ಈರುಳ್ಳಿ ಬೆಲೆ ದಿಢೀರ್ ಏರಿಕೆ: ಇನ್ನಷ್ಟು ಹೆಚ್ಚಳ ಸಾಧ್ಯತೆ, ಉತ್ಪಾದನೆ ಕುಸಿತವೇ ಕಾರಣ

| Updated By: Ganapathi Sharma

Updated on: Aug 30, 2024 | 8:13 AM

ಮುಂಗಾರು ಮಳೆಯ ಅಬ್ಬರ ಹೆಚ್ಚಾಗಿರುವುದು ರಾಜ್ಯದಲ್ಲಿ ಈರುಳ್ಳಿ ಬೆಳ್ಳುಳ್ಳಿ ದರ ಹೆಚ್ಚಳಕ್ಕೆ ಕಾರಣವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಈರುಳ್ಳಿ ಬೆಳೆ ನಾಶವಾಗುತ್ತಿದೆ. ಅತ್ತ ಬೆಳ್ಳುಳ್ಳಿ ಪೂರೈಸುವ ರಾಜ್ಯಗಳಲ್ಲಿಯೂ ಮಳೆಯಿಂದ ಹಾನಿಯಾಗಿದೆ. ಮುಂದಿನ ದಿನಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬೆಲೆ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇವೆ ಎಂದಿವೆ ಮಾರುಕಟ್ಟೆ ಮೂಲಗಳು.

ಈರುಳ್ಳಿ ಬೆಲೆ ದಿಢೀರ್ ಏರಿಕೆ: ಇನ್ನಷ್ಟು ಹೆಚ್ಚಳ ಸಾಧ್ಯತೆ, ಉತ್ಪಾದನೆ ಕುಸಿತವೇ ಕಾರಣ
ಈರುಳ್ಳಿ ಬೆಲೆ ದಿಢೀರ್ ಏರಿಕೆ (ಸಾಂದರ್ಭಿಕ ಚಿತ್ರ)
Image Credit source: PTI
Follow us on

ಬೆಂಗಳೂರು, ಆಗಸ್ಟ್ 30: ಕರ್ನಾಟಕದಲ್ಲಿ ಮಳೆ ಹೆಚ್ಚಳದ ಪರಿಣಾಮ ಈರುಳ್ಳಿಯ ಉತ್ಪಾದನೆಯಲ್ಲಿ ಭಾರಿ ಕುಸಿತವಾಗಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರ್ತಿಲ್ಲ.‌ ಹೀಗಾಗಿ ರಾಜ್ಯಕ್ಕೆ ಪುಣೆ, ಮಹಾರಾಷ್ಟ್ರದಿಂದ ಈರುಳ್ಳಿ ತರುಹಿಸಿಕೊಳ್ಳಲಾಗುತ್ತಿದ್ದು,‌ ಬೆಲೆ ಏರಿಕೆಯಾಗಿದೆ. ಒಂದು ಕೆಜಿ ಈರುಳ್ಳಿಯ ಬೆಲೆ 60-70 ರೂಪಾಯಿ ಆಗಿದೆ.‌ ಹಬ್ಬದ ವೇಳೆಗೆ ಈರುಳ್ಳಿಯ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯಾತೆ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಈ ಹಿಂದೆ ಉತ್ತರ ಕರ್ನಾಟಕ ಭಾಗದಿಂದ ರಾಜ್ಯಕ್ಕೆ ಈರುಳ್ಳಿ ಪೂರೈಕೆಯಾಗುತ್ತಿತ್ತು. ಆದರೆ, ಉತ್ತರ ಕರ್ನಾಟಕದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಪರಿಣಾಮವಾಗಿ ಈರುಳ್ಳಿ ಬೆಳೆ ಕೊಳೆತು ಹೋಗುತ್ತಿದೆ. ಹೀಗಾಗಿ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ.

