ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗಳ ಮೇಲೆ ಹಾಯ್ದು 17 ವಾಹನ ಜಖಂ

ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗಳ ಮೇಲೆ ಹಾಯ್ದು 17 ವಾಹನ ಜಖಂ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 19, 2024 | 10:15 AM

ಬಾಣಾವರ ಪ್ರಕರಣದಲ್ಲಿ ಯಾರೂ ಗಾಯಗೊಳ್ಳದಿರುವುದು ಸಮಾಧಾನಕರ ಸಂಗತಿ. ಕಾರಿನ ವೇಗದ ರಭಸಕ್ಕೆ ಪ್ರಾಣಾಪಾಯ ಉಂಟಾಗುತಿತ್ತು. ಯಾಕೆಂದರೆ ಕಾರು ಗುದ್ದಿದ ರಭಸಕ್ಕೆ ಬಸ್ ನಿಲ್ದಾಣದ ಗೋಡೆ ಕುಸಿದು ಬಿದ್ದಿದೆ. ಕಾರಿನ ಚಾಲಕ ಮದ್ಯದ ಅಮಲಿನಲ್ಲಿದ್ದನೋ ಎಂಬ ಅನುಮಾನ ಸಹ ಮೂಡುತ್ತದೆ.

ಹಾಸನ: ಇಂಥ ದೃಶ್ಯಗಳು ಕೇವಲ ಸಿನಿಮಾದಲ್ಲಿ ಮಾತ್ರ ನೋಡಲು ಸಾಧ್ಯ. ಹಳೆಯ ಸನಿಮಾಗಳಲ್ಲಿ ಫೈಟ್ ಸೀನ್ ನಡೆಯುತ್ತಿದ್ದಾಗ ಹೀರೋ ಬಾರಿಸಿದ ಏಟು ಅಥವಾ ಒದೆತದ ರಭಸಕ್ಕೆ ವಿಲನ್ ಹಾರಿ ಹೋಗಿ ಸಾಲಾಗಿ ನಿಲ್ಲಿಸಿದ್ದ ಸೈಕಲ್ ಗಳ ಮೇಲೆ ಧೊಪ್ಪನೆ ಬಿದ್ದಾಗ ಅವೆಲ್ಲ ದುಡುದುಡು ಅಂತ ಉರುಳಿ ಬೀಳುತ್ತಿದ್ದವು. ಈಗಲೂ ಆ ಬಗೆಯ ಸೀನ್ ಗಳನ್ನು ಸಿನಿಮಾಗಳಲ್ಲಿ ನೋಡಬಹುದು. ಇಲ್ಲಿ ಕಾಣುತ್ತಿರುವ ದೃಶ್ಯ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಬಾಣಾವರ ಹೋಬಳಿಯಲ್ಲಿರುವ ಕೆಂಕೆರೆ ಗೇಟ್ ಬಳಿ ಜರುಗಿದೆ. ಮಳೆ ಜೋರಾಗಿ ಸುರಿಯುತ್ತಿದ್ದ ಕಾರಣ ಬೈಕ್ ಸವಾರರು ತಮ್ಮ ವಾಹನಗಳನ್ನು ಅಲ್ಲಿನ ಬಸ್ ನಿಲ್ದಾಣದ ಬದಿಯ ರಸ್ತೆಯಲ್ಲಿ ನಿಲ್ಲಿಸಿ ಬಸ್ ಸ್ಟಾಪ್ ನಲ್ಲಿ ಆಶ್ರಯ ಪಡೆದಿದ್ದಾರೆ. ದುಬಾರಿ ಕಾರೊಂದನ್ನು ಓಡಿಸಿಕೊಂಡು ಬರುತ್ತಿದ್ದವನಿಗೆ ಪ್ರಾಯಶಃ ಮಳೆಯಿಂದಾಗಿ ರಸ್ತೆ ಸರಿಯಾಗಿ ಕಂಡಿಲ್ಲ. ಕಾರಿನ ಮೇಲೆ ಅವನ ನಿಯಂತ್ರಣ ತಪ್ಪಿದ್ದರಿಂದ ಬಸ್ ಸ್ಟ್ಯಾಂಡ್ ಬಳಿ ನಿಲ್ಲಿಸಿದ್ದ 17 ಬೈಕ್ ಗಳಿಗೆ ಗುದ್ದಿದ್ದಾನೆ. ನೆಲ್ಲಕುರುಳಿದ ವಾಹನಗಳೆಲ್ಲ ಜಖಂಗೊಂಡಿವೆ. ಬೈಕ್ ಗಳಿಗೆ ಗುದ್ದಿದ ಬಳಿಕ ಕಾರು ಬಸ್ ನಿಲ್ದಾಣದ ಗೋಡೆಗೂ ಗುದ್ದಿದೆ, ಹಾಗಾಗಿ ಅದು ಕುಸಿದುಬಿದ್ದಿದೆ. ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಗದಗ: ಸರ್ಕಾರಿ ಬಸ್, ಕಾರು ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರ ಸಾವು