ಬೀದರ್: ಎರಡು ರಾಜ್ಯದ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ಹಾವು ಕಡಿದು ಸಾವನಪ್ಪುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾವು ಕಚ್ಚಿದಾಗ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸಾಗಿಸದಿರುವುದು, ಔಷಧಿಯ ಕೊರತೆ ಹೀಗೆ ನಾನಾ ಕಾರಣದಿಂದ ವರ್ಷದಿಂದ ವರ್ಷಕ್ಕೆ ಸಾವಿನ ಸಂಖ್ಯೆ ಏರುತ್ತಲೇ ಇದೆ. ಸಾವಿನ ಸಂಖ್ಯೆ ತಗ್ಗಿಸಬೇಕಾದ ಆರೋಗ್ಯ ಇಲಾಖೆ ಕೂಡ ಕಂಡು ಕಾಣದಂತೆ ಕುಳಿತು ಬಿಟ್ಟಿದ್ದು, ಇದು ಸಹಜವಾಗಿಯೇ ರೈತ ವಲಯದಲ್ಲಿ ಆಂತಕ ಹೆಚ್ಚುವಂತೆ ಮಾಡಿದೆ.
ಔಷಧಿಯ ಕೊರತೆಯಿಂದ ಪ್ರತಿ ವರ್ಷ ಹಾವು ಕಡಿಸಿಕೊಂಡ ರೈತರು ಸಾವನ್ನಪ್ಪುತ್ತಿದ್ದು, ಸರ್ಕಾರ ಕೂಡ ಸಿಗುವ ಪರಿಹಾರವನ್ನು ಸರಿಯಾಗಿ ನೀಡುತ್ತಿಲ್ಲ. ಸದ್ಯ ಸರ್ಕಾರದ ಈ ನಿರ್ಲಕ್ಷ್ಯದ ವಿರುದ್ಧ ರೈತರು ತಿರುಗಿಬಿದ್ದಾರೆ. ಹೌದು ಗಡಿ ಜಿಲ್ಲೆ ಬೀದರ್ನಲ್ಲಿ ಪ್ರತಿ ವರ್ಷ ಹತ್ತಾರು ಜನರು ಹಾವು ಕಡಿತದಿಂದ ಸಾವನ್ನಪ್ಪುತ್ತಿದ್ದರೆ, ಇನ್ನೂ ಕೆಲವರು ಹಾವು ಕಡಿತದಿಂದ ಅಂಗಾಂಗಗಳನ್ನ ಊನ ಮಾಡಿಕೊಂಡು ತಮ್ಮ ಬದುಕಿನ ಬಂಡಿಯನ್ನ ಸಾಗಿಸುತ್ತಿದ್ದಾರೆ. ರಾಜ್ಯಕ್ಕೆ ಹೋಲಿಕೆ ಮಾಡಿದರೆ ಬೀದರ್ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಜನರು ಹಾವು ಕಡಿತದಿಂದ ಮರಣ ಹೊಂದಿದ್ದಾರೆ.
ಇದಕ್ಕೆ ಪ್ರಮುಖ ಕಾರಣ ಔಷಧಿಯ ಕೊರತೆಯ ಜೊತೆಗೆ ಇಲ್ಲಿನ ಜನರ ಮೂಢನಂಭಿಕೆಯ ದಾಸರಾಗಿರುವುದೂ ಆಗಿದೆ. ಕಳೆದ ಮೂರು ವರ್ಷದಲ್ಲಿ ಅಂದರೆ 2018 ರಲ್ಲಿ ಬೀದರ್ ಜಿಲ್ಲೆಯೊಂದರಲ್ಲಿ 177 ಜನರಿಗೆ ಹಾವು ಕಚ್ಚಿದ್ದರೆ 75 ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಸರಕಾರಿ ದಾಖಲೆ ಹೇಳುತ್ತದೆ. ಇನ್ನು ಈ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ. ಮದನಾ ವೈಜನಾಥರನ್ನು ಕೇಳಿದರೇ ಬೀದರ್ ಜಿಲ್ಲೆಯಲ್ಲಿ ಹಾವು ಕಡಿದ ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವ ಬದಲು ಜನತೆ ಮಾಟ, ಮಂತ್ರ ಮಾಡುವವರ ಬಳಿಗೆ ಹೋಗಿ ತಾಯತ ಹಾಕಿಸಿಕೊಳ್ಳುವ ಮೌಢ್ಯ ಇನ್ನೂ ಜಾರಿಯಲ್ಲಿರುವುದರಿಂದಲೂ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ ಎಂದು ತಿಳಿಸಿದ್ದಾರೆ.
