ರೈಲ್ವೆ ಸಿಬ್ಬಂದಿಗೂ ತಟ್ಟಿದ ಆಕ್ಸಿಜನ್ ಕೊರತೆಯ ಬಿಸಿ; ವಿಭಾಗೀಯ ಆಸ್ಪತ್ರೆಯಲ್ಲಿ ಆತಂಕ

| Updated By: Digi Tech Desk

Updated on: May 04, 2021 | 2:26 PM

ರೈಲ್ವೆ ಇಲಾಖೆ ನಗರದಲ್ಲಿ ನಿರ್ವಹಿಸುತ್ತಿರುವ ವಿಭಾಗೀಯ ರೈಲ್ವೆ ಆಸ್ಪತ್ರೆಯಲ್ಲಿಯೇ ಆಕ್ಸಿಜನ್ ಕೊರತೆ ಕಾಣಿಸಿಕೊಂಡಿದೆ. ಕೆಲವೇ ಗಂಟೆಗಳ ಪೂರೈಕೆಗೆ ಆಕ್ಸಿಜನ್ ಲಭ್ಯವಿದೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳುತ್ತಿದ್ದಾರೆ.

ರೈಲ್ವೆ ಸಿಬ್ಬಂದಿಗೂ ತಟ್ಟಿದ ಆಕ್ಸಿಜನ್ ಕೊರತೆಯ ಬಿಸಿ; ವಿಭಾಗೀಯ ಆಸ್ಪತ್ರೆಯಲ್ಲಿ ಆತಂಕ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ದೇಶದ ಹಲವು ರಾಜ್ಯಗಳಿಗೆ ಆಕ್ಸಿಜನ್ ಕಂಟೇನರ್​ಗಳನ್ನು ಹೊತ್ತ ಲಾರಿಗಳನ್ನು ಸಕಾಲಕ್ಕೆ ತಲುಪಿಸಿ, ಸಾವಿರಾರು ಜನರ ಪ್ರಾಣಿ ಉಳಿಸಿದ ಬಗ್ಗೆ ದೇಶಕ್ಕೆ ರೈಲ್ವೆ ಇಲಾಖೆ ಬಗ್ಗೆ ಹೆಮ್ಮೆಯಿದೆ. ಆದರೆ ಇದೀಗ ರೈಲ್ವೆ ಇಲಾಖೆ ನಗರದಲ್ಲಿ ನಿರ್ವಹಿಸುತ್ತಿರುವ ವಿಭಾಗೀಯ ರೈಲ್ವೆ ಆಸ್ಪತ್ರೆಯಲ್ಲಿಯೇ ಆಕ್ಸಿಜನ್ ಕೊರತೆ ಕಾಣಿಸಿಕೊಂಡಿದೆ. ಸದ್ಯ ರೈಲ್ವೆ ವಿಭಾಗೀಯ ಆಸ್ಪತ್ರೆಯಲ್ಲಿ 80 ಜನ ಕೋವಿಡ್ ಮತ್ತು ನಾನ್ ಕೋವಿಡ್ ರೋಗಿಗಳಿದ್ದಾರೆ. ಅವರಿಗೆಲ್ಲಾ ಕೆಲವೇ ಗಂಟೆಗಳ ಪೂರೈಕೆಗೆ ಆಕ್ಸಿಜನ್ ಲಭ್ಯವಿದೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳುತ್ತಿದ್ದಾರೆ.

‘ನಮ್ಮ ಆಸ್ಪತ್ರೆಯಲ್ಲಿ ಆಮ್ಲಜನಕ ಖಾಲಿಯಾಗುತ್ತಿದೆ. ಪೂರೈಕೆ ಮಾಡಲು ಪ್ರಯತ್ನಿಸ್ತಿದ್ದೇವೆ. ಸಾಧ್ಯವಾದರೆ ಬೇರೆ ಆಸ್ಪತ್ರೆಗಳನ್ನು ನೋಡಿಕೊಳ್ಳಿ’ ಎಂದು ರೋಗಿಗಳಿಗೆ ಸಿಬ್ಬಂದಿ ಸೂಚನೆ ನೀಡುತ್ತಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿರುವ 80 ಮಂದಿ ಕೋವಿಡ್ ಮತ್ತು ನಾನ್ ಕೋವಿಡ್ ರೋಗಿಗಳಲ್ಲಿ ಮುಂದೇನು ಎನ್ನುವ ಆತಂಕ ಮನೆ ಮಾಡಿದೆ. ಆಸ್ಪತ್ರೆ ಸಿಬ್ಬಂದಿ ಸೂಚನೆ ನೀಡಿದ ನಂತರ ರೋಗಿಗಳ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿಯ ನಡುವೆ ವಾಗ್ವಾದ ನಡೆಯಿತು.

