ಲಾಕ್​ಡೌನ್ ಯಶಸ್ವಿಗೊಳಿಸಲು, ಕೊರೊನಾ ಸೋಂಕಿತರಿಗೆ ಸಹಾಯ ಮಾಡಲು ನಾವು ಸಿದ್ಧ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೇಳಿಕೆ

ಆಸ್ಪತ್ರೆಗೆ ಬರಲೇಬೇಕು ಎಂದು ಡಾಕ್ಟರ್ ಸೂಚಿಸಿದರೆ ಮಾತ್ರ ನಮ್ಮ ಬೂತ್ ಮಟ್ಟದ ಕಾರ್ಯಕರ್ತರು ಸಹಾಯ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಿಧಾನಸೌಧದಲ್ಲಿ ಇಂದು (ಮೇ 8) ಹೇಳಿಕೆ ನೀಡಿದ್ದಾರೆ.

ಲಾಕ್​ಡೌನ್ ಯಶಸ್ವಿಗೊಳಿಸಲು, ಕೊರೊನಾ ಸೋಂಕಿತರಿಗೆ ಸಹಾಯ ಮಾಡಲು ನಾವು ಸಿದ್ಧ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೇಳಿಕೆ
ರವಿಕುಮಾರ್

ಬೆಂಗಳೂರು: ಲಾಕ್​ಡೌನ್ ಯಶಸ್ವಿಗೊಳಿಸಲು ನಾವು ಪಕ್ಷದಿಂದ ಜಿಲ್ಲೆಗಳಲ್ಲಿ ಆನ್​ಲೈನ್ ಮೂಲಕ ಚರ್ಚೆ ನಡೆಸುತ್ತೇವೆ. ಒಂದು ಕುಟುಂಬದಲ್ಲಿ ಎಲ್ಲರಿಗೂ ಕೊವಿಡ್ ಬಂದಿರುತ್ತದೆ. ಅಂಥವರಿಗೆ ಪೂರ್ಣ ಆಹಾರ ನೀಡುತ್ತೇವೆ. ಆಸ್ಪತ್ರೆಗೆ ಬರಲೇಬೇಕು ಎಂದು ಡಾಕ್ಟರ್ ಸೂಚಿಸಿದರೆ ಮಾತ್ರ ನಮ್ಮ ಬೂತ್ ಮಟ್ಟದ ಕಾರ್ಯಕರ್ತರು ಸಹಾಯ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಿಧಾನಸೌಧದಲ್ಲಿ ಇಂದು (ಮೇ 8) ಹೇಳಿಕೆ ನೀಡಿದ್ದಾರೆ.

ಲಸಿಕೆ ನೀಡುವುದಕ್ಕೆ ಬಹಳ ಶಿಸ್ತು ಬದ್ದವಾಗಿ ನಮ್ಮ ಕಾರ್ಯಕರ್ತರು ಕೆಲಸ ಮಾಡುತ್ತಾರೆ ಎಂದೂ ಈ ವೇಳೆ ರವಿಕುಮಾರ್ ಹೇಳಿದ್ದಾರೆ. ಕಾಂಗ್ರೆಸ್​ನವರಿಗೆ ಟೀಕೆ ಮಾಡುವುದೇ ಕೆಲಸ. ಅವರು ಏನೂ ಕೆಲಸ ಮಾಡಿಲ್ಲ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರು ಫುಲ್ ಬ್ಯುಸಿ ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ನಿಮ್ಮ ಮಹಾರಾಷ್ಟ್ರ ಸರ್ಕಾರ ಯಾವ ಪ್ಯಾಕೇಜ್ ಕೊಟ್ಟಿದೆ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.

