‘ನಮ್ಮ ಸಮಾಜದಲ್ಲಿ ಕೊಳಕು ಮನಸ್ಸುಗಳು ಇವೆ; ಕಳ್ಳನೋ, ಸುಳ್ಳನೋ ನಮ್ಮವನು ಸಿಎಂ ಆಗಬೇಕೆಂದರೆ ಒಳ್ಳೇ ಸಮಾಜ ನಿರ್ಮಾಣ ಹೇಗೆ ಸಾಧ್ಯ?’

|

Updated on: Mar 21, 2021 | 5:26 PM

ನಮ್ಮ ಸಮಾಜದಲ್ಲಿ ಕೊಳಕು ಮನಸ್ಸುಗಳು ಇವೆ. ಪ್ರಾಮಾಣಿಕರು, ಸಿದ್ಧಾಂತ ಇಟ್ಟುಕೊಂಡವರನ್ನು ಬೆಂಬಲಿಸಿ. ಜನರು ಬೆಂಬಲಿಸದೆ ಹೋದರೆ ಸಮಾಜ ಉದ್ಧಾರವಾಗಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

‘ನಮ್ಮ ಸಮಾಜದಲ್ಲಿ ಕೊಳಕು ಮನಸ್ಸುಗಳು ಇವೆ; ಕಳ್ಳನೋ, ಸುಳ್ಳನೋ ನಮ್ಮವನು ಸಿಎಂ ಆಗಬೇಕೆಂದರೆ ಒಳ್ಳೇ ಸಮಾಜ ನಿರ್ಮಾಣ ಹೇಗೆ ಸಾಧ್ಯ?’
ಸಿದ್ದರಾಮಯ್ಯ
Follow us on

ಬೆಂಗಳೂರು: ಕೆಲವರು ತಪ್ಪು ಮಾಡಿದರೂ, ಭ್ರಷ್ಟಾಚಾರ ಮಾಡಿದರೂ, ಜೈಲಿಗೆ ಹೋದರೂ ಸುಲಭವಾಗಿ ಮರೆತು ಹೋಗುತ್ತಾರೆ. ನಮ್ಮ ಜನರು ಕೂಡ ಹಾಗೇ ಇದ್ದಾರೆ. ಈಗ ಭ್ರಷ್ಟಾಚಾರ ಗಂಭೀರವಾದ ವಿಷಯವಲ್ಲದಂತಾಗಿದೆ ಎಂದು ಪರೋಕ್ಷವಾಗಿ ಸಿಎಂ ಬಿ.ಎಸ್​.ಯಡಿಯೂರಪ್ಪ ವಿಚಾರ ಪ್ರಸ್ತಾಪಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಮಾಜಿ ಸಚಿವ H.M.ರೇವಣ್ಣ ದಂಪತಿಗೆ ಅಭಿನಂದಿಸಿದ ಗಣ್ಯರು

ಮಾಜಿ ಸಚಿವ H.M.ರೇವಣ್ಣ ದಂಪತಿ

ಮಾಜಿ ಸಚಿವ H.M.ರೇವಣ್ಣ ಸಾರ್ವಜನಿಕ ಜೀವನದಲ್ಲಿ 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೆಸ್​ನಲ್ಲಿ ಸಮಾರಂಭವನ್ನು ಏಪರ್ಡಿಸಲಾಗಿತ್ತು. H.M.ರೇವಣ್ಣ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕಾರ್ಯಕ್ರಮದ ಆಯೋಜನೆ. ಮಾಡಲಾಗಿತ್ತು. ಇದೇ ವೇಳೆ, ಸಮಾರಂಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ವೀರಪ್ಪ ಮೊಯ್ಲಿ, ವಿಧಾನಪರಿಷತ್​ ಸಭಾಪತಿ ಬಸವರಾಜ್ ಹೊರಟ್ಟಿ, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಬಿ.ಟಿ.ಲಲಿತಾ ನಾಯಕ್, ದಲಿತ ಕವಿ ಪ್ರೊ.ಸಿದ್ದಲಿಂಗಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಸೇರಿ ಹಲವು ಗಣ್ಯರು ಭಾಗಿಯಾದರು. ರೇವಣ್ಣರಿಗೆ ನೆರೆದಿದ್ದ ಗಣ್ಯರು ಅಭಿನಂದಿಸಿದರು. ಇದೇ ವೇಳೆ, ರೇವಣ್ಣ ಅವರ ಜೀವನ ಕುರಿತು ಅಭಿನಂದನಾ ಗ್ರಂಥವನ್ನು ಸಹ ಬಿಡುಗಡೆ ಮಾಡಿದರು.

