
ಬೆಂಗಳೂರು, ಮೇ 28: ಆಪರೇಷನ್ ಸಿಂದೂರ್ (Operation Sindoor) ಕಾರ್ಯಚಾರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ (Congress) ಬೆಂಗಳೂರಿನ ಟೌನ್ಹಾಲ್ನಲ್ಲಿ ‘ಜೈಹಿಂದ್’ (Jai Hind) ಕಾರ್ಯಕ್ರಮ ಆಯೋಜಿಸಿದೆ. ಕಾರ್ಯಮವನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ದೇಶದ ಜನರಿಗೆ ಸೇನೆಯ ಮೇಲೆ ಗೌರವ, ನಂಬಿಕೆ, ಹೆಮ್ಮೆ ಇದೆ. ಶತ್ರುಗಳು ನಮ್ಮ ಭೂಮಿ ಮೇಲೆ ಕಾಲಿಡಲು ಸೇನೆ ಬಿಡುವುದಿಲ್ಲ. ಕಾರ್ಗಿಲ್ ಯುದ್ಧವೇ ಇರಲಿ, ಆಪರೇಷನ್ ಸಿಂದೂರ್ ಇರಲಿ, ನಮ್ಮ ಸೇನೆ ಪರಾಕ್ರಮವನ್ನು ತೋರಿಸಿದೆ. ಇಂದಿರಾ ಗಾಂಧಿ ಅವಧಿಯಲ್ಲೂ ಸೇನೆ ಪರಾಕ್ರಮವನ್ನು ತೋರಿಸಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ರಕ್ಷಣಾ ಇಲಾಖೆಯಲ್ಲಿ 1,78,100 ಹುದ್ದೆಗಳು ಖಾಲಿ ಇವೆ. 25 ಸಾವಿರಕ್ಕೂ ಹೆಚ್ಚು ಅಧಿಕಾರಿಗಳ ಮಟ್ಟದ ನೇಮಕಾತಿ ಬಾಕಿ ಇದೆ. ನೇಮಕಾತಿ ಮಾಡಲಿಲ್ಲ ಅಂದ್ರೆ ದೇಶದ ಸೇವೆ ಮಾಡುವುದು ಹೇಗೆ? ದೇಶದ ಭದ್ರತೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.
ನಾವೆಲ್ಲ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೆಂಬಲ ನೀಡಿದ್ದೇವೆ. ನಮ್ಮಲ್ಲಿ ರಾಜಕೀಯ ಭಿನ್ನಾಬಿಪ್ರಾಯಗಳು ಇರಬಹುದು. ಆದರೆ ನಮಗೆ ದೇಶ ಮೊದಲು ನಂತರ ಉಳಿದಿದ್ದು. ಪಾಕಿಸ್ತಾನದಲ್ಲಿ ಉಗ್ರರ ಕಾರ್ಖಾನೆ ಇದೆ. ಎರಡು ಭಾರಿ ಸರ್ವಪಕ್ಷ ಸಭೆಯನ್ನ ಕರೆಯಲಾಗಿತ್ತು. ಈ ಸಭೆಯಲ್ಲಿ ನಾವು ಕೇಂದ್ರ ಸರ್ಕಾರದ ನಿರ್ಧಾರ ಪರ ನಿಂತಿದ್ದೆವು. ಪಾಕಿಸ್ತಾನಕ್ಕೆ ನಮ್ಮ ಸೈನಿಕರು ತಕ್ಕ ಉತ್ತರ ಕೊಟ್ಟಿದ್ದಾರೆ. ವಿಶೇಷ ಸಂಸತ್ ಅಧಿವೇಶನ ಕರೆಯುವಂತೆ ಹೇಳಿದ್ದೆವು. ನಾವೆಲ್ಲಾ ಕೇಂದ್ರ ಸರ್ಕಾರ ಹಾಗೂ ಸೈನಿಕರ ಪರ ಇದ್ದೇವೆ ಎಂದರು.
ದೇಶದ ವಿಚಾರದಲ್ಲಿ ನಾವು ಯಾವುತ್ತು ರಾಜಕೀಯ ಮಾಡೋದಿಲ್ಲ. ಮುಂಬೈ ದಾಳಿ ನಡೆದಾಗ ಜಾಹೀರಾತಿನ ಮೂಲಕ ಟೀಕಾ ಟಿಪ್ಪಣಿಗಳನ್ನ ಮಾಡಿದ್ದರು. ಆದರೆ ನಾವು ಹಾಗೆ ಮಾಡಿಲ್ಲ. ಒಂದು ತಿಂಗಳಿನಿಂದ ದೇಶದ ಏಕತೆಗಾಗಿ ನಿಂತಿದ್ದೇವೆ, ಟೀಕೆ ಮಾಡಿಲ್ಲ. ಯಾಕೆ ಪಹಲ್ಗಾಮ್ ಘಟನೆಯಲ್ಲಿ ಗುಪ್ತಚರ ಇಲಾಖೆ ವಿಫಲವಾಯ್ತು ಇದಕ್ಕೆಲ್ಲಾ ಕೇಂದ್ರ ಸರ್ಕಾರ ಉತ್ತರ ಕೊಡಬೇಕು. 26 ಜನರನ್ನು ಹತ್ಯೆ ಮಾಡಿದ ಭಯೋತ್ಪಾದಕರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.
