ಅನ್ಲಾಕ್ 3.0: ರಾಜ್ಯದ ಕಂಪನಿ, ಕಾರ್ಖಾನೆಗಳ ನೌಕರರಿಗೆ ಲಸಿಕೆ ಕಡ್ಡಾಯ; ಲಸಿಕೆ ಇಲ್ಲದೆ ವಾಪಾಸ್ಸಾಗುತ್ತಿದ್ದಾರೆ ಜನ
ರಾಜ್ಯ ಸರ್ಕಾರವು ಅನ್ಲಾಕ್ 3.0ನಲ್ಲಿ ಕಂಪನಿ ಹಾಗೂ ಕಾರ್ಖಾನೆಗಳಿಗೆ ನೂರು ಪ್ರತಿಶತ ಕಾರ್ಮಿಕರೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ. ಆದರೆ ಕಾರ್ಮಿಕರಿಗೆ ಕಡ್ಡಾಯವಾಗಿ ವ್ಯಾಕ್ಸಿನ್ ಆಗಿರಬೇಕು ಎಂಬ ಆದೇಶವನ್ನೂ ನೀಡಿದೆ. ಆದರೆ ವ್ಯಾಕ್ಸಿನ್ ಕೇಂದ್ರಗಳಲ್ಲಿ ಲಸಿಕೆ ಕೊರತೆಯಿಂದ ಜನರು ಸರದಿಯಲ್ಲಿ ನಿಂತು ವಾಪಸ್ಸಾಗುತ್ತಿದ್ದಾರೆ.
ಬೆಂಗಳೂರು: ಬೆಂಗಳೂರಿನ ಕೆ.ಸಿ.ಜನರಲ್ ಲಸಿಕಾ ಕೇಂದ್ರದಲ್ಲಿ ಇಂದು ಮುಂಜಾನೆಯಿಂದಲೇ ಜನರು ಲಸಿಕೆಗೆ ಕಾದಿದ್ದರು. ಕಾರಣ, ಮೂರನೇ ಹಂತದ ಅನ್ಲಾಕ್ನಲ್ಲಿ ರಾಜ್ಯ ಸರ್ಕಾರವು ಕಾರ್ಖಾನೆಗಳು ಹಾಗೂ ಕಂಪನಿಗಳು ನೂರು ಪ್ರತಿಶತ ಕೆಲಸಗಾರರೊಂದಿಗೆ ಕಾರ್ಯನಿರ್ವಹಿಸಲಲು ಅನುಮತಿ ನೀಡಿದೆ ಹಾಗೂ ಕೆಲಸಕ್ಕೆ ಹಾಜರಾಗುವ ಕಾರ್ಮಿಕರಿಗೆ ವ್ಯಾಕ್ಸಿನ್ ಕಡ್ಡಾಯಗೊಳಿಸಿದೆ. ಭಾನುವಾರವಾದ್ದರಿಂದ ಮುಂಜಾನೆ ಐದು ಗಂಟೆಯಿಂದಲೇ ಜನರು ಲಸಿಕಾ ಕೇಂದ್ರದ ಮುಂದೆ ನೆರೆದಿದ್ದರು. ಆದರೆ ವ್ಯಾಕ್ಸಿನ್ ಕೊರತೆಯಿಂದ ವಾಪಾಸ್ಸಾಗುತ್ತಿದ್ದಾರೆ.
ಕೆ.ಸಿ.ಜನರಲ್ ವ್ಯಾಕ್ಸಿನ್ ಕೇಂದ್ರದಲ್ಲಿ ಕೊವ್ಯಾಕ್ಸಿನ್ ಲಸಿಕೆ 200 ಜನರಿಗೆ ಹಾಗೂ ಕೊವಿಶೀಲ್ಡ್ ಲಸಿಕೆ 50 ಜನರಿಗೆ ಮಾತ್ರ ಲಭ್ಯವಿದೆ. ಆದರೆ ವ್ಯಾಕ್ಸಿನ್ ಕೇಂದ್ರದ ಮುಂದೆ ಮುಂಜಾನೆ 5 ಗಂಟೆಯಿಂದ 500ಕ್ಕೂ ಹೆಚ್ಚು ಜನ ಸಾಲುಗಟ್ಟಿ ನಿಂತಿದ್ದರು. ಸಾಮಾಜಿಕ ಅಂತರವನ್ನೂ ಮರೆತು ಜನರು ಸರದಿಯಲ್ಲಿ ಕಾಯುತ್ತಿದ್ದರು.ಆದರೆ ಲಸಿಕೆಯ ಕೊರತೆಯಿದೆ ಎಂದು ತಿಳಿಯುತ್ತಿದ್ದಂತೆ ನಿರಾಶೆಯಿಂದ ಮರಳಿ ಹೋಗುತ್ತಿದ್ದಾರೆ.
ಸರ್ಕಾರವು ಲಸಿಕೆ ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ ನಿರ್ಧಾರವಾದರೂ ಅದರ ಲಭ್ಯತೆಯ ಬಗ್ಗೆ ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಜನರು ಸಾಮಾಜಿಕ ಅಂತರವನ್ನೂ ಮರೆತು ಸರದಿಯಲ್ಲಿ ಲಸಿಕೆ ಸಿಗದೆ ಮರಳಿ ಹೋಗುತ್ತಿರುವುದು ಕೋವಿಡ್ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗಬಲ್ಲದು. ಈ ಸಮಯದಲ್ಲಿ ಜನರೂ ತಾಳ್ಮೆಯಿಂದ ಸಾಮಾಜಿಕ ಅಂತರ ಪಾಲಿಸಿದರೆ ಒಳಿತು.
(People are going back because of vaccination shortage in Bengaluru)
ಇದನ್ನೂ ಓದಿ: Sputnik V: ಕೋವಿಶೀಲ್ಡ್, ಕೋವಾಕ್ಸಿನ್ ನಂತರ ಮತ್ತೊಂದು ಕೊರೊನಾ ಲಸಿಕೆ, ಸ್ಪುಟ್ನಿಕ್ ವಿ ಬೆಂಗಳೂರಿನಲ್ಲಿ ಲಭ್ಯ
Published On - 11:00 am, Sun, 4 July 21