ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ನೆರವಾಗುವ ಸಲುವಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ (Bengaluru-Mysuru Expressway) ‘ಸೇವ್ ಅವರ್ ಸೋಲ್’ (SOS) ಬಾಕ್ಸ್‌ಗಳನ್ನು ಅಳವಡಿಸಿದೆ. ಇವು ಸಣ್ಣ ಕಿಯೋಸ್ಕ್‌ಗಳಾಗಿದ್ದು ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ಸಹಾಯ ಮಾಡುತ್ತವೆ. ಅವು ಸ್ಥಳೀಯ ಅಧಿಕಾರಿಗಳೊಂದಿಗೆ ನೇರ ಸಂವಹನ ಸಾಧಿಸಲು ನೆರವಾಗುತ್ತವೆ. ಎಸ್‌ಒಎಸ್ ಬಾಕ್ಸ್ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ? ಹೆದ್ದಾರಿಯಲ್ಲಿ ವಾಹನ ಸವಾರರು ಅದನ್ನು ಬಳಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಸಣ್ಣ ಹಳದಿ ಬಣ್ಣದ ವಿಶಿಷ್ಟವಾದ ಕಿಯೋಸ್ಕ್‌ಗಳನ್ನು ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ಅಲ್ಲಲ್ಲಿ ಕಂಬಗಳಲ್ಲಿ ಇರಿಸಲಾಗಿದೆ. ಸುಲಭವಾಗಿ ಗುರುತಿಸುವುದಕ್ಕಾಗಿ ಅವುಗಳನ್ನು ಜೋಡಿಸಿರುವ ಪೆಟ್ಟಿಗೆಗಳ ಮೇಲ್ಭಾಗದಲ್ಲಿ ಎಸ್‌ಒಎಸ್ ಎಂದು ಬರೆದಿರುತ್ತದೆ.
ಸೌರಶಕ್ತಿ ಆಧಾರಿತ ಧ್ವನಿ ಸಂವಹನ ಘಟಕ ಹಾಗೂ ಜಿಪಿಎಸ್ ಯೂನಿಟ್ ಒಂದು ಈ ಎಸ್‌ಒಎಸ್ ಬಾಕ್ಸ್ನಲ್ಲಿ ಇರುತ್ತದೆ. ಇದು, ಪ್ರಯಾಣಿಕರು ತುರ್ತು ಸಂದರ್ಭಗಳಲ್ಲಿ ತಕ್ಷಣದ ಸಹಾಯವನ್ನು ಪಡೆಯಲು ಸಹಾಯ ಮಾಡಲಿದೆ.
ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಸುವವರಿಗೆ ತುರ್ತು ಪರಿಸ್ಥಿತಿ ಎದುರಾದಾಗ, ಅವರು ಎಸ್‌ಒಎಸ್ ಬಾಕ್ಸ್ ಬಳಿ ವಾಹನ ನಿಲ್ಲಿಸಿ ಅದರಲ್ಲಿರುವ ತುರ್ತು ಗುಂಡಿಯನ್ನು ಒತ್ತಬೇಕು. ತಕ್ಷಣ, ಈ ವ್ಯವಸ್ಥೆಯು ಸಂಕಷ್ಟದಲ್ಲಿರುವ ವ್ಯಕ್ತಿಯನ್ನು ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿರುವ ಕಾಲ್ ಸೆಂಟರ್‌ಗೆ ಸಂಪರ್ಕಿಸುತ್ತದೆ.
ಈ ವ್ಯವಸ್ಥೆಯು ನಿಯಂತ್ರಣ ಕೊಠಡಿಗಳು, ಆ್ಯಂಬುಲೆನ್ಸ್‌ಗಳು ಮತ್ತು ಸಮೀಪದಲ್ಲಿ ಗಸ್ತು ತಿರುಗುವ ಪೊಲೀಸ್ ವಾಹನಗಳನ್ನು ಎಚ್ಚರಿಸುತ್ತದೆ. ಪ್ರತಿಯೊಂದು ಸಾಧನವು ತಕ್ಷಣದ ಗುರುತಿಸುವಿಕೆಗೆ ಸಹಾಯ ಮಾಡಲು ವಿಶಿಷ್ಟ ಸಂಖ್ಯೆಯನ್ನು ಹೊಂದಿದೆ. ಇದು ಕಡಿಮೆ ಇಂಟರ್ನೆಟ್ ಇದ್ದಾಗಲೂ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಯಾರಿಗಾದರೂ ತುರ್ತು ಸೇವೆಯ ಅಗತ್ಯವಿರುವಾಗ, ಆದರೆ ಕಡಿಮೆ ನೆಟ್‌ವರ್ಕ್ ಹೊಂದಿರುವಾಗಲೂ ಇದು ಉಪಯುಕ್ತವಾಗಿರುತ್ತದೆ ಎಂದು ‘ನ್ಯೂಸ್ 9’ ವರದಿ ಮಾಡಿದೆ.
ಇದನ್ನೂ ಓದಿ: Mysuru Bengaluru Expressway: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಸಣ್ಣ ವಾಹನಗಳ ನಿಷೇಧ ಸಮರ್ಥಿಸಿದ ಅಲೋಕ್ ಕುಮಾರ್
ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಸ್‌ಒಎಸ್ ಬಾಕ್ಸ್ ಸಾಧನಗಳನ್ನು ಅಳವಡಿಸಲಾಗಿದೆ. ಆಗಸ್ಟ್ 1 ರಿಂದ ಎಕ್ಸ್‌ಪ್ರೆಸ್‌ವೇ ಮುಖ್ಯ ಲೇನ್‌ಗಳಲ್ಲಿ ಮೋಟಾರ್‌ಸೈಕಲ್‌ಗಳು, ಆಟೋರಿಕ್ಷಾಗಳು, ಟ್ರಾಕ್ಟರ್‌ಗಳು, ಮಲ್ಟಿ-ಆಕ್ಸಲ್ ಹೈಡ್ರಾಲಿಕ್ ವಾಹನಗಳು ಮತ್ತು ಮೋಟಾರುರಹಿತ ವಾಹನಗಳನ್ನು ಅನುಮತಿಸಲಾಗುವುದಿಲ್ಲ ಎಂದು ಇತ್ತೀಚಿನ ಅಧಿಸೂಚನೆಯಲ್ಲಿ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