ರೇವಣ್ಣ ಅವರ ಜೀವನ ಕುರಿತು ಅಭಿನಂದನಾ ಗ್ರಂಥ ಬಿಡುಗಡೆ

‘ನಮ್ಮಲ್ಲಿ ಅಸೂಯೆ ಪಡೋರು, ಕಾಲು ಎಳೆಯೋರು ಹೆಚ್ಚು’
ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ನಮ್ಮಲ್ಲಿ ಅಸೂಯೆ ಪಡೋರು, ಕಾಲು ಎಳೆಯೋರು ಹೆಚ್ಚು. ಯಾರೂ ಯಾರನ್ನೂ ದ್ವೇಷ ಮಾಡಬಾರದು. ಪ್ರಜಾಪ್ರಭುತ್ವದಲ್ಲಿ ರಾಜಕೀಯಕ್ಕೆ ಬರಲು ಎಲ್ಲರಿಗೂ ಅವಕಾಶವಿದೆ. ನಾಯಕನಾಗಿ ಬೆಳೆಯಲು ಎಲ್ಲರಿಗೂ ಕೂಡ ಅವಕಾಶ ಇದೆ. ಕೆಲವರಿಗೆ ಸಿಗಬಹುದು, ಕೆಲವರಿಗೆ ಸಿಗದೇ ಇರಬಹುದು. ಬಂದ ಅವಕಾಶ ಬಳಸಿಕೊಂಡಾಗ ನಾಯಕನಾಗಲು ಸಾಧ್ಯ. ಹಣ ಮಾಡಲು ಪಕ್ಷಗಳಿಗೆ ಸೇರೋದಲ್ಲ. ಜನರ ಸೇವೆ ಮಾಡುವುದಕ್ಕೆ ರಾಜಕೀಯಕ್ಕೆ ಬರುತ್ತೇವೆ. ಯಾರೇ ರಾಜಕೀಯಕ್ಕೆ ಬರಬೇಕಾದ್ರೂ ಸ್ಪಷ್ಟತೆ ಇರಬೇಕು ಎಂದು ಸಿದ್ದರಾಮಯ್ಯ ಹೇಳಿದರು.

