಗ್ರೆಸ್ ಜಟಾಪಟಿ ಮುಗಿಯುತ್ತಿಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬೆನ್ನಲ್ಲೇ ಸಿದ್ದರಾಮಯ್ಯ ಸರ್ಕಾರ, ಸಂಘ ಪರಿವಾರದ ವಿರುದ್ಧ ತನ್ನ ಬತ್ತಳಿಕೆಯಿಂದ ಒಂದೊಂದೇ ಬಾಣ ಬಿಡುತ್ತಿದೆ. ಈ ಸಂಬಂಧ ಆರೋಪ ಪ್ರತ್ಯಾರೋಪಗಳು ತಾರಕ್ಕೇರಿದ್ದು, ಯುವ ಕಾಂಗ್ರೆಸ್ ಪ್ರಿಯಾಂಕ್ ಖರ್ಗೆ ಬೆನ್ನಿಗೆ ನಿಂತು ಪ್ರತಿಭಟನೆಗೆ ಧುಮುಕಿದೆ. ಕೆಲವೆಡೆ ದೊಡ್ಡ ಹೈಡ್ರಾಮಗಳೇ ನಡೆದಿವೆ. ಇದರ ನಡುವೆ ಉರಿಯುವ ಬೆಂಕಿಗೆ ಸಚಿವ ಶಿವರಾಜ್ ತಂಗಡಿಗಿ ತುಪ್ಪ ಸುರಿದಿದ್ದಾರೆ.

ಕೊಪ್ಪಳ, (ಅಕ್ಟೋಬರ್ 18): ಸಾರ್ವಜನಿಕ ಸ್ಥಳಗಳಲ್ಲಿ ಆರ್ ಎಸ್ಎಸ್ (RSS) ಕಾರ್ಯಚಟುವಟಿಕೆಗಳಿಗೆ ನಿರ್ಬಂಧಿಸುವ ಬಗ್ಗೆ ಕಾಂಗ್ರೆಸ್, ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ನಡುವೆ ಜಟಾಪಟಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಅದರಲ್ಲೂ ಬಿಜೆಪಿ ನಾಯಕರು ಸರ್ಕಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಸಮರ ಸಾರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಪ್ರತ್ಯಾರೋಪ ಜೋರಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಸಚಿವ ಶಿವರಾಜ್ ತಂಗಡಗಿ (Shivaraj Tangadagi) RSS ಒಪ್ಪುವವರು ದೇಶಪ್ರೇಮಿಗಳಲ್ಲ, ದೇಶ ವಿರೋಧಿಗಳು ಎಂದು ಹೇಳಿಕೆ ನೀಡಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಇದು ಹಿಂದೂಪರ ಸಂಘಟನೆಗಳ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಕೊಪ್ಪಳದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ತಂಗಡಗಿ, ಯಾರೂ ಆರ್ ಎಸ್ ಎಸ್ ಒಪ್ಪಿಕೊಳ್ಳುತ್ತಾರೆ ಅವರು ದೇಶ ವಿರೋಧಿಗಳು . ಆರ್ ಎಸ್ ಎಸ್ ದೇಶಭಕ್ತಿ ಸಂಘಟನೆ ಅಂತಾ ಯಾವ ಮೂಲದಿಂದ ಒಪ್ಕೋತಿರಿ. ಇವರು ಗಾಂಧಿ, ಬಸವಣ್ಣ, ಬುದ್ದ ಯಾರನ್ನೂ ಒಪ್ಪಲ್ಲ. ಬಸವಣ್ಣರನ್ನ ಎಲ್ಲರೂ ಒಪ್ಕೋತಾರೆ. ಆದ್ರೆ ಆರ್ ಎಸ್ ಎಸ್ ನವರು ಒಪ್ಪಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನಮಾಜ್ ಮಾಡಲು ಮುಸ್ಲಿಮರು ಅನುಮತಿ ಪಡೆಯುವರೆ? ತಮ್ಮದೇ ಸರ್ಕಾರವನ್ನು ಪ್ರಶ್ನಿಸಿದ ರಾಜಣ್ಣ
