ಬಿಜೆಪಿಗೆ ಪಾಕಿಸ್ತಾನ ಶತ್ರು ದೇಶವೇ ಹೊರತು ನಮಗಲ್ಲ: ಕಾಂಗ್ರೆಸ್ ಎಂಎಲ್​ಸಿ ಬಿಕೆ ಹರಿಪ್ರಸಾದ್

|

Updated on: Feb 29, 2024 | 10:19 AM

ರಾಜ್ಯಸಭೆ ಚುನಾವಣೆಯಲ್ಲಿ ನಾಸೀರ್ ಹುಸೇನ್ ಗೆಲುವು ಸಾಧಿಸಿದ ನಂತರ ವಿಧಾನಸೌಧದಲ್ಲಿ ಬೆಂಬಲಿಗರೊಬ್ಬರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದರು. ಪಾಕ್ ಪರ ಘೋಷಣೆ ಕೂಗಿಲ್ಲ ಎಂದು ಕಾಂಗ್ರೆಸ್ ವಾದಿಸುತ್ತಿದೆ. ಎಫ್​ಐಆರ್ ಕೂಡ ದಾಖಲಾಗಿದೆ. ಈ ನಡುವೆ ಕಾಂಗ್ರೆಸ್ ಎಂಎಲ್​ಸಿ ಬಿಕೆ ಹರಿಪ್ರಸಾದ್ ಅವರು ಬಿಜೆಪಿಗೆ ಪಾಕಿಸ್ತಾನ ಶತ್ರು ರಾಷ್ಟ್ರ ಇರಬಹುದು. ಆದರೆ, ನಮಗಲ್ಲ ಎಂದು ಹೇಳಿದ್ದಾರೆ.

ಬಿಜೆಪಿಗೆ ಪಾಕಿಸ್ತಾನ ಶತ್ರು ದೇಶವೇ ಹೊರತು ನಮಗಲ್ಲ: ಕಾಂಗ್ರೆಸ್ ಎಂಎಲ್​ಸಿ ಬಿಕೆ ಹರಿಪ್ರಸಾದ್
ಬಿಜೆಪಿಗೆ ಪಾಕಿಸ್ತಾನ ಶತ್ರು ದೇಶವೇ ಹೊರತು ನಮಗಲ್ಲ ಎಂದ ಕಾಂಗ್ರೆಸ್ ಎಂಎಲ್​ಸಿ ಬಿಕೆ ಹರಿಪ್ರಸಾದ್
Follow us on

ಬೆಂಗಳೂರು, ಫೆ.29: ಬಿಜೆಪಿಗೆ (BJP) ಪಾಕಿಸ್ತಾನ ಶತ್ರು ರಾಷ್ಟ್ರ ಇರಬಹುದು. ಆದರೆ, ನಮಗಲ್ಲ ಎಂದು ಕಾಂಗ್ರೆಸ್ ಎಂಎಲ್​ಸಿ ಬಿಕೆ ಹರಿಪ್ರಸಾದ್ (BK Hariprasad) ಹೇಳಿದ್ದಾರೆ. ಅಂದಹಾಗೆ, ಇವರದ್ದೇ ಪಕ್ಷದವರಾದ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿದ್ದರು. ಮತ್ತೆ, ಪಾಕ್ ವಿರುದ್ಧ ಯುದ್ಧ ಮಾಡಿದ ಇಂದಿರಾಗಾಂಧಿ ಪಕ್ಷದವರು ನಾವು ಎಂದು ಶಾಸಕ ಎಸ್​ಎನ್ ನಾರಾಯಣಸ್ವಾಮಿ ಅವರು ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ವಿಚಾರವಾಗಿ ಸದನದಲ್ಲಿ ನಡೆದ ಚರ್ಚೆ ವೇಳೆ ಎದೆ ತಟ್ಟಿಕೊಂಡು ಹೇಳಿದ್ದರು. ಗೃಹ ಸಚಿವ ಪರಮೇಶ್ವರ್ ಕೂಡ ಪಾಕ್ ಯುದ್ಧದ ಬಗ್ಗೆ ಪ್ರಸ್ತಾಪಿಸಿದ್ದರು.

ವಿಧಾನ ಪರಿಷತ್ ಕಪಾಲದಲ್ಲಿ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಬಿಕೆ ಹರಿಪ್ರಸಾದ್ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ಗೆ ಪಾಕಿಸ್ತಾನ ಶತ್ರು ರಾಷ್ಟ್ರವಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಾಕ್ ಪರ ಘೋಷಣೆ: ಪತ್ರಕರ್ತರಿಗೆ ಬೈಯ್ದ ಸಂಸದ ನಾಸೀರ್​ಗೆ ನೀರಿಳಿಸಿದ ರಂಗನಾಥ್, ವಿಡಿಯೋ ನೋಡಿ

ಸೋಮವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ನಾಸೀರ್ ಹುಸೇನ್ ವಿಜಯಶಾಲಿ ಎಂದು ಘೋಷಿಸಿದ ನಂತರ ವಿಧಾನಸೌಧದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಒಬ್ಬ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ್ದ. ಈ ಸಂಬಂಧ ಆರೋಪಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಬುಧವಾರ ಉಭಯ ಸದನಗಳಲ್ಲಿ ಗದ್ದಲ ಸೃಷ್ಟಿಸಿತು.

