ಬಿಜೆಪಿಯವರು ಎಂಥ ನೀಚರು, ಸುಳ್ಳುಗಾರರು ಎಂಬುದು ತನಿಖೆ ಮೂಲಕ ರಾಜ್ಯದ ಜನರಿಗೆ ತಿಳಿಯಲಿ: ಸಿದ್ದರಾಮಯ್ಯ

| Updated By: ಸಾಧು ಶ್ರೀನಾಥ್​

Updated on: Jan 16, 2021 | 4:42 PM

ರಾಜ್ಯದಲ್ಲಿ ಸರ್ಕಾರ ಸತ್ತಿದೆ. ಇನ್ನೂ ಏಳು ಸತ್ತಿರುವ ಕುದುರೆಗಳನ್ನು ಸಿಎಂ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಪಿಂಚಣಿ ಕೊಡಲು, ಮನೆ, ರಸ್ತೆ ಕಾಮಗಾರಿಗಳಿಗೆ ಅನುದಾನ ಇಲ್ಲ. ನೀರಾವರಿ ಯೋಜನೆಗಳು ನಿಂತಿವೆ.

ಬಿಜೆಪಿಯವರು ಎಂಥ ನೀಚರು, ಸುಳ್ಳುಗಾರರು ಎಂಬುದು ತನಿಖೆ ಮೂಲಕ ರಾಜ್ಯದ ಜನರಿಗೆ ತಿಳಿಯಲಿ: ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ಬೆಂಗಳೂರು: ಸರ್ಕಾರ ರಚನೆಗೆ ನೆರವಾಗಲುಸಿ ಪಿ ಯೋಗೇಶ್ವರ್ ಅವರು 9 ಕೋಟಿ ರೂ. ಸಾಲ ಮಾಡಿದ್ದರು ಎಂಬ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ  ಒತ್ತಾಯಿಸಿದ್ದಾರೆ.

ತಮ್ಮ ನಿವಾಸದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಆಪರೇಷನ್ ಕಮಲದಲ್ಲಿ ಹಣದ ಪ್ರಭಾವ ಇದೆ ಎಂಬುದು ಜಾರಕಿಹೊಳಿಯವರ ಹೇಳಿಕೆಯಿಂದ ಸಾಬೀತಾಗಿದೆ. ಈಗಾಗಿ ಅವರ ಹೇಳಿಕೆ ಕುರಿತು ನಿಖರ ಮತ್ತು ಸಮಗ್ರವಾದ ತನಿಖೆ ಆಗಲೇಬೇಕು ಎಂದರು.

ಆಪರೇಷನ್ ಕಮಲ ಎಂದರೆ ಹಣ ನೀಡಿ ಶಾಸಕರನ್ನು ಖರೀದಿ ಮಾಡುವುದು ಎಂದು ಅರ್ಥ. ಈಗ ರಮೇಶ್ ಜಾರಕಿಹೊಳಿಯವರೇ ಹಣದ ವ್ಯವಹಾರ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಸಿ.ಪಿ. ಯೋಗೇಶ್ವರ್ ಅವರು 9 ಕೋಟಿ ಸಾಲ ಮಾಡಿ ಸರ್ಕಾರ ರಚನೆಗೆ ನೆರವಾಗಿದ್ದಾರೆ ಎಂದು ಅವರು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಾರೆ.

ನಾವು ಸಜ್ಜನರು, ಆಪರೇಷನ್ ಕಮಲಕ್ಕೆ ಹಣ ಖರ್ಚು ಮಾಡಿಲ್ಲ. 17 ಶಾಸಕರು ಅವರಾಗಿಯೇ ಬಂದಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಬಿಜೆಪಿಯವರು ಎಂಥ ನೀಚರು, ಸುಳ್ಳುಗಾರರು ಎಂಬುದು ತನಿಖೆ ಮೂಲಕ ರಾಜ್ಯದ ಜನರಿಗೆ ತಿಳಿಯಲಿ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.

