ಗೋಹತ್ಯೆ ನಿಷೇಧ ಕಾನೂನು ರದ್ದುಗೊಳಿಸುವ ಪ್ರಸ್ತಾವವಿಲ್ಲ; ಪರಿಷತ್​​​ನಲ್ಲಿ ಸಚಿವ ಕೆ ವೆಂಕಟೇಶ್​ ಸ್ಪಷ್ಟನೆ

ವೆಂಕಟೇಶ್ ಅವರ ಹೇಳಿಕೆಯ ಹೊರತಾಗಿಯೂ, ಬಿಜೆಪಿ ಎಂಎಲ್ಸಿಗಳು ಪ್ರತಿಭಟನೆ ನಡೆಸಿದ್ದಾರೆ. ಭವಿಷ್ಯದಲ್ಲಿ ಕಾನೂನನ್ನು ಏನು ಮಾಡಲು ಕಾಂಗ್ರೆಸ್ ಸರ್ಕಾರ ಯೋಜಿಸುತ್ತಿದೆ ಎಂಬುದರ ಕುರಿತು ಹೆಚ್ಚಿನ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಎಂಎಲ್ಸಿಗಳು ಒತ್ತಾಯಿಸಿದ್ದಾರೆ.

ಗೋಹತ್ಯೆ ನಿಷೇಧ ಕಾನೂನು ರದ್ದುಗೊಳಿಸುವ ಪ್ರಸ್ತಾವವಿಲ್ಲ; ಪರಿಷತ್​​​ನಲ್ಲಿ ಸಚಿವ ಕೆ ವೆಂಕಟೇಶ್​ ಸ್ಪಷ್ಟನೆ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:Jul 05, 2023 | 10:13 PM

ಬೆಂಗಳೂರು: ಗೋಹತ್ಯೆ ನಿಷೇಧ ಕಾನೂನನ್ನು ರದ್ದುಗೊಳಿಸುವ (Anti-Cow Slaughter Law) ಯಾವುದೇ ಪ್ರಸ್ತಾವ ಕರ್ನಾಟಕ ಸರ್ಕಾರದ ಮುಂದಿಲ್ಲ ಎಂದು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ (K Venkatesh) ಬುಧವಾರ ವಿಧಾನ ಪರಿಷತ್ತಿಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಗೋಹತ್ಯೆ ನಿಷೇಧ ಕಾನೂನಿನ ರದ್ದತಿ ಕುರಿತು ಸಚಿವರು ನೀಡಿದ ಸ್ಪಷ್ಟನೆ ಆ ಕುರಿತ ಕಾಂಗ್ರೆಸ್ ನಿಲುವಿಗೆ ಹೊಂದಿಕೆಯಾಗುವುದಿಲ್ಲ. ಹೀಗಾಗಿ ಸಚಿವರ ಉತ್ತರದ ಬಗ್ಗೆ ಬಿಜೆಪಿ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಕ್ರಮ ಗೋಸಾಗಾಟ ಮಾಡುವವರ ವಿರುದ್ಧ ಕ್ರಮಕೈಗೊಂಡಿಲ್ಲ. ಗೋ ಸಂರಕ್ಷಣೆ ವಿಧೇಯಕ ಹಿಂಪಡೆಯುವ ಬಗ್ಗೆ ಸ್ಪಷ್ಟಪಡಿಸಲಿ ಎಂದು ಬಿಜೆಪಿ ಎಂಎಲ್​ಸಿ ಎನ್ ರವಿಕುಮಾರ್ ಆಗ್ರಹಿಸಿದ್ದರು. ಇದಕ್ಕೆ ಉತ್ತರಿಸಿದ ಸಚಿವರು, ‘ಕರ್ನಾಟಕ ವಧೆ ತಡೆ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ’ಯನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಹೇಳಿದ್ದಾರೆ. ಕಾಯ್ದೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಕಾಯ್ದೆಯು 2021ರಲ್ಲಿ ಜಾರಿಗೆ ಬಂದಿದ್ದು, ಉಲ್ಲಂಘನೆಗಾಗಿ ಕಠಿಣ ದಂಡ ವಿಧಿಸಲಾಗುತ್ತಿದೆ. ಈ ಕಾಯ್ದೆ ಜಾರಿಗೆ ಬಂದ ನಂತರ ಜಾನುವಾರು ಹತ್ಯೆ ನಿಷೇಧಿಸಲ್ಪಟ್ಟಿದೆ. 13 ವರ್ಷ ಮೇಲ್ಪಟ್ಟ ತೀವ್ರತರದ ಅನಾರೋಗ್ಯದ ದನ ಮತ್ತು ಎಮ್ಮೆಗಳ ಹತ್ಯೆಗೆ ಮಾತ್ರ ಅನುಮತಿಸಲಾಗಿದೆ.