ಕದನ ವಿರಾಮ ಆಗಿದೆ, ನಾವು ಯುದ್ಧವನ್ನ ಬಯಸುವುದಿಲ್ಲ. ಕದನ ವಿರಾಮದ ಷರತ್ತುಗಳೇನು ಅಂತ ಪ್ರಧಾನಿಗಳು ಹೇಳಬೇಕು. ಅಮೇರಿಕಾ ಕದನ ವಿರಾಮ ಘೊಷಿಸುವಂತೆ ಒತ್ತಡ ಹಾಕಿದೆ. ನಮ್ಮ ವಿದೇಶಾಂಗ ನೀತಿಯು ವಾಷಿಂಗ್ಟನ್ ಡಿಸಿಯನ್ನು ಅವಲಂಬಿಸಿದೆಯಾ? ದೇಶ ಸಮಧಾನದ ಉತ್ತರವನ್ನ ಬಯಸುತ್ತಿದೆ ಎಂದು ಹೇಳಿದರು.
ಕದನ ವಿರಾಮದ ಷರತ್ತು ಏನು ಎಂಬುವುದನ್ನು ಯಾರೂ ಬಹಿರಂಗಪಡಿಸಿಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಮೇಲೂ ಕೂಡ ಒತ್ತಡಗಳಿದ್ದವು. ಆದರೂ ಇಂದಿರಾ ಗಾಂಧಿ ಶಿಮ್ಲಾ ಒಪ್ಪಂದವನ್ನು ಮಾಡಿಕೊಂಡರು. ಈಗ ಪಾಕ್ ಜತೆ ಕದನ ವಿರಾಮ ಮಾಡಿಕೊಳ್ಳಲು ಷರತ್ತುಗಳೇನಾಗಿತ್ತು? ದೇಶದ ಸುರಕ್ಷತೆ ದೃಷ್ಟಿಯಿಂದ ಈ ಬಗ್ಗೆ ನಾವು ಪ್ರಶ್ನೆ ಎತ್ತಲೇಬೇಕಿದೆ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.
ನಮ್ಮ ದೇಶದ ವಿಚಾರದಲ್ಲಿ ಮೂಗು ತೂರಿಸಲು ಅಮೇರಿಕದ ಅಧ್ಯಕ್ಷರು?. ನಮ್ಮ ಯುದ್ಧವನ್ನು ನಿಲ್ಲಿಸಲು ಡೋನಾಲ್ಡ್ ಟ್ರಂಪ್ ಯಾರು?. ನಮ್ಮ ಭೂಮಿಯ ವಿಚಾರದಲ್ಲಿ ನಿರ್ಣಯ ಕೈಗೊಳ್ಳಲು ಟ್ರಂಪ್ ಯಾರು? ಕದನ ವಿರಾಮದ ಷರತ್ತುಗಳು ಏನು?. ಕದನ ವಿರಾಮದ ಷರತ್ತು ಏನು ಎಂಬುವುದನ್ನು ಯಾರೂ ಬಹಿರಂಗಪಡಿಸಿಲ್ಲ ಎಂದು ಪ್ರಶ್ನಿಸಿದರು.
‘ಜೈಹಿಂದ್’ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಫೋಟೋ ಹಾಕಿದ್ದಕ್ಕೆ ಮಾಜಿ ಸೈನಿಕರು ಆಕ್ರೋಶ ವ್ಯಕ್ತಪಡಿಸಿದರು. ಅವರೇನು ಯುದ್ಧ ಮಾಡಲು ಹೋಗಿದ್ರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸೈನಿಕರನ್ನು ನಾಯಕರು ಸಮಾಧಾನ ಮಾಡಿದರು.
ಇದನ್ನೂ ಓದಿ: ಕುವೈತ್ನಲ್ಲಿ ಕೈಕೊಟ್ಟ ಗುಲಾಂ ನಬಿ ಆಜಾದ್ ಆರೋಗ್ಯ, ಆಸ್ಪತ್ರೆಗೆ ದಾಖಲು
ಜೈ ಹಿಂದ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪಮುಖ್ಯ ಡಿ.ಕೆ.ಶಿವಕುಮಾರ್, ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸೇರಿ ಹಲವರು ಭಾಗಿಯಾಗಿದ್ದರು. ಮಾಜಿ ಸೈನಿಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಗೌರವ ಸಲ್ಲಿಸಿದರು. ಮಾಜಿ ಸೈನಿಕರು ಗೌರವ ಪೂರ್ವಕವಾಗಿ ಆರ್ಮಿ ಜಾಕೆಟ್ ತೊಡಿಸಿದರು.
Published On - 12:38 pm, Wed, 28 May 25