ಬೆಂಗಳೂರಿನಿಂದ ರಾಜ್ಯದ ಗ್ರಾಮೀಣ ಭಾಗಗಳತ್ತ ಮುಖ ಮಾಡಿದ ಕೊರೊನಾ
ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾದ ನಂತರ ಏಪ್ರಿಲ್ ಮಧ್ಯ ಭಾಗದಲ್ಲಿ ರಾಜಧಾನಿ ಬೆಂಗಳೂರು ನಗರ ಇಡೀ ರಾಜ್ಯದ ಒಟ್ಟು ಪ್ರಕರಣಗಳ ಶೇ.70ರಷ್ಟು ಪಾಲನ್ನು ಹೊಂದಿತ್ತು. ಹೀಗಾಗಿ ಉಳಿದೆಲ್ಲಾ ಜಿಲ್ಲೆಗಳಿಗಿಂತಲೂ ಬೆಂಗಳೂರು ಅತಿ ಹೆಚ್ಚು ಅಪಾಯದಲ್ಲಿದೆ ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ಈಗ ರಾಜ್ಯದ ಉಳಿದ ಜಿಲ್ಲೆಗಳ ಒಟ್ಟು ಪ್ರಕರಣಗಳ ಪ್ರಮಾಣ ಬೆಂಗಳೂರನ್ನು ಮೀರಿಸುವ ಮೂಲಕ ಅಪಾಯ ಇಡೀ ರಾಜ್ಯಕ್ಕೂ ವಿಸ್ತರಿಸಿದೆ. ಮೇ.6ರ ಅಂತ್ಯಕ್ಕೆ ಉಳಿದ ಜಿಲ್ಲೆಗಳು ರಾಜ್ಯದ ಸೋಂಕಿತರ ಒಟ್ಟು ಪ್ರಮಾಣದ ಶೇ.52ರಷ್ಟು ಪಾಲನ್ನು ಹೊಂದಿದ್ದು ನಿನ್ನೆ (ಮೇ.7) ವೇಳೆಗೆ ಅದು ಶೇ.56ಕ್ಕೆ ಏರಿಕೆಯಾಗಿದೆ. ಆ ಮೂಲಕ ರಾಜ್ಯದ ಇತರ ಜಿಲ್ಲೆಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಕೊರೊನಾ ಸೋಂಕು ಉಲ್ಬಣಿಸಲಾರಂಭಿಸಿದೆ.

ರಾಜ್ಯದ ಸುಮಾರು 10 ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಗಣನೀಯ ಏರಿಕೆ ಕಾಣಲಾರಂಭಿಸಿದ್ದು, ಮೈಸೂರು, ತುಮಕೂರು, ಕಲಬುರಗಿ ದೊಡ್ಡ ಮಟ್ಟದಲ್ಲಿ ಸೋಂಕು ಹೆಚ್ಚಳಕ್ಕೆ ಸಾಕ್ಷಿಯಾಗುತ್ತಿವೆ. ನಿರ್ವಹಣೆಯ ವಿಚಾರದಲ್ಲಿ ಈ ಬೆಳವಣಿಗೆ ಆತಂಕ ಸೃಷ್ಟಿಸಿದ್ದು ತಾಂತ್ರಿಕ ಸಲಹಾ ಸಮಿತಿಯ ಕೆಲ ಸದಸ್ಯರೇ ಹೇಳುವ ಪ್ರಕಾರ ಬೇರೆ ಜಿಲ್ಲೆಗಳಲ್ಲಿ ಸಮರ್ಪಕ ವೈದ್ಯಕೀಯ ವ್ಯವಸ್ಥೆ ಇಲ್ಲದ ಕಾರಣ ಸೋಂಕು ನಿಯಂತ್ರಣ ತಪ್ಪಿದರೆ ಬೆಂಗಳೂರಿಗಿಂತಲೂ ಕಷ್ಟದ ಪರಿಸ್ಥಿತಿಯನ್ನು ಉಳಿದ ಜಿಲ್ಲೆಗಳು ಎದುರಿಸಬೇಕಿದೆ. ಹೀಗಾಗಿ ಸ್ಥಳೀಯ ಮಟ್ಟದಲ್ಲಿ ಕೊರೊನಾ ವಿರುದ್ಧ ಜಾಗೃತಿ ಸದ್ಯದ ಅಗತ್ಯವಾಗಿದೆ.

ಇದನ್ನೂ ಓದಿ: ಎಲ್ಲೂ ಬೆಡ್ ಸಿಗದೆ ಮುಖ್ಯಮಂತ್ರಿ ನಿವಾಸದ ಬಳಿಗೆ ಆಗಮಿಸಿದ ಕೊರೊನಾ ಸೋಂಕಿತ; ಘಟನೆ ಬಳಿಕ ಕುಮಾರಕೃಪಾ ರಸ್ತೆ ಬಂದ್

2 ಸಿಂಹಗಳಿಗೆ ಕೊರೊನಾ ಸೋಂಕು ಧೃಡ; ಉತ್ತರ ಪ್ರದೇಶದ ಇಟಾವಾ ಸಫಾರಿ ಪಾರ್ಕ್‌ನಲ್ಲಿ ಆತಂಕ