‘ಇತಿಹಾಸ ಮರೆತವರು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ’
ಸಂವಿಧಾನ ಅಳವಡಿಕೆ ಬದ್ಧತೆ ಇರದಿದ್ರೆ ಯಶಸ್ವಿಯಾಗಲ್ಲ. ಪ್ರಜಾಪ್ರಭುತ್ವ ಯಶಸ್ವಿಯಾಗಲ್ಲ. ದೇವರಾಜ ಅರಸು ಈ ದಾರಿಯಲ್ಲಿ ನಡೆಯಲು ಯತ್ನಿಸಿದ್ರು. ಕೆಳ ಜಾತಿ ಗುರುತಿಸಿ ವಿಧಾನಸೌಧಕ್ಕೆ ಬರುವಂತೆ ಮಾಡಿದ್ರು. ಎಲ್ಲರೂ ಇತಿಹಾಸ ತಿಳಿದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು. ಇತಿಹಾಸ ಮರೆತವರು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಜಾತಿ ವ್ಯವಸ್ಥೆ ಇಂದು ಎಲ್ಲ ಕಡೆಯೂ ಕೆಲಸ ಮಾಡುತ್ತಿದೆ. ನಮ್ಮ ಜಾತಿಯವನು ಎಷ್ಟಾದರೂ ಹೊಡೆಯಲಿ ಅಂತಾರೆ. ಇಂತಹ ಆಲೋಚನೆಗಳು ಇದ್ದರೆ ಬದಲಾವಣೆ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಕಳ್ಳನೋ, ಸುಳ್ಳನೋ ನಮ್ಮವನು ಸಿಎಂ ಆಗಬೇಕೆಂದರೆ ಒಳ್ಳೆಯ ಸಮಾಜ ನಿರ್ಮಾಣ ಹೇಗೆ ಸಾಧ್ಯವಾಗುತ್ತೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ವಿದ್ಯಾವಂತ ಯುವಕರಲ್ಲಿ ಜಾತಿ ವ್ಯವಸ್ಥೆ ಜಾಸ್ತಿ ಇದೆ’
ನಾನು ಅಧಿಕಾರದಲ್ಲಿದ್ದಾಗ ಎಲ್ಲಾ ಬಡವರ ಸಾಲಮನ್ನಾ ಮಾಡಿದೆ. ಕೃಷಿ ಭಾಗ್ಯ, ಅನ್ನಭಾಗ್ಯ, ಇಂದಿರಾ ಕ್ಯಾಂಟಿನ್ ಕೊಟ್ಟೆ. ಈಗ ಸಿದ್ದರಾಮಯ್ಯ ಸಿಎಂ ಆಗೋದು ಬೇಡ ಅಂತಾರೆ. ಸಿದ್ದರಾಮಯ್ಯ ಕುರುಬ ಮತ್ತೆ ಸಿಎಂ ಆಗೋದು ಬೇಡ ಅಂತಾರೆ. ಇಂತಹ ವ್ಯವಸ್ಥೆ ಇದ್ದರೆ ಸಮಾಜ ಬದಲಾವಣೆ ಹೇಗೆ ಸಾಧ್ಯ? ವಿದ್ಯಾವಂತ ಯುವಕರಲ್ಲಿ ಜಾತಿ ವ್ಯವಸ್ಥೆ ಜಾಸ್ತಿ ಇದೆ. ಇದು ನೋವಿನ ಸಂಗತಿ ಎಂದು ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.

‘ಮೋದಿ ಹಳ್ಳಿಯಲ್ಲಿರುವ ಯುವಕರಿಗೆ ಟೋಪಿ ಹಾಕಿದ್ದಾರೆ’
ದೇಶದಲ್ಲಿ ಮೋದಿ ಮೋದಿ ಎಂದು ಹೇಳುತ್ತಾರೆ. ಮೋದಿ ಹಳ್ಳಿಯಲ್ಲಿರುವ ಯುವಕರಿಗೆ ಟೋಪಿ ಹಾಕಿದ್ದಾರೆ. ಪೆಟ್ರೋಲ್, ಡಿಸೇಲ್ ಬೆಲೆ 100 ರೂ. ಸಮೀಪಿಸಿದೆ. ಇಷ್ಟೆಲ್ಲಾ ಆದರೂ ಆಗಲಿ ಬಿಡಿ ಎಂದು ಹೇಳುತ್ತಿದ್ದಾರೆ. ಇಂತಹ ಮನೋಭಾವ ಇದ್ದರೆ ಬದಲಾವಣೆ ಸಾಧ್ಯವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ನಾನು ಅನ್ನಭಾಗ್ಯ ಯೋಜನೆ ಕೊಟ್ಟಾಗ ವಿರೋಧಿಸಿದ್ದರು. ಎಲ್ಲರನ್ನೂ ಸೋಮಾರಿಗಳಾಗಿ ಮಾಡ್ತಿದ್ದೀರಿ ಎಂದಿದ್ದರು. ವಿಧಾನಸಭೆಯಲ್ಲಿಯೇ ಮಾಜಿ ಸಚಿವರು ಹೀಗೆ ಹೇಳಿದ್ರು. ಮಾಜಿ ಸಚಿವರಿಗೆ ನಾನು ಅಂದೇ ಉತ್ತರವನ್ನ ನೀಡಿದ್ದೆ. ಇಷ್ಟು ದಿನ ನೀವು ಭೇಡಿ ಮಾಡುವಷ್ಟು ತಿಂದು, ಕೊಬ್ಬಿದ್ದೀರಿ. ಈಗ, ಬಡವರು ಸ್ವಲ್ಪ ದಿನ ರೆಸ್ಟ್ ಮಾಡಲಿ, ನೀವು ಕೆಲಸ ಮಾಡಿ. ಈ ರೀತಿಯಾಗಿ ಮಾಜಿ ಸಚಿವರಿಗೆ ನಾನು ಹೇಳಿದ್ದೆ ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು.