ಕಳೆದ ಗುರುವಾರದಿಂದಲೇ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ವಿಚಾರದಲ್ಲಿ ಆತಂಕ ಎದುರಾಗಿದೆ. ಆಸ್ಪತ್ರೆಗೆ ನಿಯಮಿತವಾಗಿ ಆಕ್ಸಿಜನ್ ಪೂರೈಸುವ ಪೀಣ್ಯದ ಸರಬರಾಜುದಾರ ನಿಯಮಿತವಾಗಿ ಆಸ್ಪತ್ರೆಗೆ ಆಕ್ಸಿಜನ್ ತರುತ್ತಿಲ್ಲ. ನಿತ್ಯದ ಕೋಟಾದಷ್ಟು ಆಕ್ಸಿಜನ್ ಸಿಗುತ್ತಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿಯನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್ ಜಾಲತಾಣ ವರದಿ ಮಾಡಿತ್ತು. ಆಕ್ಸಿಜನ್​ ನಿರಂತರ ಪೂರೈಕೆಯ ಮೇಲೆ ಅವಲಂಬಿತರಾಗಿದ್ದ 13 ಕೋವಿಡ್ ರೋಗಿಗಳನ್ನು ಕೊನೇಗಳಿಗೆಯಲ್ಲಿ ಅಲ್ಲಿನ ಸಿಬ್ಬಂದಿ ಹರಸಾಹಸದಿಂದ ಕಾಪಾಡಿದ್ದರು. ದೊಡ್ಡ ದುರಂತವೊಂದನ್ನು ತಪ್ಪಿಸಿದ್ದರು.

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಹಿಂಬಾಗಿಲ ಸಮೀಪವಿರುವ ಈ ಆಸ್ಪತ್ರೆಯನ್ನು ಇದೀಗ ಕೋವಿಡ್-19ಕ್ಕೆ ಚಿಕಿತ್ಸೆ ಕೊಡುವ ಆಸ್ಪತ್ರೆ ಎಂದು ಗುರುತಿಸಲಾಗಿದೆ. 65 ಬೆಡ್​ಗಳಿರುವ ಆಸ್ಪತ್ರೆಯಲ್ಲಿ 15 ಐಸಿಯು ಬೆಡ್​ಗಳಿವೆ. ಕೇಂದ್ರೀಕೃತ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಸೇರಿದಂತೆ ಹಲವು ಅಗತ್ಯ ಸೌಕರ್ಯಗಳು ಇಲ್ಲಿ ಲಭ್ಯವಿದೆ.

ರೈಲ್ವೆ ಸಿಬ್ಬಂದಿಯಲ್ಲಿ ಕೋವಿಡ್ ಸೋಂಕು ಹೆಚ್ಚಾದ ನಂತರ ಆಸ್ಪತ್ರೆಯು ಪ್ರತಿದಿನ 70 ಲೀಟರ್ ಆಕ್ಸಿಜನ್ ಒದಗಿಸಲು ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಆಸ್ಪತ್ರೆಯಲ್ಲಿ ಕೇವಲ 1 ತಾಸಿಗೆ ಸಾಕಾಗುವಷ್ಟು ಆಮ್ಲಜನಕ ಉಳಿದಿರುವುದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ ಆತಂಕದಿಂದ ಮನವಿಗಳನ್ನು ಮಾಡಿಕೊಳ್ಳಲು ಆರಂಭಿಸಿದರು. ವಿಭಾಗೀಯ ವ್ಯವಸ್ಥಾಪಕರೂ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ಎಲ್ಲಿಂದಲಾದರೂ ಆಕ್ಸಿಜನ್ ತರಿಸಬೇಕೆಂದು ಶ್ರಮಿಸಿದರು. ಕೊನೆಗೆ ರಾತ್ರಿ 9 ಗಂಟೆಯ ವೇಳೆಗೆ ಆಕ್ಸಿಜನ್ ಸಿಕ್ಕಿ ರೋಗಿಗಳ ಜೀವ ಉಳಿಯಿತು ಎಂದು ಅಂದಿನ ಭಯಾನಕ ಘಟನಾವಳಿಗಳನ್ನು ಸಿಬ್ಬಂದಿ ನೆನಪಿಸಿಕೊಳ್ಳುತ್ತಾರೆ.

ರೈಲ್ವೆ ಇಲಾಖೆ ಸಿಬ್ಬಂದಿಯಲ್ಲಿ ಕೋವಿಡ್-19 ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ಗುರುವಾರ ಒಂದೇ ದಿನ ಸುಮಾರು 800 ರೈಲ್ವೆ ಸಿಬ್ಬಂದಿ ಮತ್ತು ಅವರ ಕುಟುಂಬದ ಸದಸ್ಯರಲ್ಲಿ ಸೋಂಕು ಪತ್ತೆಯಾಗಿದೆ. ರೈಲ್ವೆ ಆಸ್ಪತ್ರೆಯ ಸಾಮರ್ಥ್ಯ ಮತ್ತು ಆಕ್ಸಿಜನ್ ಸರಬರಾಜು ಪ್ರಮಾಣವನ್ನು ತುರ್ತಾಗಿ ಹೆಚ್ಚಿಸಬೇಕಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ ಹೇಳಿದ್ದಾರೆ.

(Oxygen Crisis in Bangalore Divisional Railway Hospital Covid Patients live in Crisis)

ಇದನ್ನೂ ಓದಿ: ಹುಬ್ಬಳ್ಳಿ: ಐಸೋಲೇಷನ್ ವಾರ್ಡ್​ಗಳಾಗಿ ಪರಿವರ್ತನೆಯಾಗುತ್ತಿದೆ ರೈಲ್ವೆ ಬೋಗಿಗಳು; ಮಹತ್ವದ ಕಾರ್ಯಕ್ಕೆ ಮುಂದಾದ ರೈಲ್ವೆ ಇಲಾಖೆ

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಕೇವಲ 50 ತಾಸಿನೊಳಗೆ ಸಿದ್ಧವಾಯ್ತು ಆಕ್ಸಿಜನ್​ ಘಟಕ; ನಿತ್ಯ 100 ಸಿಲಿಂಡರ್​ಗಳಿಗೆ ಆಮ್ಲಜನಕ ಪೂರೈಕೆ

Published On - 6:46 pm, Sat, 1 May 21