ಅಲ್ಲದೆ, ರೋಗಿ ಸ್ಥೀತಿ ಗಂಭಿರವಾದ ಮೇಲೆ ಆಸ್ಪತ್ರೆಗೆ ಬರುತ್ತಾರೆ. ಆಗ ರೋಗಿಯು ಚಿಕಿತ್ಸೆಗೆ ಸ್ಪಂದಿಸುವುದಿಲ್ಲ. ಕೊನೆಯುಸಿರೆಳೆಯುತ್ತಾರೆ. ಹೀಗಾಗಿ, ಹಾವು ಕಡಿದ ಕೂಡಲೇ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂಬುದು ವೈದ್ಯರ ಸಲಹೆ. ಬೀದರ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಹಾವು ಕಡಿತಕ್ಕೆ ನೀಡಲಾಗುವ ಎಎಸ್‌ವಿ ಆ್ಯಂಟಿ ಬಯೋಟಿಕ್ ಸದ್ಯಕ್ಕೆ ಸ್ಟಾಕ್ ಇದೆ. ಔಷಧಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ. ಕೊರತೆಯೂ ಇಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ. ಮದನಾ ವೈಜನಾಥ ಹೇಳುತ್ತಿದ್ದಾರೆ.
ಕೃಷಿ ಕೆಲಸ ಮಾಡುವಾಗ, ಜಮೀನಿನಲ್ಲಿ ದನ ಮೇಯಿಸುವಾಗ, ಮೇವು ಕೀಳುವಾಗ ಹೀಗೆ ಕೃಷಿಗೆ ಸಂಬಂಧಪಟ್ಟ ವಿವಿಧ ಕೆಲಸಗಳನ್ನು ಮಾಡುತ್ತಿದ್ದಾಗ ಆಕಸ್ಮಿಕವಾಗಿ ಹಾವು ಕಡಿತಕ್ಕೆ ಬಲಿಯಾಗಿರುವವರು ಸಾವಿಗೀಡಾಗಿದ್ದು, 2020ರಲ್ಲಿ ಲಾಕ್ಡೌನ್ನಲ್ಲಿ ಹಾವು ಕಡಿತದಿಂದ ಮೃತಪಟ್ಟವರ ಪ್ರಮಾಣ ಹೆಚ್ಚಿದೆ. ಈ ಒಂದೇ ವರ್ಷದಲ್ಲಿ ಬರೋಬ್ಬರಿ 32 ಜನ ರೈತರು ಹಾವು ಕಡಿತಕ್ಕೆ ಬಲಿಯಾಗಿದ್ದಾರೆ. 2019 ರಲ್ಲಿ 25 ಜನರು ಹಾವು ಕಡಿತಕ್ಕೆ ಬಲಿಯಾಗಿದ್ದರೆ, 2020 ರಲ್ಲಿ 32 ರೈತರು ಹಾವು ಕಚ್ಚಿಸಿಕೊಂಡು ಮೃತಪಟ್ಟಿದ್ದಾರೆ, ಇನ್ನೂ 2021ರ ಜನವರಿ ಹಾಗೂ ಫೆಬ್ರುವರಿ ಎರಡು ತಿಂಗಳಲ್ಲಿಯೇ 17 ರೈತರು ಹಾವು ಕಡಿತಕ್ಕೆ ಜೀವ ತೆತ್ತಿದ್ದಾರೆ.