ವೆಂಕಟೇಶ್ ಅವರ ಹೇಳಿಕೆಯ ಹೊರತಾಗಿಯೂ, ಬಿಜೆಪಿ ಎಂಎಲ್ಸಿಗಳು ಪ್ರತಿಭಟನೆ ನಡೆಸಿದ್ದಾರೆ. ಭವಿಷ್ಯದಲ್ಲಿ ಕಾನೂನನ್ನು ಏನು ಮಾಡಲು ಕಾಂಗ್ರೆಸ್ ಸರ್ಕಾರ ಯೋಜಿಸುತ್ತಿದೆ ಎಂಬುದರ ಕುರಿತು ಹೆಚ್ಚಿನ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಎಂಎಲ್ಸಿಗಳು ಒತ್ತಾಯಿಸಿದ್ದಾರೆ. ಗೋಹತ್ಯೆ ತಡೆಯಲು ಹಾಗೂ ಗೋವುಗಳನ್ನು ಕೊಂದು ಅಕ್ರಮವಾಗಿ ಸಾಗಿಸುವವರಿಗೆ ಶಿಕ್ಷೆ ವಿಧಿಸಲು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ಹಿಂದಿನ ಸರ್ಕಾರ ಜಾರಿಗೆ ತಂದ ತಿದ್ದುಪಡಿಗಳನ್ನು ಸರ್ಕಾರ ರದ್ದುಗೊಳಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಲಿ’ ಎಂದು ಕುಮಾರ್ ಆಗ್ರಹಿಸಿದ್ದರು. ಇತ್ತೀಚೆಗೆ ಹಲವು ಜಾನುವಾರುಗಳನ್ನು ಹತ್ಯೆ ಮಾಡಲಾಗಿದೆ. ಆಗ ಸರ್ಕಾರ ಗೋವುಗಳಿಗೆ ರಕ್ಷಣೆ ನೀಡಲಿಲ್ಲ. ರಾಜ್ಯದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿತರಾಗಿರುವವರ ವಿವರವನ್ನು ಸಚಿವರು ನೀಡಲಿ ಎಂದು ರವಿಕುಮಾರ್ ಆಗ್ರಹಿಸಿದ್ದರು ಎಂಬುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಇದನ್ನೂ ಓದಿ: ಎಮ್ಮೆ, ಕೋಣ ಕಡಿದು ಹಾಕುವುದಾದ್ರೆ ಹಸು ಏಕೆ ಕಡಿಯಬಾರದು? ಸಚಿವ ಕೆ.ವೆಂಕಟೇಶ್​ ಪ್ರಶ್ನೆ

ಬಿಜೆಪಿ ನಾಯಕರ ಪ್ರತಿಭಟನೆಗೆ ತಿರುಗೇಟು ನೀಡಿದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಗೋಮಾಂಸ ರಫ್ತಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಬಿಜೆಪಿಯು ನಿಜವಾಗಿಯೂ ಗೋಹತ್ಯೆಯನ್ನು ವಿರೋಧಿಸಿದರೆ ಸಾವಿರಾರು ಟನ್ ಗೋಮಾಂಸ ಹೇಗೆ ರಫ್ತಾಗುತ್ತಿದೆ ಎಂಬುದನ್ನು ವಿವರಿಸಿ ಎಂದು ಬಿಜೆಪಿ ನಾಯಕರಿಗೆ ಸವಾಲೆಸೆದರು ಎಂದು ವರದಿ ಉಲ್ಲೇಖಿಸಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಗೋ ಹತ್ಯೆ ನಿಷೇಧ ಕಾನೂನನ್ನು ರದ್ದುಗೊಳಿಸುವ ಬಗ್ಗೆ ಚರ್ಚೆ ಆರಂಭವಾಗಿತ್ತು. ಎಮ್ಮೆ, ಕೋಣಗಳನ್ನು ಕಡಿಯಬಹುದಾದರೆ ಯಾಕೆ ಹಸುವಿನ ಹತ್ಯೆ ಮಾಡಬಾರದು ಎಂದು ಪಶುಸಂಗೋಪನಾ ಸಚಿವ ವೆಂಕಟೇಶ್ ಪ್ರಶ್ನಿಸಿದ್ದರು. ಇದು ತೀವ್ರ ವಿವಾದಕ್ಕೆ ಗ್ರಾಸವಾಗಿತ್ತು. ಸಚಿವರ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:11 pm, Wed, 5 July 23