ಸಿದ್ಧಿ ಬುಡಕಟ್ಟು ಸಮುದಾಯದ ಪೌಷ್ಟಿಕಾಹಾರ ಸ್ಥಗಿತ: ಸರ್ಕಾರದ ವಿರುದ್ಧ ಯತ್ನಾಳ್ ಆಕ್ರೋಶ
ಉತ್ತರಕನ್ನಡ ಜಿಲ್ಲೆಯ ಸಿದ್ಧಿ ಬುಡಕಟ್ಟು ಸಮುದಾಯಕ್ಕೆ ನೀಡಲಾಗುತ್ತಿದ್ದ ಪೌಷ್ಠಿಕ ಆಹಾರವನ್ನು - ಟೆಂಡರ್ ದುಬಾರಿಯಾಗುತ್ತಿದೆ, ಟೆಂಡರ್‌ಗೆ ಫಂಡ್ ಇಲ್ಲ ಎಂದು ನಿಲ್ಲಿಸಿರುವುದು ರಾಜ್ಯ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ನವೆಂಬರ್ 22: ಉತ್ತರಕನ್ನಡ ಜಿಲ್ಲೆಯ ಸಿದ್ಧಿ ಬುಡಕಟ್ಟು ಸಮುದಾಯಕ್ಕೆ (Siddi community) ವಿಶೇಷ ಗಿರಿಜನ ಯೋಜನೆಯಡಿ ನೀಡಲಾಗುತ್ತಿದ್ದ ಪೌಷ್ಠಿಕಾಹಾರವನ್ನು ಅನುದಾನ ಕೊರತೆಯ ಕಾರಣ ಸ್ಥಗಿತಗೊಳಿಸಿರುವುದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ಧಿ ಬುಡಕಟ್ಟು ಸಮುದಾಯದ ಪೌಷ್ಟಿಕಾಹಾರ ಸ್ಥಗಿತಗೊಂಡ ವಿಷಯಕ್ಕೆ ಸಂಬಂಧಿಸಿದ ವರದಿಯೊಂದನ್ನು ಲಗತ್ತಿಸಿ ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್ನಲ್ಲಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಸಿದ್ಧಿ ಬುಡಕಟ್ಟು ಸಮುದಾಯಕ್ಕೆ ನೀಡಲಾಗುತ್ತಿದ್ದ ಪೌಷ್ಠಿಕ ಆಹಾರವನ್ನು – ಟೆಂಡರ್ ದುಬಾರಿಯಾಗುತ್ತಿದೆ, ಟೆಂಡರ್‌ಗೆ ಫಂಡ್ ಇಲ್ಲ ಎಂದು ನಿಲ್ಲಿಸಿರುವುದು ರಾಜ್ಯ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ. ಮಳೆ ಇಲ್ಲದ ಕಾರಣ ಸಿದ್ದಿ ಜನಾಂಗಕ್ಕೆ ಕೂಲಿಯೂ ಇಲ್ಲದೆ, ಸರ್ಕಾರ ಕೊಡುತ್ತಿದ್ದ ಆಹಾರ ಸಾಮಗ್ರಿಗಳೂ ಇಲ್ಲದೆ ಹಸಿವಿನಿಂದ ಪರಿತಪಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯ ಮಂತ್ರಿಗಳು ಕೂಡಲೇ ಈ ಯೋಜನೆಗೆ ಹಣ ನೀಡಿ ನಮ್ಮ ಸಿದ್ಧಿ ಜನಾಂಗಕ್ಕೆ ಆಹಾರ ನೀಡಲಿ ಎಂದು ಯತ್ನಾಳ್ ಆಗ್ರಹಿಸಿದ್ದಾರೆ.
ಗಿರಿಜನ ಯೋಜನೆ 2011ರಿಂದ ಪ್ರಾರಂಭಗೊಂಡಿತ್ತು. ಸಮಾಜ ಕಲ್ಯಾಣ ಇಲಾಖೆಯಿಂದ ಪ್ರತಿ ಆರು ತಿಂಗಳ ಕಾಲ, ಅಂದರೆ ಜೂನ್‌ನಿಂದ ಡಿಸೆಂಬರ್‌ವರೆಗೆ ಉಚಿತ ಪೌಷ್ಠಿಕ ಆಹಾರ ನೀಡಲಾಗುತ್ತಿತ್ತು.
ಸುಮಾರು 6000 ಸಿದ್ಧಿ ಕುಟುಂಬಗಳಿಗೆ ಪ್ರತೀ ತಿಂಗಳು ತಲಾ 8 ಕೆಜಿ ಅಕ್ಕಿ, 30 ಕೋಳಿ ಮೊಟ್ಟೆ, 6 ಕೆಜಿ ವಿವಿಧ ಬೇಳೆ ಕಾಳು, ಒಂದು ಲೀಟರ್‌ನ ಎರಡು ಪ್ಯಾಕೆಟ್ ಅಡುಗೆ ಎಣ್ಣೆ, ಅರ್ಧ ಲೀಟರ್ ತುಪ್ಪ, ಒಂದು ಕೆಜಿ ಬೆಲ್ಲ, ಒಂದು ಕೆಜಿ ಸಕ್ಕರೆ, ಮೂರು ಕೆಜಿ ತೊಗರಿ ಬೇಳೆ ಹಾಗೂ ಇತರ ಕಾಳುಗಳು ದೊರೆಯುತ್ತಿದ್ದವು. ಆದರೆ, ಕಳೆದ 6 ತಿಂಗಳುಗಳಿಂದ ಇವ್ಯಾವುವು ಕೂಡಾ ಸಿದ್ಧಿ ಬುಡಕಟ್ಟು ಸಮುದಾಯದ ಜನರಿಗೆ ದೊರೆಯುತ್ತಿಲ್ಲ.
ಪೌಷ್ಠಿಕಾಹಾರ ವಿತರಣೆ ಸ್ಥಗಿತಕ್ಕೆ ಅಧಿಕಾರಿಗಳು ಟೆಂಡರ್ ದುಬಾರಿ, ಟೆಂಡರ್‌ಗೆ ಅಷ್ಟು ಫಂಡ್ ಇಲ್ಲ, ಕೆಲವೊಂದು ಸಮಸ್ಯೆಗಳಿವೆ ಎಂದು ಸಬೂಬುಗಳನ್ನು ನೀಡಿದ್ದಾಗಿ ವರದಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