ಬೆಂಗಳೂರು: ನಾಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಸಂಪುಟ ವಿಸ್ತರಿಸಲು ಭಾರಿ ಸಂಭ್ರಮದಲ್ಲಿದ್ದಾರೆ. ಆದರೆ ಬಿಜೆಪಿಗೆ ಮೂಲವ್ಯಾಧಿ ಕಾಡತೊಡಗಿದೆ. ಇಂದು ಮುಂಜಾನೆ ಬಿಎಸ್ವೈಗೆ ವರಿಷ್ಠ ಅಮಿತ್ ಶಾ ಕರೆಮಾಡಿ ಶಾಕ್ ಕೊಟ್ಟಿದ್ದಾರೆ. ನಾಳೆಯ ಸಂಪುಟ ವಿಸ್ತರಣೆಯಲ್ಲಿ ಕೇವಲ ಹತ್ತು ಜನರಿಗೆ ಮಾತ್ರ ಸಚಿವ ಸ್ಥಾನ ನೀಡುವಂತೆ ಸೂಚನೆ ನೀಡಿದ್ದಾರಂತೆ. ಮೂಲ ಬಿಜೆಪಿ ಶಾಸಕರಿಗೆ ನಾಳೆ ಸಚಿವ ಸ್ಥಾನ ಸಿಗುವುದಿಲ್ಲ ಎಂದು ತಿಳಿದು ಬಂದಿದೆ.
ಇಂದು ಮುಂಜಾನೆ BSY ಜೊತೆ ದೂರವಾಣಿ ಕರೆ ಮಾಡಿ ಮಾತನಾಡಿದ ಅಮಿತ್ ಶಾ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ಮಾಡಿದ್ದಾರೆ. ನಂತರ ಅಮಿತ್ ಶಾ ಸೂಚನೆಯಂತೆ BSY ಉಮೇಶ್ ಕತ್ತಿ, ಯೋಗೇಶ್ವರ್ ಇಬ್ಬರನ್ನೂ ಮನೆಗೆ ಕರೆಸಿ ಮಾತನಾಡಿದ್ದಾರೆ. ಹೈಕಮಾಂಡ್ ನೀಡಿದ್ದ ಮಾಹಿತಿಯನ್ನು ಇಬ್ಬರ ಜೊತೆ ಹಂಚಿಕೊಂಡಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದ 10 ಶಾಸಕರಿಗೆ ಮಾತ್ರ ನಾಳೆ ಮಂತ್ರಿಗಿರಿ ಸಿಗಲಿದ್ದು, ಅಧಿವೇಶನ ಮುಗಿದ ಬಳಿಕ ಸಚಿವ ಸ್ಥಾನ ನೀಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.