ಬೆಂಗಳೂರು: ‘ಸರ್ಕಾರಿ ನೌಕರಿ ಸೇರಲು ಯುವತಿಯರು ಮಂಚ ಹತ್ತಬೇಕಿದೆ’ ಎಂದಿರುವ ಪ್ರಿಯಾಂಕ್ ಖರ್ಗೆ (Congress MLA Priyank Kharge) ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಗರಂ ಆಗಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿರುವ ಮೇಲ್ಮನೆ ಸದಸ್ಯ ನಾರಾಯಣಸ್ವಾಮಿ (BJP MLC Chalavadi Narayanaswamy), ಪ್ರಬುದ್ಧತೆ ಇದ್ದರೆ ಪ್ರಿಯಾಂಕ್ ಖರ್ಗೆ ಹೀಗೆ ಹೇಳುತ್ತಿರಲಿಲ್ಲ. ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆಯಿಂದ ಇದನ್ನೇನಾ ನೀವು ಕಲಿತಿದ್ದು? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಹೇಳಿಕೆ ಇಡೀ ಮಾನವ ಕುಲ ತಲೆತಗ್ಗಿಸುವಂತೆ ಮಾಡಿದೆ. ಸರ್ಕಾರಿ ಕೆಲಸಕ್ಕೆ ಹೋಗುವ ಹೆಣ್ಣು ಮಕ್ಕಳ ಬಗ್ಗೆ ಜನ ಏನು ಮಾತಾಡ್ತಾರೆ ಅನ್ನೋದನ್ನು ಯೋಚನೆ ಮಾಡಲಿ. ಇವರಿಗೆ ಕೇವಲ ಪ್ರಚಾರದ ಗೀಳು. ಪೇಪರ್‌ನಲ್ಲಿ ಬರಬೇಕು ಅಂತಾ ದಿನಕ್ಕೊಂದು ಸ್ಟೇಟ್ ಮೆಂಟ್ ಕೊಡ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಇದು ಇಡೀ ಕಾಂಗ್ರೆಸ್ ಪಕ್ಷಕ್ಕೆ ಕಳಂಕ. ಖರ್ಗೆ ಕುಟುಂಬಕ್ಕೆ ದೊಡ್ಡ ಕಳಂಕ ತಂದಿದ್ದಾರೆ.
ಮೇಟಿ ಅವರು ಏನು ಮಾಡಿದ್ರು ಅದರ ಬಗ್ಗೆ ಪ್ರಿಯಾಂಕ್ ಖರ್ಗೆ ಏನು ಹೇಳ್ತಾರೆ? ಪ್ರಬುದ್ಧತೆ ಏನಾದ್ರೂ ಇದ್ರೆ ಪ್ರಿಯಾಂಕ್ ಖರ್ಗೆ ಹೀಗೆ ಹೇಳುತ್ತಿರಲಿಲ್ಲ. ಇನ್ನೂ ಬಡ್ಡಿಂಗ್ ರಾಜಕಾರಣಿ ನೀವು. ಹಿರಿಯರನ್ನು ನೀವು ಫಾಲೋ ಮಾಡಬೇಕು. ನಿಮ್ಮ ತಂದೆಯಿಂದ ಇದನ್ನೇ ಕಲಿತಿದ್ದಾ? ಹೊಲಸು ಕೂಡ ಕಾಲಿಗೆ ತಾಗಬಾರದು ಅಂತ ಚಪ್ಪಲಿ ಹಾಕುತ್ತೇವೆ. ಆದ್ರೆ ನೀವು ನಾಲಿಗೆಯಲ್ಲೇ ಹೊಲಸು ತುಂಬಿಕೊಂಡಿದ್ದೀರಿ. ನಿಮ್ಮ ಯೋಗ್ಯತೆಗೆ ತಕ್ಕದಾದ ಮಾತು ಆಡಿಲ್ಲ. ಕೂಡಲೇ ನೀವು ಕ್ಷಮೆ ಕೇಳಬೇಕು ಎಂದು ಸೂಚ್ಯವಾಗಿ ಹೇಳಿದ್ದಾರೆ.
ನಾವು ಭಾರತದ ಧ್ವಜವನ್ನು ಮನೆ ಮನೆಗಳ ಮೇಲೆ ಕಟ್ಟುವ ಕೆಲಸ ಮಾಡಿದ್ದೇವೆ. ಆದ್ರೆ ಎಲ್ಲೂ ಬಿಜೆಪಿ ಧ್ವಜವನ್ನು ಹಾರಿಸಿಲ್ಲ, ತೋರಿಸಿಲ್ಲ. ಆದ್ರೆ ಕಾಂಗ್ರೆಸ್ ಮಾತ್ರ ಕಾಂಗ್ರೆಸ್ ಧ್ವಜವನ್ನು ಪೈಪೋಟಿ ಮೇಲೆ ಹಾರಿಸ್ತಿದ್ದಾರೆ. ಸಿದ್ದರಾಮೋತ್ಸವ ಬಳಿಕ ನಾನು ಮೇಲೆ ಬರಬೇಕು ಅಂತ ಡಿ.ಕೆ. ಶಿವಕುಮಾರ್ ಪೈಪೋಟಿ ಮಾಡ್ತಿದ್ದಾರೆ ಎಂದು ನಾರಾಯಣ ಸ್ವಾಮಿ ಮಾರ್ಮಿಕವಾಗಿ ಹೇಳಿದರು.