ಇದರಲ್ಲಿ ಕೆಲವು ರೈತರಿಗೆ ಸರ್ಕಾರದಿಂದ ಕೊಡುವ ಪರಿಹಾರ ಸಿಕ್ಕಿಲ್ಲ. ಸಾಮಾನ್ಯವಾಗಿ ವಿಷಜಂತುಗಳ ಕಡಿತಕ್ಕೆ ತುರ್ತಾಗಿ ಚಿಕಿತ್ಸೆ ಒದಗಿಸದಿದ್ದರೆ ಪ್ರಾಣಾಪಾಯ ಖಚಿತ. ಇಷ್ಟೆಲ್ಲ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಇಟ್ಟುಕೊಂಡು ಹಾವಿನ ಕಡಿತಕ್ಕೆ ನಮ್ಮಲ್ಲಿ ಔಷಧಿ ಸಿಗುತ್ತಿಲ್ಲ ಎಂದರೆ ಹೇಗೆ..? ಪುಣೆಯ ಸೆರಮ್ ಇನ್ಸ್‌ಟಿಟ್ಯೂಟ್, ಹೈದರಾಬಾದಿನ ವಿನ್ಸ್ ಬಯೋಟೆಕ್, ಮುಂಬೈಯ ಹಾಫ್‌ಕಿನ್ಸ್ ಮುಂತಾದ ಕಂಪೆನಿಗಳಲ್ಲಿ ಹಾವಿನ ಕಡಿತಕ್ಕೆ ಔಷಧಿ ತಯಾರಾಗುತ್ತಿದೆ. ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣ ಸಾಕಷ್ಟು ಔಷಧಿ ದಾಸ್ತಾನಿಗೆ ಹಾಗೂ ಅವುಗಳ ಸಕಾಲಿಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಬೇರೆ ರಾಜ್ಯಗಳಲ್ಲಿ ಇಲ್ಲದಷ್ಟು ಕೊರತೆ ನಮ್ಮಲ್ಲಿ ಮಾತ್ರ ಕಾಡುವುದೇಕೆ? ಎನ್ನುವ ಪ್ರಶ್ನೇ ಕಾಡುತ್ತಿದೆ ಎಂದು ಬೀದರ್ ಕೃಷಿ ಇಲಾಖೆ ನಿರ್ದೆಶಕರಾದ ತಾರಾಮಣಿ ಜಂಟಿ ಹೇಳಿದ್ದಾರೆ.
ಜೊತೆಗೆ ಹಾವು ಕಡಿಸಿಕೊಂಡು ಸಾವನ್ನಪ್ಪಿದ್ದವರಲ್ಲಿ ಅತೀ ಹೆಚ್ಚು ಜನರು ರೈತರೇ ಆಗಿದ್ದು, ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸಿ ಜಿಲ್ಲೆಯಲ್ಲಿ ಔಷಧಿಯನ್ನ ಸರಬರಾಜು ಮಾಡಬೇಕು. ಇನ್ನು ಈ ಬಗ್ಗೆ ಸರಕಾರದಿಂದ ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ. ಹಾವು ಕಚ್ಚಿಕೊಂಡು ಮೃತಪಡುವ ರೈತನಿಗೆ ಸರ್ಕಾರ ಪರಿಹಾರ ಕೊಡುತ್ತದೆ ಪರಿಹಾರಕೊಟ್ಟರೂ ಕೂಡ ಅದು ಯಾವುದಕ್ಕೂ ಸಾಲುವುದಿಲ್ಲ ಸರ್ಕಾರ ದೊಡ್ಡಮೊತ್ತದ ಪರಿಹಾರ ಕೊಟ್ಟರೆ ಮೃತಪಟ್ಟ ರೈತನ ಕುಟುಂಬಕ್ಕೆ ನೇರವಾಗುತ್ತದೆ ಎಂದು ಗ್ರಾಮದ ರೈತರಾದ ವೈಜಿನಾಂಥ್ ಮರಕಲ್ ಅಭಿಪ್ರಾಯಪಟ್ಟಿದ್ದಾರೆ.
ಹಳ್ಳಿಗಳಲ್ಲಿ ಹಾವು ಕಡಿತಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಇನ್ನು ಕೂಡ ಜನರು ಸಾವನ್ನಪ್ಪುತ್ತಿರುವುದು ವಿಪರ್ಯಾಸವೇ ಸರಿ. ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಹಾವು ಕಡಿತಕ್ಕೆ ಔಷಧಿಯ ಕೊರತೆ ಇದೆ ಎನ್ನುವುದು ನಮ್ಮ ಆರೋಗ್ಯ ಇಲಾಖೆಯ ಸೋಂಬೇರಿತನಕ್ಕೆ ಸಾಕ್ಷಿಯಂತಿದೆ. ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳಿಗೆ ಈ ಔಷಧಿ ಪೂರೈಸುವ ಕರ್ನಾಟಕ ರಾಜ್ಯ ಔಷಧ ಸಂಗ್ರಹ ಮತ್ತು ಪೂರೈಕೆ ಸಂಸ್ಥೆಯಲ್ಲೇ ಹಾವಿನ ಕಡಿತದ ಔಷಧಿ ಸಿಗುತ್ತಿಲ್ಲ. ಹೀಗಿದ್ದು, ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಅಕ್ಷಮ್ಯ ಅಪರಾಧವಾಗಿದೆ.
ಇದನ್ನೂ ಓದಿ: Snake Mongoose fight ಹುಬ್ಬಳ್ಳಿ: ಹಾವು ಮುಂಗುಸಿ ನಡುವೆ ಕಾದಾಟ.. ಹಾವಿನ ಸಾವಿನೊಂದಿಗೆ ಹೋರಾಟ ಅಂತ್ಯ