ಲೋಕಲ್​ ವಾರ್​ ವಿಶೇಷ.. ಜೈಲಿನಲ್ಲಿದ್ದುಕೊಂಡೇ ನಾಮಪತ್ರ ಸಲ್ಲಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿ

|

Updated on: Dec 18, 2020 | 2:01 PM

ಕೊಡಗು ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಗ್ರಾಪಂ ಚುನಾವಣೆ ನಡೆಯಲಿದ್ದು, ಎರಡನೇ ಹಂತದಲ್ಲಿ ಅಂದರೆ ಡಿ.27ರಂದು ಪಾಲಿಬೆಟ್ಟ ಚುನಾವಣೆ ನಡೆಯಲಿದೆ. ಇನ್ನು ಬೋಪಣ್ಣ ಜಾಮೀನು ಅರ್ಜಿ ಸಲ್ಲಿಸಿದ್ದು, ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.

ಲೋಕಲ್​ ವಾರ್​ ವಿಶೇಷ.. ಜೈಲಿನಲ್ಲಿದ್ದುಕೊಂಡೇ ನಾಮಪತ್ರ ಸಲ್ಲಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿ
ಪಿ.ಪಿ.ಬೋಪಣ್ಣ, ಬಿಜೆಪಿ ಬೆಂಬಲಿತ ಅಭ್ಯರ್ಥಿ
Follow us on

ಕೊಡಗು: ರಾಜ್ಯದಲ್ಲೀಗ ಲೋಕಲ್​ ವಾರ್​ ರಂಗು.. ಪ್ರತಿ ಗ್ರಾಮಗಳಲ್ಲೂ ಚುನಾವಣೆಗೆ ಭರ್ಜರಿ ಸಿದ್ಧತೆಯೇ ನಡೆಯುತ್ತಿದೆ.. ಪ್ರಚಾರದ ಅಬ್ಬರವಂತೂ ಯಾವ ವಿಧಾನಸಭಾ ಚುನಾವಣೆಗೂ ಕಡಿಮೆ ಇಲ್ಲ.. ಹೀಗಿರುವಾಗ ಕೊಡಗು ಜಿಲ್ಲೆಯಲ್ಲಿ ಒಂದು ವಿಶೇಷ ನಡೆದಿದೆ. ಅಭ್ಯರ್ಥಿಯೋರ್ವರು ಜೈಲಿನಲ್ಲಿ ಇದ್ದುಕೊಂಡೇ ನಾಮಪತ್ರ ಸಲ್ಲಿಸಿದ್ದಾರೆ.

ಪಾಲಿಬೆಟ್ಟ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಪಿ.ಪಿ. ಬೋಪಣ್ಣ ಕೊಡಗು ಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇವರು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದು ಸದ್ಯ ನಾಮಪತ್ರವನ್ನೂ ಸಲ್ಲಿಸಿದ್ದಾರೆ. ಇದೀಗ ಭರ್ಜರಿ ಸುದ್ದಿಯಾಗಿದೆ.

ಜೈಲಿಗೆ ಹೋಗಿದ್ದೇಕೆ?
ಬಿಜೆಪಿ ಕಟ್ಟಾಳು ಆಗಿರುವ ಪಿ.ಪಿ.ಬೋಪಣ್ಣ ಗೆಲುವು ತರುವ ಅಭ್ಯರ್ಥಿ. ಆದರೆ ಆಸ್ತಿ ವ್ಯಾಜ್ಯ ಸಂಬಂಧ ಜಾತಿ ನಿಂದನೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಸದ್ಯ ಮಡಿಕೇರಿ ಕಾರಾಗೃಹದಲ್ಲಿ ಬಂಧಿಯಾಗಿರುವ ಇವರು, ನ್ಯಾಯಾಲಯ ಅನುಮತಿ ಪಡೆದು, ಬೆಂಬಲಿಗರ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ.

ಕಳೆದ 10 ವರ್ಷಗಳಲ್ಲಿ ಬೋಪಣ್ಣ, ಪಾಲಿಬೆಟ್ಟ ಗ್ರಾ.ಪಂ. ಎರಡು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೇ, ಪಾಲಿಬೆಟ್ಟದ ಎಮ್ಮೆಗುಂಡಿ 1ನೇ ವಾರ್ಡ್ ನಿಂದ ನಾಲ್ಕು ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ 20 ವರ್ಷಗಳಿಂದ ಸದಸ್ಯರಾಗಿದ್ದಾರೆ. ಇದೇ ಬೋಪಣ್ಣ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೇ ತ್ಯಾಜ್ಯ ವಿಲೇವಾರಿ, ಸ್ವಚ್ಛತೆ ಕಾಪಾಡಿದ್ದಕ್ಕಾಗಿ ಇದೇ ಪಾಲಿಬೆಟ್ಟ ಗ್ರಾಪಂಗೆ ರಾಷ್ಟ್ರೀಯ ಪ್ರಶಸ್ತಿ ಕೂಡ ಲಭಿಸಿದೆ.

ಎರಡು ಹಂತದಲ್ಲಿ ಚುನಾವಣೆ
ಕೊಡಗು ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಗ್ರಾಪಂ ಚುನಾವಣೆ ನಡೆಯಲಿದ್ದು, ಎರಡನೇ ಹಂತದಲ್ಲಿ ಅಂದರೆ ಡಿ. 27ರಂದು ಪಾಲಿಬೆಟ್ಟ ಚುನಾವಣೆ ನಡೆಯಲಿದೆ. ಇನ್ನು ಬೋಪಣ್ಣ ಜಾಮೀನು ಅರ್ಜಿ ಸಲ್ಲಿಸಿದ್ದು, ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಇದೇ ತಿಂಗಳ 27ರ ಒಳಗಾಗಿ ಜಾಮೀನು ಸಿಗದಿದ್ದರೆ ಜೈಲಿನಲ್ಲಿ ಇದ್ದುಕೊಂಡೆ ಚುನಾವಣೆ ಎದುರಿಸಬೇಕಾಗುತ್ತೆ. ಆದರೆ ಬೋಪಣ್ಣ ಪರ ಅವರ ಬೆಂಬಲಿಗರು ಪ್ರಚಾರ ನಡೆಸುತ್ತಿದ್ದಾರೆ.

ಮತ ಕೇಳಲು ಮನೆಬಾಗಿಲಿಗೆ ಬರುವವರ ಕೈಲಿ ಚಿಕನ್​-ಮಟನ್​ ಪ್ಯಾಕೆಟ್​; ಕೊಪ್ಪಳದಲ್ಲಿ ‘ರಾತ್ರಿ ಆಮಿಷ’ ಮಾಮೂಲು

Published On - 1:42 pm, Fri, 18 December 20