ಯಡಿಯೂರಪ್ಪ ಅವರು ಆಪರೇಷನ್ ಕಮಲದ ಜನಕ..
ಯಡಿಯೂರಪ್ಪ ಅವರು ಆಪರೇಷನ್ ಕಮಲದ ಜನಕ. ಅವರು ರಾಜ್ಯದ ಜನತೆಯ ಆಶೀರ್ವಾದದಿಂದ ಮುಖ್ಯಮಂತ್ರಿ ಆದವರಲ್ಲ. ಹಣ ಮತ್ತು ಆಪರೇಷನ್ ಕಮಲದ ಮೂಲಕ ಅವರು ಸಿಎಂ ಆಗಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಇಷ್ಟಕ್ಕೂ 9 ಕೋಟಿ ರೂ.ಗಳು ಬಂದಿದ್ದಾದರೂ ಎಲ್ಲಿಂದ. ಅದನ್ನು ಯೋಗೇಶ್ವರ್ ಅವರಿಗೆ ಕೊಟ್ಟವರು ಯಾರು. ಅದು ಬಿಳಿ ಹಣವೇ ಅಥವಾ ಕಪ್ಪು ಹಣವೇ ಎಂಬುದು ಗೊತ್ತಾಗಬೇಕು.

ಒಂದು ವೇಳೆ ನಾನು ಈ ರೀತಿಯ ಆರೋಪ ಮಾಡಿದ್ದರೆ ವಿರೋಧ ಪಕ್ಷದವರು ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ರಮೇಶ್ ಜಾರಕಿಹೊಳಿ ಹಿರಿಯ ಸಚಿವರು. ಅವರೇ ಆರೋಪ ಮಾಡಿದ್ದಾರೆ. ಹೀಗಾಗಿ ತನಿಖೆ ಆಗಬೇಕಲ್ಲವೇ? ಇದು ದಾರಿಯಲ್ಲಿ ಹೋಗುವವರು ಹೇಳಿರುವ ಮಾತಲ್ಲ. ಜವಾಬ್ದಾರಿಯುತ ಸಚಿವರು ಹೇಳಿರುವ ಮಾತಿದು. ಹೀಗಾಗಿ ಸಮಗ್ರವಾಗಿ ತನಿಖೆಯಾಗಬೇಕು. ಸಿ.ಡಿ. ಬಗ್ಗೆಯೂ ತನಿಖೆಯಾಗಬೇಕು.

ಸಿ.ಡಿ. ಬಗ್ಗೆಯೂ ತನಿಖೆಯಾಗಲಿ..
ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿಯ ಹಿರಿಯ ನಾಯಕ. ಸಿ.ಡಿ. ಕುರಿತಾಗಿ ಅವರೇ ಆರೋಪ ಮಾಡಿದ್ದಾರೆ. ಸಿ.ಡಿ.ಯಲ್ಲಿ ಕೊಳಕು ದೃಶ್ಯಗಳಿವೆ. ನೋಡಲಾಗದು ಎಂದಿದ್ದಾರೆ. ಹೀಗಾಗಿ ಸಿ.ಡಿ.ಯಲ್ಲಿ ಏನಿದೆ ಎಂಬುದೂ ಜನರಿಗೆ ಗೊತ್ತಾಗಬೇಕಲ್ಲವೇ. ಹೀಗಾಗಿ ತನಿಖೆ ನಡೆಸುವುದು ಸೂಕ್ತ. ಯಡಿಯೂರಪ್ಪ ಅವರಿಗೆ ಏಕೆ ಮತ್ತು ಹೇಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂಬ ಸತ್ಯಾಂಶವೂ ಹೊರಬರಬೇಕಲ್ಲವೇ ? ಎಂದು ಪ್ರಶ್ನಿಸಿದರು.

