ರಾಯಚೂರು: ಮಾನ್ವಿ ಪಟ್ಟಣದಲ್ಲಿ ಶಾಲಾ ವಾಹನಗಳಿಗೆ ರೂಲ್ಸ್ & ರೆಗ್ಯೂಲೇಷನ್ಸ್ ಇಲ್ಲದಂತಾಗಿದೆ. ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಶಾಲಾ ವಾಹನಗಳು ಮಕ್ಕಳನ್ನು ಅಪಾಯದಲ್ಲಿ ಕರೆದೊಯ್ಯುತ್ತಿದ್ದಾರೆ.
ಮೌಂಟೇನ್ಸರಿ ಇಂಗ್ಲಿಷ್ ಮಾಧ್ಯಮ ಶಾಲೆ ಮಕ್ಕಳನ್ನು ಅಪಾಯದಲ್ಲಿ ಶಾಲಾ ವಾಹನದಲ್ಲಿ ಕರೆದೊಯ್ಯೂತ್ತಿರುವ ದೃಶ್ಯ ಸಾರ್ವಜನಿಕರ ಮೊಬೈಲ್ನಲ್ಲಿ ಸೆರೆಯಾಗಿದೆ. ಪ್ರಾಣಿಗಳಂತೆ ಮಕ್ಕಳನ್ನು ವಾಹನದಲ್ಲಿ ತುಂಬಿದಲ್ಲದೇ, ವಾಹನದ ಹೊರಭಾಗದ ಫುಟ್ ಸ್ಟ್ಯಾಂಡ್ ಮೇಲೆ ವಿದ್ಯಾರ್ಥಿಯನ್ನು ನಿಲ್ಲಿಸಿಕೊಂಡು ಕರೆದೊಯ್ಯಲಾಗಿದೆ.
ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಶಾಲಾ ಆಡಳಿತ ಮಂಡಳಿ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡ್ತಿದೆ. ಇನ್ನೂ ಮಕ್ಕಳ ಸುರಕ್ಷತೆ ಬಗ್ಗೆ ಗಮನ ಹರಿಸಬೇಕಾದ ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ ಹಾಗೂ ಪೊಲೀಸರು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಾಲಾ ವಾಹನ ಚಾಲಕ ಬಂಧನ:
ಶಾಲಾ ವಾಹನದಲ್ಲಿ ಮಕ್ಕಳನ್ನ ಅಸುರಕ್ಷತೆಯಿಂದ ಸಾಗಿಸಿದ ಆರೋಪದ ಮೇರೆಗೆ ಚಾಲಕ ರಾಮಯ್ಯನನ್ನು ಪೊಲೀಸರು ಬಂಧಿಸಿ, ಶಾಲಾ ವಾಹನವನ್ನೂ ಜಪ್ತಿ ಮಾಡಿದ್ದಾರೆ. ದೃಶ್ಯ ವೈರಲ್ ಆಗ್ತಿದ್ದಂತೆ ಶಾಲಾ ಆಡಳಿತ ಮಂಡಳಿ ಗುರುವಾರವೇ ಚಾಲಕ ರಾಮಯ್ಯನನ್ನ ಸೇವೆಯಿಂದ ವಜಾಗೊಳಿಸಿದೆ. ಘಟನೆ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 9:23 am, Fri, 29 November 19