ಇವರು ಅಂಬೇಡ್ಕರ್ ಅವರನ್ನು ಒಪ್ಪಲ್ಲ, ರಾಷ್ಟ್ರ ದ್ವಜ ಒಪ್ಪಲ್ಲ, ರಾಷ್ಟ್ರಗೀತೆ ಒಪ್ಪಲ್ಲ. ಮೋದಿ, ಅಶೋಕ, ಯತ್ನಾಳ ಎಲ್ಲರೂ ಆರ್ ಎಸ್ ಎಸ್ ಅಂತಾರೆ. ಯಾವ ಮೂಲೆಯಿಂದ ನಾವು ರಾಷ್ಟ್ರಭಕ್ತ ಸಂಘಟನೆ ಎಂದು ಹೇಳುತ್ತೀರಿ. ಬೇರೆ ಯಾರಾದರೂ ಆಯುಧ ಹಿಡಿದುಕೊಂಡು ಓಡಾಡಿದ್ರೆ ಎಫ್ ಐ ಆರ್ ಮಾಡುತ್ತೀರಿ. ಇವರು ಬಡಿಗೆ ದೊಣ್ಣೆ ಹಿಡಿದು ಕೊಂಡು ಓಡಾಡಿದ್ರೆ ಯಾಕೆ ಎಫ್ ಐ ಆರ್ ಮಾಡಬಾರದು ಎಂದು ತಂಗಡಗಿ ಪ್ರಶ್ನಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಇವರು ಭಾಗಿಯಾಗಿದ್ದಾರಾ? RSS ಎನ್ನುವುದು ರಿಜಿಸ್ಟರ್ ಆಗಿಲ್ಲ. RSS ಅನ್ನೋದು ಕೋಮುವಾದ ಸಂಸ್ಥೆ. ಇದು ದೇಶಭಕ್ತಿ ಸಂಸ್ಥೆ ಅಲ್ಲ . ನಾನು ಇದನ್ನು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಇದರಲ್ಲಿ ಎರಡ ಮಾತೇ ಇಲ್ಲ. ಪಥ ಸಂಚಲನದಲ್ಲಿ ಯಾಕೆ ದ್ವಜ ಇಲ್ಲ. ಯಾವ ಅರ್ಥದಲ್ಲಿ ನೀವು ದೇಶ ಪ್ರೇಮಿಗಳು ಎಂದು ಕಿಡಿಕಾರಿದರು.
ಸಿಟಿ ರವಿ RSS ನಲ್ಲಿ ಓದಿದ್ರೆ ದೇಶ ಪ್ರೇಮಿನಾ? ಮೋದಿ RSS ನಿಂದ ಬಂದರೆ ದೇಶ ಪ್ರೇಮಿನಾ? ನಾವ ಬ್ಯಾನ್ ಮಾಡಲು ಹೇಳಿಲ್ಲ,ಅನುಮತಿ ತೆಗೆದುಕೊಳ್ಳಲು ಹೇಳಿದ್ದೇವೆ. ಜಗದೀಶ್ ಶೆಟ್ಟರ್ ಕಾಲದಲ್ಲಿ ಏನ ಆಗಿದೆ ಅದನ್ನು ಕೊಡುತ್ತೇವೆ. ನನ್ನ ಈ ಪ್ರಶ್ನೆ RSS ಮುಖ್ಯಸ್ಥರಿಗೆ. ಯಾವ ಅರ್ಥದಲ್ಲಿ ದೇಶ ಪ್ರೇಮಿ ಸಂಘಟನೆ . ದೇಶ ಪ್ರೇಮಿ ದೇಶ ಪ್ರೇಮಿ ಅಂದ್ರೆ ಯಾವ ಅರ್ಥದಲ್ಲಿ ದೇಶ ಪ್ರೇಮಿ. RSS ಹಿಂದೆ ಮೂರು ಸಲ ಬ್ಯಾನ್ ಆಗಿತ್ತು.ನಾವು ಬ್ಯಾನ್ ಮಾಡುತ್ತೇವೆ ಎಂದು ಹೇಳಿಲ್ಲ. ನಮ್ಮ ಕೈಯಲ್ಲಿ ಅಧಿಕಾರವೂ ಇಲ್ಲ.ಬ್ಯಾನ್ ಬಗ್ಗೆ ಚರ್ಚೆನೆ ಆಗಿಲ್ಲ. ದೇಶಕ್ಜೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಬ್ಯಾನ್ ಮಾಡಾಕ ಆಗುತ್ತಾ ಎಂದು ಪ್ರಶ್ನಿಸಿದರು.
ಈ ಮೂಲಕ ರಾಜ್ಯದಲ್ಲಿ ಈಗ ಆರ್ ಎಸ್ ಎಸ್ ಮತ್ತು ಕಾಂಗ್ರೆಸ್ ನಡುವೆ ಬಿಸಿಬಿಸಿ ಚರ್ಚೆಯ ಮಧ್ಯೆಯೇ ಸಚಿವ ಶಿವರಾಜ್ ತಂಗಡಗಿ ವಿವಾದದ ಕಿಡಿಹೊತ್ತಿಸಿದ್ದು, ಇದು ಮುಂದೆ ಯಾವ ಹಂತಕ್ಕೆ ಹೋಗಿ ನಿಲ್ಲುತ್ತೆ ಎಂದು ಕಾದುನೋಡಬೇಕಿದೆ.
Published On - 9:05 pm, Sat, 18 October 25