ತಮ್ಮ ಕ್ಷೇತ್ರಗಳಿಗೆ ಅನುದಾನ ಪಡೆಯಲು ಶಾಸಕರು ಅರ್ಹರು. ಅದರಲ್ಲಿ ಬ್ಲಾಕ್ ಮೇಲ್ ಮಾಡುವ ಅಗತ್ಯವೇನಿದೆ. ಅನುದಾನ ಕೋರಿ ಜಮೀರ್ ಅಹಮದ್ ಅವರು ಪತ್ರ ಕೊಟ್ಟಿದ್ದಾರೆ. ಆ ಪತ್ರದ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಣ್ಣ ಸಹಿ ಮಾಡಿ ಹಣಕಾಸು ಇಲಾಖೆಗೆ ಕಳುಹಿಸಿದ್ದಾರೆ. ಇಷ್ಟಕ್ಕೂ ಅನುದಾನ ಬಿಡುಗಡೆ ಆಗಿದೆಯೇ? ಅದು ಆದೇಶವೂ ಅಲ್ಲ.

ಸರ್ಕಾರ ಸತ್ತು ಹೋಗಿದೆ..
ರಾಜ್ಯದಲ್ಲಿ ಸರ್ಕಾರ ಸತ್ತಿದೆ. ಇನ್ನೂ ಏಳು ಸತ್ತಿರುವ ಕುದುರೆಗಳನ್ನು ಸಿಎಂ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಪಿಂಚಣಿ ಕೊಡಲು, ಮನೆ, ರಸ್ತೆ ಕಾಮಗಾರಿಗಳಿಗೆ ಅನುದಾನ ಇಲ್ಲ. ನೀರಾವರಿ ಯೋಜನೆಗಳು ನಿಂತಿವೆ. ವಿದ್ಯಾರ್ಥಿ ವೇತನ ಕೊಡುತ್ತಿಲ್ಲ. ಸರ್ಕಾರ ಎಲ್ಲಿದೆ. ರಾಜ್ಯದಲ್ಲಿ ಸತ್ತ ಸರ್ಕಾರ ಇದೆ.

ಜನ ಚುನಾವಣೆ ಬರಲಿ ಎಂದು ಕಾಯುತ್ತಿದ್ದಾರೆ. ಬಂದ ಕೂಡಲೇ ಈ ಸರ್ಕಾರ ಮತ್ತು ಯಡಿಯೂರಪ್ಪ ಅವರನ್ನು ಜನ ಮನೆಗೆ ಕಳುಹಿಸಲಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಜನವರಿ 20ರಂದು ಚಳವಳಿ ನಡೆಸಲಿದೆ. ಅಂದು ರಾಜಭವನ ಚಲೋ ಕಾರ್ಯಕ್ರಮ ನಡೆಯಲಿದೆ.

ಎಲ್ಲರಿಗೂ ಲಸಿಕೆ ಸಿಗಲಿ..
ಶಾಸಕರು ನಮಗೆ ಲಸಿಕೆ ಬೇಡ ಎಂದು ಹೇಳಿಲ್ಲ. ಕೊರೊನಾ ವಾರಿಯರ್ಸ್‍ಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯವರು ಪ್ರಮಾಣ ಪತ್ರ ನೀಡಿರುವುದರಿಂದ ಲಸಿಕೆ ಬಗ್ಗೆ ಅನುಮಾನ ಬೇಡ. ಎಲ್ಲರಿಗೂ ಲಸಿಕೆ ಸಿಗುವಂತಾಗಬೇಕು. ಇಲ್ಲದಿದದರೆ ಕೋವಿಡ್ ನಿಯಂತ್ರಣ ಅಸಾಧ್ಯ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ನಾನು ಈವರೆಗೆ ಗೋಮಾಂಸ ತಿಂದಿಲ್ಲ, ಹಂದಿ ಮಾಂಸ ತಿಂದಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