‘ನಮ್ಮ ಸಮಾಜದಲ್ಲಿ ಕೊಳಕು ಮನಸ್ಸುಗಳು ಇವೆ’
ನಮ್ಮ ಸಮಾಜದಲ್ಲಿ ಕೊಳಕು ಮನಸ್ಸುಗಳು ಇವೆ. ಪ್ರಾಮಾಣಿಕರು, ಸಿದ್ಧಾಂತ ಇಟ್ಟುಕೊಂಡವರನ್ನು ಬೆಂಬಲಿಸಿ. ಜನರು ಬೆಂಬಲಿಸದೆ ಹೋದರೆ ಸಮಾಜ ಉದ್ಧಾರವಾಗಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಕ್ರಿಮಿನಲ್ ಮೊಕದ್ದಮೆ ಇರುವವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಈ ಪೈಕಿ 73 ಜನ ದೊಡ್ಡ ಕ್ರೈಂನಲ್ಲಿ ಭಾಗಿಯಾಗಿದ್ದವರು. ನಮ್ಮ ರಾಜಕಾರಣ ಎತ್ತ ಸಾಗುತ್ತಿದೆ? ಜನ ಎಚ್ಚೆತ್ತುಕೊಳ್ಳದಿದ್ದರೆ ಹಾಳಾಗಿ ಹೋಗುತ್ತವೆ. ರಾಜಕೀಯ ಮೌಲ್ಯಗಳು ಹಾಳಾಗಿ ಹೋಗುತ್ತವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

