ಬೆಂಗಳೂರು: ಕೊರೊನಾ ವೈರಸ್ ಸೋಂಕು ತಡೆಗಟ್ಟಲು ದೇಶಾದ್ಯಂತ ಲಾಕ್ಡೌನ್ ವಿಸ್ತರಿಸಿ ಕೇಂದ್ರ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪಾಲಿಸಲು ರಾಜ್ಯ ಸರ್ಕಾರವೂ ನಿರ್ಧರಿಸಿದ್ದು, ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಮೇ 3ರ ಬಳಿಕ ಮದ್ಯ ಮಾರಾಟಕ್ಕೆ ಅವಕಾಶ:
ಮದ್ಯಪ್ರಿಯರಿಗೂ ಗುಡ್ ನ್ಯೂಸ್ ನೀಡಿದ್ದು, ಮೇ 3ರ ಬಳಿಕ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ರೆಡ್, ಆರೆಂಜ್, ಗ್ರೀನ್ ವಲಯಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿದ್ದು, ಕನಿಷ್ಠ 6 ಅಡಿ ಅಂತರ ಕಾಪಾಡಿಕೊಂಡು ಮದ್ಯ ಖರೀದಿ ಮಾಡಬೇಕಿದೆ. ನಿಯಮಗಳ ಕಟ್ಟುನಿಟ್ಟಿನ ಪಾಲನೆ ಹೊಣೆ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ.
21 ದಿನಗಳ ಕಾಲ ಹೊಸ ಕೇಸ್ ಪತ್ತೆಯಾಗದಿದ್ರೆ ಜೋನ್ ಬದಲಾವಣೆಯಾಗಲಿದೆ. ರೆಡ್ ಜೋನ್ ವಲಯವಿದ್ದರೆ ಆರೆಂಜ್ ಜೋನ್, ಆರೇಂಜ್ ಜೋನ್ನಲ್ಲಿದ್ರೆ ಅದು ಗ್ರೀನ್ ಜೋನ್ ಆಗಿ ಬದಲಾವಣೆಯಾಗಲಿದೆ.
ಕಾರಿನಲ್ಲಿ ಇಬ್ಬರು, ಬೈಕ್ನಲ್ಲಿ ಒಬ್ಬರಿಗೆ ಅವಕಾಶ:
ಆರೆಂಜ್ ಜೋನ್ನ 284 ಜಿಲ್ಲೆಗಳಲ್ಲಿ ಸ್ವಲ್ಪ ಸಡಿಲಿಕೆ ಮಾಡಿದ್ದು, ಕಾರಿನಲ್ಲಿ ಇಬ್ಬರು, ಬೈಕ್ನಲ್ಲಿ ಒಬ್ಬರು ಓಡಾಡಬಹುದಾಗಿದೆ. ಆರೆಂಜ್ ಜೋನ್ನಲ್ಲಿ ಕ್ಯಾಬ್, ಟ್ಯಾಕ್ಸಿ ಓಡಾಟಕ್ಕೆ ಅವಕಾಶ ಕೊಟ್ಟಿದ್ದು, ಅಂತರ್ ಜಿಲ್ಲಾ ಖಾಸಗಿ ವಾಹನಗಳ ಓಡಾಟಕ್ಕೂ ಅವಕಾಶ ನೀಡಲಾಗಿದೆ.
ಆರೋಗ್ಯ ಸೇತು ಆ್ಯಪ್ ಕಡ್ಡಾಯ:
ರೆಡ್ ಮತ್ತು ಆರೆಂಜ್ ಜೋನ್ನಲ್ಲಿರುವ ಪ್ರದೇಶ ಕಂಟೇನ್ಮೆಂಟ್ ಜೋನ್ ಎಂದು ಪರಿಗಣಿಸಲು ರಾಜ್ಯ ಸರ್ಕಾರ ಸೂಚನೆ ನೀಡಿದೆ. ಕಂಟೇನ್ಮೆಂಟ್ ಪ್ರದೇಶಗಳನ್ನ ಜಿಲ್ಲಾಡಳಿತಗಳು ನಿಗದಿಪಡಿಸಬೇಕು. ಕಂಟೇನ್ಮೆಂಟ್ ಜೋನ್ಗಳಲ್ಲಿ ಆರೋಗ್ಯ ಸೇತು ಆ್ಯಪ್ ಕಡ್ಡಾಯವಾಗಿದೆ. ಕಂಟೇನ್ಮೆಂಟ್ ಜೋನ್ಗಳಲ್ಲಿ ಸಂಪರ್ಕಿತರ ಕುರಿತು ನಿಗಾ ಇಡಲಾಗುತ್ತೆ. ಈ ಪ್ರದೇಶಗಳಿಗೆ ಒಳ ಹೋಗಲು ಅಥವಾ ಹೊರ ಬರಲು ಅವಕಾಶವಿಲ್ಲ.
ಎಲ್ಲಾ ಜೋನ್ಗಳಲ್ಲಿ ಆಸ್ಪತ್ರೆಗಳ ಒಪಿಡಿಗೆ ಅನುಮತಿ:
ಎಲ್ಲಾ ಜೋನ್ಗಳಲ್ಲಿ ಆಸ್ಪತ್ರೆಗಳ ಒಪಿಡಿಗೆ ಅನುಮತಿ. ಆದ್ರೆ ಕಂಟೇನ್ಮೆಂಟ್ ಜೋನ್ಗಳಲ್ಲಿ ಒಪಿಡಿಗೆ ಅನುಮತಿ ಇಲ್ಲ. ಕೇಂದ್ರ ಗೃಹ ಇಲಾಖೆ ಅನುಮತಿ ಇದ್ದರೆ ಸಾರಿಗೆಗೆ ಅನುಮತಿ ನೀಡಲಾಗುವುದು. ಬಸ್, ವಿಮಾನ, ರೈಲು ಸಂಚಾರಕ್ಕೆ ಅನುಮತಿ ಅತ್ಯಗತ್ಯ. ಆದ್ರೆ, ಆಟೋ ರಿಕ್ಷಾ, ಟ್ಯಾಕ್ಸಿ, ಕ್ಯಾಬ್, ಸಲೂನ್ಗಳು ಬಂದ್ ಆಗಲಿವೆ.
ಅಗತ್ಯವಲ್ಲದ ಉದ್ದೇಶಕ್ಕೆ ಸಾರ್ವಜನಿಕರ ಓಡಾಟ ನಿರ್ಬಂಧ:
ಅಗತ್ಯವಲ್ಲದ ಉದ್ದೇಶಕ್ಕೆ ರಾತ್ರಿ 7 ರಿಂದ ಬೆಳಗ್ಗೆ 7 ಗಂಟೆಯವರೆಗೆ ಸಾರ್ವಜನಿಕರು ಓಡಾಡುವಂತಿಲ್ಲ. 65 ವರ್ಷ ಮೇಲ್ಪಟ್ಟವರು, ಮಕ್ಕಳಿಗೆ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ವೃದ್ಧರು, ಗರ್ಭಿಣಿಯರು, ಮಕ್ಕಳು ಮನೆಯಲ್ಲಿಯೇ ಇರಬೇಕು. ಆರೋಗ್ಯ ಸಮಸ್ಯೆ ಇದ್ದರೆ ಆಸ್ಪತ್ರೆಗೆ ಹೋಗಲು ಅನುಮತಿ ನೀಡಲಾಗಿದೆ.
Published On - 3:14 pm, Sat, 2 May 20