ಪರಿಷತ್ತಿನಲ್ಲಿ ನಡೆದ ಚರ್ಚೆಯ ವೇಳೆ ಹರಿಪ್ರಸಾದ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಶತ್ರು ದೇಶ ಎಂದರೆ ನಿಮ್ಮ (ಬಿಜೆಪಿ) ಪ್ರಕಾರ ಅದು ಪಾಕಿಸ್ತಾನ. ಆದರೆ, ನಮಗೆ ಅದು ಶತ್ರು ದೇಶವಲ್ಲ, ನೆರೆಯ ದೇಶ ಮಾತ್ರ ಎಂದಿದ್ದಾರೆ. ಈ ಹೇಳಿಕೆ ಹೊರಬೀಳುತ್ತಿದ್ದಂತೆ ಹಲವಾರು ಬಿಜೆಪಿ ಸದಸ್ಯರು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಾಕಿಸ್ತಾನದ ಬಗ್ಗೆ ಮೃದುತ್ವವನ್ನು ತೋರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್​ ಪರ ಘೋಷಣೆ ಕೂಗಿದವ ಯಾರು? ಪತ್ತೆ ಮಾಡಿದ ಬ್ಯಾಡಗಿ ಬಿಜೆಪಿ ಮುಖಂಡರು!

ಏನಿದು ಪ್ರಕರಣ?

ಮಂಗಳವಾರ ರಾಜ್ಯಸಭಾ ಚುನಾವಣೆ ಮುಗಿದ ಬಳಿಕ ಚುನಾವಣಾಧಿಕಾರಿಗಳು ಫಲಿತಾಂಶ ಪ್ರಕಟಿಸಿದರು. ಇದರಲ್ಲಿ ಮೂವರು ಕಾಂಗ್ರೆಸ್ ಮತ್ತು ಒಬ್ಬ ಬಿಜೆಪಿ ನಾಯಕ ವಿಜಯಿಗಳಾಗಿದ್ದಾರೆ. ಗೆದ್ದವರಲ್ಲಿ ಕಾಂಗ್ರೆಸ್ ರಾಜ್ಯಸಭಾ ಸಂಸದ ನಾಸೀರ್ ಹುಸೇನ್ ಕೂಡ ಒಬ್ಬರು. ವಿಧಾನಸೌಧದಲ್ಲಿ ಅವರ ಬೆಂಬಲಿಗರು ಹಲವು ಘೋಷಣೆಗಳನ್ನು ಕೂಗಿದರು. ಕಾಂಗ್ರೆಸ್ ಕಾರ್ಯಕರ್ತರೊಬ್ಬರು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ ಶತ್ರು ರಾಷ್ಟ್ರವಲ್ಲವೆಂಬ ಬಿಕೆ ಹರಿಪ್ರಸಾದ್ ಹೇಳಿಕೆ ನಾಚಿಕೆಗೇಡಿನದ್ದು: ಶೋಭಾ ಕರಂದ್ಲಾಜೆ ಆಕ್ರೋಶ

ಎರಡು ಬಾರಿ ಪಾಕ್ ಘೋಷಣೆ ಕೂಗುತ್ತಿದ್ದಂತೆ ಎಚ್ಚೆತ್ತ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ, ಘೋಷಣೆ ಕೂಗುತ್ತಿದ್ದವನ ಬಾಯಿ ಮುಚ್ಚಿ ಘೋಷಣೆ ಕೂಗದಂತೆ ತಡೆದಿದ್ದಾನೆ. ಬೆಂಬಲಿಗನ ದೇಶ ದ್ರೋಹದ ಘೋಷಣೆ ಬಗ್ಗೆ ಪ್ರಶ್ನಿಸಿದ ಮಾಧ್ಯಮದವರ ಮೇಲೆ ನಾಸೀರ್ ಹುಸೇನ್ ಏಯ್ ನಡಿಯಯ್ಯಾ ಎಂದೆಲ್ಲಾ ಆಕ್ರೋಶ ಹೊರಹಾಕಿದ್ದರು.

ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಪಾಕ್ ಪರ ಘೋಷಣೆ ಕೂಗಿದ ವಿಚಾರ ತಿಳಿಯುತ್ತಿದ್ದಂತೆ ವಿಪಕ್ಷ ಬಿಜೆಪಿ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದೆ. ಕಾರ್ಯಕರ್ತರು ಅಲ್ಲಲ್ಲಿ ಪ್ರತಿಭಟನೆ ನಡೆಸಿದ್ದು, ವಿಧಾನಸಭೆ, ಪರಿಷತ್​ನಲ್ಲಿ ಬಿಜೆಪಿ ಸದಸ್ಯರು ತೀವ್ರ ಗದ್ದಲ ಸೃಷ್ಟಿಸಿದ್ದರು. ವಿಪಕ್ಷಗಳ ತರಾಟೆಗೆ ಉತ್ತರಿಸಲಾಗದೆ ಆಡಳಿತ ಪಕ್ಷ ಕಾಂಗ್ರೆಸ್ ನಾಯಕರು ಪರದಾಡಿದರು. ಬಳಿಕ ಪಾಕ್ ಪರ ಘೋಷಣೆ ಕೂಗಿಲ್ಲ ನಾಸೀರ್ ಸಾಬ್ ಜಿಂದಾಬಾದ್ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ಇದಕ್ಕೆ ತೃಪ್ತರಾಗದ ವಿಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:53 am, Thu, 29 February 24