ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಪ್ತ ಕಾರ್ಯದರ್ಶಿ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಹೊಸ ಕಾರು ತೆಗೆದುಕೊಂಡಿದ್ದಾರೆ. ಚೀನಾ ಮೂಲದ ಎಂಜಿ ಸಂಸ್ಥೆಯ ಎಂ.ಜಿ.ಗ್ಲೋಸ್ಟರ್ (MG Gloster) ಕಾರು ಖರೀದಿ ಮಾಡಿದ್ದು ಡಿ.9ರಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಆದರೆ, ಆತ್ಮನಿರ್ಭರ್ ಭಾರತ ಘೋಷಣೆಯ ಮೂಲಕ ಸ್ವದೇಶಿ ವಸ್ತುಗಳ ಬಳಕೆಗೆ ಆದ್ಯತೆ ನೀಡುವಂತೆ ಕರೆಕೊಟ್ಟಿರುವ ಬಿಜೆಪಿ ಸರ್ಕಾರದಲ್ಲಿದ್ದುಕೊಂಡು ಚೀನಾ ಕಾರು ಖರೀದಿಸಿದ್ದಕ್ಕೆ ಅನೇಕರು ಗರಂ ಆಗಿದ್ದಾರೆ. ಬಿಜೆಪಿ ನಾಯಕರಾಗಿ ನೀವೇ ಚೀನಾ ಕಾರಿಗೆ ಮಾರುಹೋದರೆ ಹೇಗೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತಕರಾರು ಎತ್ತಿದ್ದಾರೆ.
ಎಂ.ಜಿ ಕಂಪನಿಯ ನೂತನ ಎಂ.ಜಿ ಗ್ಲೋಸ್ಟರ್ ಕಾರು ಡೆಲಿವರಿ ತೆಗೆದುಕೊಂಡ ಸಂದರ್ಭ…
Posted by MP Renukacharya on Tuesday, December 8, 2020
ಚೀನಾ ಮೂಲದ ಎಂಜಿ ಸಂಸ್ಥೆ ಗುಜರಾತ್ನಲ್ಲಿ ತಯಾರಿಕಾ ಘಟಕವನ್ನು ಹೊಂದಿದೆ. ರೇಣುಕಾಚಾರ್ಯ ಖರೀದಿಸಿರುವ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (SUV) ಕಾರಿನ ಮೌಲ್ಯ 35 ಲಕ್ಷ ರುಪಾಯಿ ಆಸುಪಾಸಿನದ್ದಾಗಿದ್ದು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಸ್ಪೋರ್ಟ್ಸ್ ಸುರಕ್ಷತೆಯ ದೃಷ್ಟಿಯಲ್ಲೂ ಉತ್ತಮವಾಗಿರುವ ಕಾರ್ ಇದಾಗಿದೆ.
ಚೀನಾ ಕಾರನ್ನು ನೋಡಿ ಕಿಡಿಕಾರಿದ ಜನ
ಅದೇನೇ ಇದ್ದರೂ ಈ ಎಲ್ಲಾ ಸೌಲಭ್ಯಗಳು ಭಾರತೀಯ ಕಾರುಗಳಲ್ಲೇ ಸಿಗುವಾಗ ಚೀನಾ ಕಾರಿಗೆ ಮೊರೆ ಹೋಗಿದ್ದೇಕೆ. ಬಾಯಿಯಲ್ಲಿ ಬಾಯ್ಕಾಟ್ ಚೀನಾ ಎಂದು ಹೇಳುವವರಿಗೆ ಅದನ್ನು ಪಾಲಿಸಬೇಕು ಎಂಬ ಕನಿಷ್ಟ ಜ್ಞಾನ ಇಲ್ಲವೇ ಎನ್ನುವುದು ಜನರ ಪ್ರಶ್ನೆ. ಮೇಲಿಂದ ಮೇಲೆ ಚೀನಾ ಆ್ಯಪ್ಗಳನ್ನು ಬ್ಯಾನ್ ಮಾಡುತ್ತಿರುವ ಕೇಂದ್ರ ಸರ್ಕಾರ ಇದುವರೆಗೆ ಸುಮಾರು 224 ಚೀನಾ ಮೂಲದ ಆ್ಯಪ್ಗಳನ್ನು ನಿರ್ಬಂಧಿಸಿದೆ.
ರೇಣುಕಾಚಾರ್ಯ ಹಾಕಿರುವ ಫೇಸ್ಬುಕ್ ಪೋಸ್ಟ್ಗೆ ಕಮೆಂಟ್ ಮಾಡಿರುವವರಲ್ಲಿ ಅನೇಕರು ಇಂತಹದ್ದೇ ಪ್ರಶ್ನೆಗಳನ್ನು ಎತ್ತಿದ್ದಾರೆ. ಸದಾ ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಹೊನ್ನಾಳಿ ಶಾಸಕರು ಸದ್ಯ ಇದಕ್ಕೆ ಏನೆಂದು ಉತ್ತರಿಸುತ್ತಾರೋ ಗೊತ್ತಿಲ್ಲ.
ಕೊರೊನಾ ಮಣಿಸುವ ಲಸಿಕೆ ನೀಡಲು ಬರಲಿವೆ ದೇಶದಲ್ಲೇ ತಯಾರಾದ ‘ಆತ್ಮನಿರ್ಭರ್ ಸಿರಿಂಜ್’
Published On - 12:09 pm, Fri, 11 December 20