ಎಲ್ಲೂ ಬೆಡ್ ಸಿಗದೆ ಮುಖ್ಯಮಂತ್ರಿ ನಿವಾಸದ ಬಳಿಗೆ ಆಗಮಿಸಿದ ಕೊರೊನಾ ಸೋಂಕಿತ; ಘಟನೆ ಬಳಿಕ ಕುಮಾರಕೃಪಾ ರಸ್ತೆ ಬಂದ್
ಬೆಳಗ್ಗೆಯಿಂದ ಸುಮಾರು 15 ಆಸ್ಪತ್ರೆಗಳಿಗೆ ಸುತ್ತಾಡಿದ್ದ ಕೊರೊನಾ ಸೋಂಕಿತ ಎಲ್ಲೂ ಬೆಡ್ ಸಿಗದ ಹಿನ್ನೆಲೆಯಲ್ಲಿ ಆಟೋದಲ್ಲಿ ಮುಖ್ಯಮಂತ್ರಿ ನಿವಾಸದ ಬಳಿ ಆಗಮಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದು ಕಂಡುಬರುತ್ತಿದೆ. ದಿನೇದಿನೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಹಲವಾರು ಮಂದಿ ಸೋಂಕಿತರಿಗೆ ವೈದ್ಯಕೀಯ ಆಮ್ಲಜನಕ, ಆಸ್ಪತ್ರೆಯ ಹಾಸಿಗೆ ಸೌಲಭ್ಯಗಳು ಸಿಗದೇ ಪರದಾಟವಾಗುತ್ತಿದೆ. ಸಮರ್ಪಕ ರೀತಿಯಲ್ಲಿ ಪಿಡುಗನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಗುತ್ತಿದೆ. ಜನಸಾಮಾನ್ಯರು ಈ ಸಮಸ್ಯೆಗಳಿಗೆ ನೇರವಾಗಿ ತುತ್ತಾಗುತ್ತಿದ್ದಾರೆ. ಅಂಥದ್ದೇ ಒಂದು ಮನಕಲಕುವ ಘಟನೆ ಇಂದು ನಡೆದಿದೆ.
ಬೆಳಗ್ಗೆಯಿಂದ ಸುಮಾರು 15 ಆಸ್ಪತ್ರೆಗಳಿಗೆ ಸುತ್ತಾಡಿದ್ದ ಕೊರೊನಾ ಸೋಂಕಿತ ಎಲ್ಲೂ ಬೆಡ್ ಸಿಗದ ಹಿನ್ನೆಲೆಯಲ್ಲಿ ಆಟೋದಲ್ಲಿ ಮುಖ್ಯಮಂತ್ರಿ ನಿವಾಸದ ಬಳಿ ಆಗಮಿಸಿದ್ದಾರೆ. ಆತನ ಕುಟುಂಬದವರು ಸೋಂಕಿತನನ್ನು ಸಿಎಂ ಅಧಿಕೃತ ನಿವಾಸದ ಬಳಿಗೆ ಕರೆತಂದಿದ್ದಾರೆ. ಬಳಿಕ, ಅಲ್ಲಿದ್ದ ಪೊಲೀಸರು ಸೋಂಕಿತನ ಕುಟುಂಬವನ್ನು ಬಿಬಿಎಂಪಿ ವಾರ್ ರೂಮ್ನತ್ತ ಕಳುಹಿಸಿಕೊಟ್ಟಿದ್ದಾರೆ.
ಮುಖ್ಯಮಂತ್ರಿ ನಿವಾಸದ ಬಳಿಗೆ ಬಂದ ಕುಟುಂಬದವರು 15 ಆಸ್ಪತ್ರೆ ಸುತ್ತಿದರೂ ಸಾಮಾನ್ಯ ಬೆಡ್ ಕೂಡ ಸಿಗಲಿಲ್ಲ ಎಂದು ಕುಟುಂಬದವರು ಅಳಲು ತೋಡಿಕೊಂಡಿದ್ದಾರೆ. ಯಾವುದೇ ಬೆಡ್ ವ್ಯವಸ್ಥೆ ಮಾಡದೇ ಏಕಾಏಕಿ ವಾರ್ ರೂಮ್ ಕಡೆಗೆ ಕಳುಹಿಸಿದ ಕ್ರಮಕ್ಕೆ ಸ್ಥಳದಲ್ಲಿದ್ದ ಮಾಧ್ಯಮದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪೊಲೀಸರು ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿಗಳ ನಿವಾಸದ ಬಳಿ ಸೋಂಕಿತನನ್ನು ಕರೆತಂದಿದ್ದ ವಿಚಾರಕ್ಕೆ ಸಂಬಂಧಿಸಿ ಕುಮಾರಕೃಪಾ ರಸ್ತೆಯನ್ನು ಪೊಲೀಸರು ಮತ್ತೆ ಬಂದ್ ಮಾಡಿದ್ದಾರೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಮತ್ತು ಗೃಹ ಕಚೇರಿ ಇರುವ ಕುಮಾರಕೃಪಾ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಿದ್ದಾರೆ. ಶಿವಾನಂದ ವೃತ್ತದಿಂದ ವಿಂಡ್ಸರ್ ಸ್ಕ್ವೇರ್‌ವರೆಗೂ ಬ್ಯಾರಿಕೇಡ್ ಅಳವಡಿಸಲಾಗಿದೆ.
ಇದನ್ನೂ ಓದಿ: ಟೀಂ ಇಂಡಿಯಾದ ಯುವ ವೇಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಕೊರೊನಾ ಪಾಸಿಟಿವ್; ಸೋಂಕಿಗೆ ತುತ್ತಾದ 6ನೇ ಐಪಿಎಲ್ ಆಟಗಾರ
ಬೆಂಗಳೂರಿನಿಂದ ರಾಜ್ಯದ ಗ್ರಾಮೀಣ ಭಾಗಗಳತ್ತ ಮುಖ ಮಾಡಿದ ಕೊರೊನಾ; ಸೋಂಕು ನಿಯಂತ್ರಣದ ಬಗ್ಗೆ ತಜ್ಞರ ಆತಂಕ
Published On - 3:22 pm, Sat, 8 May 21