
ಬೆಂಗಳೂರು, ಅಕ್ಟೋಬರ್ 7: ಇತ್ತೀಚೆಗೆ ಆನ್ಲೈನ್ ವಂಚನೆಗಳು, ಸೈಬರ್ ಅಪರಾಧಗಳು ( Cyber fraud) ಹೆಚ್ಚುತ್ತಲೇ ಇವೆ. ದಿನ ಬೆಳಗಾದರೆ ಒಬ್ಬರಲ್ಲ ಒಬ್ಬರು ಈ ಅಪರಾಧ ಜಾಲಕ್ಕೆ ಸಿಲುಕಿ ಹಣವನ್ನು ಕಳೆದುಕೊಳ್ಳುತ್ತಾರೆ. ಇದೀಗ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಇಂಥದ್ದೇ ಪ್ರಕರಣ ದಾಖಲಾಗಿದ್ದು, 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆನ್ಲೈನ್ ಹೂಡಿಕೆಯ ಹೆಸರಿನಲ್ಲಿ ವಂಚಿಸುತ್ತಿದ್ದ ಆರೋಪಿಗಳು ದೇಶ ವಿದೇಶದ ಜನರನ್ನು ತಮ್ಮ ಜಾಲದಲ್ಲಿ ಬೀಳಿಸುತ್ತಿದ್ದರು.
ಬೆಂಗಳೂರಿನಲ್ಲಿ ಆನ್ಲೈನ್ನಲ್ಲಿ ಹೂಡಿಕೆ ಮಾಡಿಸಿಕೊಂಡು ವಂಚಿಸುತ್ತಿದ್ದ ಜಾಲ ಪತ್ತೆಯಾಗಿದ್ದು, ಕೆಂಗೇರಿ ಪೊಲೀಸ್ ಠಾಣೆಯ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ. ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಹೂಡಿಕೆಗೆ ಆಮಿಷವೊಡ್ಡಲಾಗುತ್ತಿತ್ತು. ದೇಶ ವಿದೇಶಗಳ ಜನರಿಗೆ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸುತ್ತಿದ್ದರು. ಹೂಡಿಕೆ ಮಾಡಿದ ಹಣಕ್ಕಿಂತ ಹೆಚ್ಚು ಲಾಭ ನೀಡುವುದಾಗಿ ಆಮಿಷವೊಡ್ಡಿ ಕೋಟ್ಯಂತರ ರೂ.ಗಳನ್ನು ಹೂಡಿಕೆ ಮಾಡಿಸಿಕೊಂಡಿದ್ದಾರೆ.
ಇದನ್ನೂ ಓದಿ ಆನ್ಲೈನ್ ಟ್ರೇಡಿಂಗ್ನಲ್ಲಿ ಬರೋಬ್ಬರಿ 2.28 ಕೋಟಿ ರೂ. ಕಳೆದುಕೊಂಡ ಖಾಸಗಿ ಕಂಪನಿ ಉದ್ಯೋಗಿ!
ನಿನ್ನೆ (ಅ.6) 7 ಕಡೆ ದಾಳಿ ನಡೆಸಿ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 19 ಲ್ಯಾಪ್ಟಾಪ್, 40 ಮೊಬೈಲ್, 11 ಪೆನ್ ಡ್ರೈವ್, 42 ಸಿಮ್ ಕಾರ್ಡ್, 4 ಐಪ್ಯಾಡ್, 2 ಹಾರ್ಡ್ ಡಿಸ್ಕ್, 5 ಸಿಪಿಯು, 13 ಸೀಲುಗಳು, 10 ಮೆಮೊರಿ ಕಾರ್ಡ್ ಹಾಗೂ ವಿದೇಶಿ ಕರೆನ್ಸಿ, ಕರೆನ್ಸಿ ಕೌಟಿಂಗ್ ಮಷಿನ್, 6 ಕೋಟಿ ಬೆಲೆಬಾಳುವ ಸ್ಥಿರಾಸ್ತಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಹಿಂದೆಯೂ ಕರ್ನಾಟಕದ ಹಲವೆಡೆ ಸೈಬರ್ ವಂಚನೆಯ ಪ್ರಕರಣಗಳು ಕಂಡುಬಂದಿವೆ. ಇದೇ ತಿಂಗಳಿನಲ್ಲಿ ಬೆಂಗಳೂರು ಮೂಲದ ಇಬ್ಬರು ವ್ಯಕ್ತಿಗಳು ನಕಲಿ ಆನ್ಲೈನ್ ಟ್ರೇಡಿಂಗ್ ಆ್ಯಪ್ಗಳನ್ನು ನಂಬಿ ಸೈಬರ್ ವಂಚನೆಗೆ ಒಳಗಾಗಿದ್ದರು. ಇಬ್ಬರೂ ಸೇರಿ ಒಟ್ಟೂ 2.28 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿದ್ದರು. ಅದಲ್ಲದೇ ಮ್ಯಾಟ್ರಿಮೊನಿಯಲ್ಲಿ 59 ವರ್ಷದ ನಿವೃತ್ತ ಶಿಕ್ಷಕಿಯೊಬ್ಬರು ವ್ಯಕ್ತಿಯೊಬ್ಬನಿಂದ 2.3 ಕೋಟಿ ರೂ.ಗಳ ವಂಚನೆಗೆ ಒಳಗಾಗಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:42 pm, Tue, 7 October 25