ಬೆಂಗಳೂರು: ಕೊರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಕಾರಣ ಹಾಗೂ ಸೋಂಕನ್ನು ನಿಯಂತ್ರಿಸುವ ಅನಿವಾರ್ಯತೆ ಇರುವುದರಿಂದ ಕಠಿಣ ಮಾರ್ಗಸೂಚಿಯನ್ನು ಸರ್ಕಾರ ಜಾರಿಗೊಳಿಸಿದೆ. 10ನೇ ತಾರೀಕಿನಿಂದ ಜಾರಿಯಲ್ಲಿರುವಂತೆ ಹೊಸ ನಿಯಮಾವಳಿಗಳನ್ನು ಸರ್ಕಾರ ರೂಪಿಸಿದೆ. ಇದೀಗ ಮದುವೆ ಸಮಾರಂಭಕ್ಕೆ ಸಂಬಂಧಿಸಿ ಹೊಸ ಗೈಡ್ಲೈನ್ ಪ್ರಕಟವಾಗಿದೆ. ಅದರನ್ವಯ ಬದಲಿಯಾದ ನಿಯಮಾವಳಿಗಳು ಈ ಕೆಳಗಿನಂತಿದೆ.
ಲಾಕ್‌ಡೌನ್ ವೇಳೆ ಮದುವೆಗೆ 40 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಮದುವೆಗೆ ಹಾಜರಾಗುವವರಿಗೆ ಪಾಸ್ ಫಿಕ್ಸ್ ಮಾಡಿ ಆದೇಶ ಹೊರಡಿಸಲಾಗಿದೆ. ಮದುವೆ ಸಮಾರಂಭವನ್ನು ಅವರ ಮನೆಗಳಲ್ಲೇ ಮಾಡಬೇಕು ಎಂದು ಸೂಚಿಸಲಾಗಿದೆ. ಮದುವೆ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ ತೋರಿಸಿ ಅಧಿಕಾರಿಗಳ ಅನುಮತಿ ಅಗತ್ಯವಾಗಿದೆ. ಬಿಬಿಎಂಪಿ ಅಥವಾ ತಹಶೀಲ್ದಾರ್‌ಗಳಿಂದ ಪಾಸ್ ಪಡೆದಿರಬೇಕು ಎಂದು ತಿಳಿಸಲಾಗಿದೆ.
ಮದುವೆಯಲ್ಲಿ ಭಾಗಿಯಾಗುವ 40 ಅತಿಥಿಗಳಿಗೂ ಪಾಸ್ ನೀಡಬೇಕು. ಪಾಸ್ ಹೊಂದಿರುವವರಿಗೆ ಮಾತ್ರವೇ ಮದುವೆಗೆ ಪ್ರವೇಶ. ಷರತ್ತು ಉಲ್ಲಂಘಿಸಿದ್ರೆ ಮದುವೆ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಮದುವೆ ಸಮಾರಂಭಕ್ಕೆ ಇನ್ನಷ್ಟು ಷರತ್ತು ಹೇರಿದೆ. ಜೊತೆಗೆ ಯಾವುದೇ ಕಾರಣಕ್ಕೂ ಪಾಸ್ ವರ್ಗಾಯಿಸುವಂತಿಲ್ಲ. ಪಾಸ್ ವರ್ಗಾಯಿಸಿದ್ರೆ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಕಟ್ಟುನಿಟ್ಟಿನ ಕ್ರಮ ಅಗತ್ಯ
ಸೂಕ್ತ ಮತ್ತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೆ ಕೊವಿಡ್-19 ಸೋಂಕಿನ ಮೂರನೇ ಅಲೆಯನ್ನು ದೇಶದ ಎಲ್ಲಾ ಕಡೆ ಎದುರಿಸುವ ಪರಿಸ್ಥಿತಿ ಬರುವುದಿಲ್ಲ ಅಥವಾ ಎಲ್ಲೂ ಕೂಡ ಮೂರನೇ ಅಲೆ ಉಂಟಾಗದು. ಸ್ಥಳೀಯ ಮಟ್ಟದಲ್ಲಿ, ಜಿಲ್ಲೆಗಳಲ್ಲಿ, ರಾಜ್ಯಗಳಲ್ಲಿ ಹಾಗೂ ನಗರ ಸೇರಿದಂತೆ ಎಲ್ಲಾ ಕಡೆ ಎಷ್ಟು ಪರಿಣಾಮಕಾರಿಯಾಗಿ ಕೊರೊನಾ ವಿರುದ್ಧದ ನಿಯಮಾವಳಿಗಳನ್ನು ಅನುಸರಿಸಲು ಸಾಧ್ಯವಾಗುತ್ತದೆ ಎಂಬುದರ ಮೇಲೆ ಮೂರನೇ ಅಲೆಯ ಪ್ರಭಾವ, ಪರಿಣಾಮ ಅವಲಂಬಿತವಾಗಿದೆ ಎಂದು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯ ರಾಘವನ್ ನಿನ್ನೆ (ಮೇ 7) ಸಲಹೆ ಕೊಟ್ಟಿದ್ದಾರೆ.
ಈಗಿರುವ ರೂಪಾಂತರಿ ಕೊರೊನಾ ವಿರುದ್ಧ ಹೋರಾಡಲು ಲಸಿಕೆಯು ಸಾಮರ್ಥ್ಯ ಹೊಂದಿದೆ. ದೇಶದ ಹಾಗೂ ವಿಶ್ವದ ವಿಜ್ಞಾನಿಗಳು ರೂಪಾಂತರಿ ಕೊರೊನಾ ವಿರುದ್ಧ ಹೋರಾಡಲು ಲಸಿಕೆ ಸಂಶೋಧನೆ ನಡೆಸುತ್ತಿದ್ದಾರೆ ಎಂದು ವಿಜಯ ರಾಘವನ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ನಾವು ಕೊರೊನಾ ಸೋಂಕಿನ ವಿರುದ್ಧ ಒಗ್ಗಟ್ಟಾಗಿ ಹೋರಾಡುವುದು, ನಿಯಮಾವಳಿಗಳನ್ನು ಪಾಲಿಸುವುದು ಅಗತ್ಯವಾಗಿದೆ. ಎಲ್ಲರ ಸಹಕಾರದಿಂದ ಮಾತ್ರ ಈ ಸಾಂಕ್ರಾಮಿಕವನ್ನು ಹೊಡೆದೋಡಿಸಲು ಸಾಧ್ಯ ಎಂದು ಮರೆಯದೇ ವ್ಯವಹರಿಸಬೇಕಾಗಿದೆ.
ಇದನ್ನೂ ಓದಿ: ಲಾಕ್‌ಡೌನ್ ನಿಯಮ ಜಾರಿಗೊಳಿಸಲು ಪೊಲೀಸರಿಗೆ ಸಂಪೂರ್ಣ ಅಧಿಕಾರ; ಸುಖಾಸುಮ್ಮನೆ ಬೀದಿಗಿಳಿಯುವಂತಿಲ್ಲ
Published On - 10:33 pm, Sat, 8 May 21