ಯಶವಂತಪುರ ಹಾಗೂ ದಾಸನಪುರ ಎಪಿಎಂಸಿಗೆ ಬುಧವಾರ 127 ಲಾರಿಗಳಲ್ಲಿ 38,415 ಚೀಲ ಈರುಳ್ಳಿ ಆವಕವಾಗಿತ್ತು. ಇದರಲ್ಲಿ ರಾಜ್ಯದ ಹತ್ತಿಪ್ಪತ್ತು ಲಾರಿಗಳು ಮಾತ್ರ ಸೇರಿವೆ. ಉಳಿದವೆಲ್ಲ ಪೂನಾದಿಂದ ಬಂದಿವೆ. ಸಗಟು ದರ ಕ್ವಿಂಟಲ್‌ಗೆ ಕನಿಷ್ಠ 2 ಸಾವಿರದಿಂದ ಗರಿಷ್ಠ 4500 ರೂ. ಇತ್ತು. ನಗರದ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 55ರಿಂದ 60 ರೂ.ಗೆ ಮಾರಾಟವಾಗಿದೆ.

ಬೆಳ್ಳುಳ್ಳಿಯೂ ದುಬಾರಿ

ಈರುಳ್ಳಿ ಮಾತ್ರವಲ್ಲದೆ ಬೆಳ್ಳುಳ್ಳಿ ದರ ಕೂಡ ಕೆಜಿಗೆ 400 ರೂ.ಗೆ ಏರಿಕೆಯಾಗಿದೆ. ಇದಕ್ಕೂ ಅತಿವೃಷ್ಟಿಯೇ ಕಾರಣ ಎನ್ನಲಾಗಿದೆ. ಬುಧವಾರ ಮಾರುಕಟ್ಟೆಯಲ್ಲಿ ಕೇಜಿಗೆ 400 ರೂ. ದರವಿತ್ತು. ಕಳೆದ ಡಿಸೆಂಬರ್, ಜನವರಿ ವೇಳೆಗೆ ಬೆಳ್ಳುಳ್ಳಿ ಕೆಜಿಗೆ ದಾಖಲೆಯ 500ವರೆಗೆ ಏರಿಕೆಯಾಗಿ ಬಳಿಕ 280, 250 ರೂ.ವರೆಗೆ ಇಳಿಕೆಯಾಗಿತ್ತು.

ಕರ್ನಾಟಕಕ್ಕೆ ಮಧ್ಯಪ್ರದೇಶ ಹಾಗೂ ರಾಜಸ್ಥಾನದಿಂದಲೇ ಬೆಳ್ಳುಳ್ಳಿ ಪೂರೈಕೆಯಾಗುತ್ತಿದೆ. ಆ ರಾಜ್ಯಗಳಲ್ಲಿ ಮಳೆ ಹೆಚ್ಚಾಗಿ ಬೆಳ್ಳುಳ್ಳಿ ಉತ್ಪಾದನೆ ಕುಸಿತವಾಗಿರುವುದೇ ದರ ಹೆಚ್ಚಳಕ್ಕೆ ಕಾರಣ. ಬೆಳ್ಳುಳ್ಳಿ ದರ ಕೆಜಿಗೆ 450 ರೂ.ವರೆಗೂ ಏರಿಕೆಯಾಗಬಹುದು ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.

ಇದನ್ನೂ ಓದಿ: ಟೇಸ್ಟ್‌ಲೆಸ್ ಆಗುತ್ತಾ ಕೇಕ್‌? ಗೋಬಿ, ಕಬಾಯ್ ಆಯ್ತು ಈಗ ಕೇಕ್, ಬೇಕರಿ ತಿನಿಸುಗಳ ಮೇಲೆ ಕ್ರಮಕ್ಕೆ ಸಿದ್ಧತೆ

ಈರುಳ್ಳಿ, ಬೆಳ್ಳುಳ್ಳಿ ಜತೆಗೆ ತರಕಾರಿಗಳ ಬೆಲೆ ಕೂಡ ಕೊಂಚ ಜಾಸ್ತಿಯಾಗಿದೆ. ಇದೆ ರೀತಿ ಮಳೆ ಜಾಸ್ತಿಯಾದರೆ ತರಕಾರಿಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