‘ರಾಜಕೀಯದಲ್ಲಿ ಹೆಚ್ಚು ದಿನ ಉಳೀಬೇಕಾದ್ರೆ ಬದ್ಧತೆ ಬೇಕು’
ರಾಜಕೀಯದಲ್ಲಿ ಹೆಚ್ಚು ದಿನ ಉಳೀಬೇಕಾದ್ರೆ ಬದ್ಧತೆ ಬೇಕು. ಹೆಚ್ಚು ದಿನ ಉಳಿಯಬೇಕಾದ್ರೆ ರಾಜಕೀಯ ಬದ್ಧತೆ ಇರಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಬಾಲ್ಯದಲ್ಲಿ H.M.ರೇವಣ್ಣಗೆ ನಾಯಕತ್ವ ಗುಣಗಳು ಇದ್ದವು. ಆದ್ರೆ ನನಗೆ ಬಾಲ್ಯದಲ್ಲಿ ನಾಯಕತ್ವ ಗುಣ ಇರಲಿಲ್ಲ. ನಂತರ LAW ಓದೋವಾಗ ಆ ಗುಣಗಳು ನನಗೆ ಬಂತು. ನಮ್ಮ ಅಪ್ಪ ನಾನು ಡಾಕ್ಟರ್ ಆಗಬೇಕು ಅಂತಾ ಆಸೆ ಪಟ್ಟಿದ್ರು. ಆದ್ರೆ ಡಾಕ್ಟರ್ ಓದುವಷ್ಟು ಅಂಕ ಸಿಗದೆ ಸೀಟ್​ ಸಿಗಲಿಲ್ಲ. ನನಗೆ ಅಂದು ಡಾಕ್ಟರ್ ಸೀಟು ಸಿಕ್ಕಿದ್ರೆ ಸಿಎಂ ಆಗುತ್ತಿರಲಿಲ್ಲ. ಇಷ್ಟೊಂದು ಜನರ ಪ್ರೀತಿ ಗಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ನಾನು ಇನ್ನೂ ರಾಜಕೀಯ ಮಾಡಬೇಕು ಎಂದುಕೊಂಡಿದ್ದೇನೆ. ಹೀಗಾಗಿ ರೇವಣ್ಣ ರಾಜಕೀಯ ಮುಂದುವರಿಸೋದು ತಪ್ಪಲ್ಲ. ನಾನು, ರೇವಣ್ಣ ರಾಜಕೀಯ ಮನೆತನದಿಂದ ಬಂದವರಲ್ಲ. ನಮ್ಮ ಹಾಗೂ ಹೆಚ್​.ಎಂ.ರೇವಣ್ಣರ ತಂದೆ ಇಬ್ಬರೂ ಕೃಷಿಕರು. ಅಹಿಂದ ಹೋರಾಟ ಮಾಡುವಾಗ ರೇವಣ್ಣನನ್ನ ಬಳಸಿಕೊಳ್ತಿದ್ದೆ. ಹೆಚ್.ಎಂ.ರೇವಣ್ಣ ಸಂಘಟನಾ ಚತುರ ಎಂದು ಸಿದ್ದರಾಮಯ್ಯ ರೇವಣ್ಣರನ್ನು ಹಾಡಿ ಹೊಗಳಿದರು.

ನನ್ನ ಎಲ್ಲಾ ಅಹಿಂದ ಹೋರಾಟದಲ್ಲಿ ರೇವಣ್ಣ ಜೊತೆಗೆ ಇದ್ದ. ಹೆಚ್.ಎಂ.ರೇವಣ್ಣ ಸಾಮಾಜಿಕ ಬದ್ಧತೆ ಇರುವ ರಾಜಕಾರಣಿ. ರೇವಣ್ಣಗೆ ಎಲ್ಲೆಲ್ಲಿ ಏನು ಉಪಯೋಗಿಸಿಕೊಳ್ಳಬೇಕು ಗೊತ್ತಿದೆ. ಕುರುಬರನ್ನ ಎಸ್​ಟಿಗೆ ಸೇರಿಸೋಕೆ‌ ನನ್ನ ವಿರೋಧ ಇರಲಿಲ್ಲ. ಆದರೆ ಸಮಾವೇಶ ಮಾಡೋವಾಗ ಸಿದ್ದರಾಮಯ್ಯ ಬರ್ತಾರೆ. ಸಿದ್ದರಾಮಯ್ಯ ಬರ್ತಾರೆಂದು ಸಮಾವೇಶ ಯಶಸ್ವಿಗೊಳಿಸಿದ. ಕುರುಬರ ಱಲಿ ಯಶಸ್ವಿಯಾಗಲು ಹೆಚ್.ಎಂ.ರೇವಣ್ಣ ಕಾರಣ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:100 ಕೋಟಿ ವಸೂಲಿ ಆರೋಪದಿಂದ ದೋಸ್ತಿ ಸರ್ಕಾರಕ್ಕೆ ಧಕ್ಕೆಯಿಲ್ಲ, ಅನಿಲ್ ದೇಶ್​ಮುಖ್ ತನಿಖೆಯಾಗಲಿ: ಶರದ್ ಪವಾರ್ 

Published On - 5:14 pm, Sun, 21 March 21