ಕೊಪ್ಪಳ, ಜುಲೈ 03: ಜಿಲ್ಲೆಯಲ್ಲಿ ಕರಡಿಗಳ (bear) ಕಾಟದಿಂದ ರೈತರು ಮತ್ತು ಸಾರ್ವಜನಿಕರು ಕಂಗಾಲಾಗಿದ್ದಾರೆ. ಅದರಲ್ಲೂ ರಾತ್ರಿ ಸಮಯದಲ್ಲಿ ಜನರು ಅಡ್ಡಾಡಲು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅನೇಕ ಕಡೆ ಕರಡಿಗಳು ಪ್ರತ್ಯಕ್ಷವಾಗುತ್ತಿದ್ದರೆ, ಇನ್ನು ಹಲವಡೆ ಜನರ ಮೇಲೆ ದಾಳಿ ಮಾಡುತ್ತಿವೆ. ಮೇಲಿಂದ ಮೇಲೆ ಕರಡಿ ದಾಳಿಗಳು ಹೆಚ್ಚಾಗುತ್ತಿರುವುದಕ್ಕೆ ಜನರು ಸರ್ಕಾರದ (Govt) ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಅನೇಕ ತಿಂಗಳ ಹಿಂದೆಯೇ ಕರಡಿ ಸಂರಕ್ಷಿತ ಪ್ರದೇಶ ಘೋಷಣೆ ಮಾಡಿದ್ದರು ಅದು ಆರಂಭವಾಗದೇ ಇರುವುದೇ ಕರಡಿ ಹಾವಳಿ ಹೆಚ್ಚಾಗಲು ಕಾರಣ ಅಂತಿದ್ದಾರೆ.
ರಾಜ್ಯದಲ್ಲಿ ಕಲ್ಲು ಬಂಡೆಯ ಬೆಟ್ಟ ಗುಡ್ಡಗಳ ಪ್ರದೇಶ ಇರುವುದು ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಯಲ್ಲಿ. ಇಲ್ಲಿನ ಬೆಟ್ಟ ಗುಡ್ಡಗಳು ಗುಹೆಗಳ ರೀತಿಯಲ್ಲಿ ಇರೋದರಿಂದ ಕರಡಿ ಮತ್ತು ಚಿರತೆ ಸೇರಿದಂತೆ ಕೆಲ ಪ್ರಾಣಿಗಳ ವಾಸಸ್ಥಾನಕ್ಕೆ ಹೇಳಿ ಮಾಡಿಸಿದಂತಿವೆ. ಇದೇ ಕಾರಣಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ಕರಡಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಆದರೆ ಜನವಸತಿ ಬೆಳೆದಂತೆ ಅರಣ್ಯ ಪ್ರದೇಶದಲ್ಲಿ ಆಹಾರ ಮತ್ತು ನೀರು ಸಿಗದೇ ಇರೋದರಿಂದ ಮತ್ತು ಅರಣ್ಯ ಪ್ರದೇಶ ಒತ್ತುವರಿಯಾಗಿದ್ದರಿಂದ, ಕರಡಿಗಳು ಬೆಟ್ಟ ಗುಡ್ಡವನ್ನು ಬಿಟ್ಟು ನಾಡಿನತ್ತ ಬರುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇದೆ.
ಇದನ್ನೂ ಓದಿ: ಕೊಪ್ಪಳ: ಮದುವೆಯಾಗಲು ಹುಡುಗಿ ಹುಡುಕಿ ಕೊಡಿ ಎಂದು ಡಿಸಿಗೆ ಮನವಿ ಮಾಡಿದ ರೈತ
ಜಿಲ್ಲೆಯ ಗಂಗಾವತಿ ಮತ್ತು ಕೊಪ್ಪಳ ತಾಲೂಕಿನ ಅನೇಕ ಕಡೆ ಕರಡಿ ಕಾಟ ಹೆಚ್ಚಾಗಿದೆ. ಕನಕಗಿರಿ ತಾಲೂಕಿನ ರಾಮಪುರದಲ್ಲಿ ವ್ಯಕ್ತಿಯೋರ್ವನ ಮೇಲೆ ಕರಡಿ ದಾಳಿ ನಡೆದಿರುವ ಪ್ರಕರಣ ಕೆಲ ದಿನಗಳ ಹಿಂದೆ ನಡೆದಿದೆ. ಯಲಬುರ್ಗಾ ತಾಲೂಕಿನ ಚಿಲಕಮುಖಿ, ಹಿರೇವಂಕಲಕುಂಟಾ ಸೇರಿದಂತೆ ಅನೇಕ ಕಡೆ ಕರಡಿಗಳು ಪ್ರತ್ಯಕ್ಷವಾಗಿ ಜನರ ಭಯವನ್ನು ಹೆಚ್ಚಿಸಿವೆ. ರಾತ್ರಿ ಸಮಯದಲ್ಲಿ ಯಾರಾದ್ರು ಏಕಾಂಗಿಯಲ್ಲಿ ಅಡ್ಡಾಡುತ್ತಿರುವುದನ್ನು ಕಂಡರೆ, ಕರಡಿಗಳು ಪ್ರಾಣಭಯದಿಂದ ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ.
ಇನ್ನು ಕರಡಿ ಕಾಟದಿಂದ ಬೆಟ್ಟಗುಡ್ಡಗಳ ಸುತ್ತಮುತ್ತಲಿನ ರೈತರು ಕಂಗಾಲಾಗಿದ್ದಾರೆ. ರಾತ್ರಿ ಸಮಯದಲ್ಲಿ ಕೃಷಿ ಜಮೀನಿಗೆ ದಾಳಿ ಇಡುತ್ತಿದ್ದ ಕರಡಿಗಳು ಕಲ್ಲಂಗಡಿ, ಪಪ್ಪಾಯ ಸೇರಿದಂತೆ ಕೆಲ ಬೆಳೆಗಳನ್ನು ತಿಂದು ಹೋಗುತ್ತಿವೆ. ಹೀಗಾಗಿ ರೈತರು ಅನೇಕ ತಿಂಗಳ ಕಾಲ ಕಷ್ಟಪಟ್ಟು ಬೆಳೆಯುತ್ತಿದ್ದ ಬೆಳೆ ಕೈಗೆ ಬರುವ ಮುನ್ನವೇ ಕರಡಿಗಳ ಬಾಯಿಗೆ ಆಹಾರವಾಗುತ್ತಿದೆ. ಹೀಗಾಗಿ ರೈತರು ಸೇರಿದಂತೆ ಜಿಲ್ಲೆಯ ಜನರು ಕರಡಿ ಸಂರಕ್ಷಿತ ಪ್ರದೇಶ ಅಂತ ಘೋಷಿಸಬೇಕು. ಅವುಗಳನ್ನು ಒಂದಡೆ ಬಿಟ್ಟು, ಅವು ನಾಡಿನತ್ತ ಬರದಂತೆ ತಡೆಯಬೇಕು ಅನ್ನೋ ಆಗ್ರಹವನ್ನು ಅನೇಕ ವರ್ಷಗಳಿಂದ ಮಾಡುತ್ತಲೇ ಇದ್ದಾರೆ.
ಈ ಬಗ್ಗೆ ಕೊಪ್ಪಳ ಜಿಲ್ಲೆಯ ಅರಣ್ಯಾಧಿಕಾರಿಗಳು ಕಳೆದ ವರ್ಷವೇ ಸರ್ಕಾರಕ್ಕೆ ಪ್ರಸ್ತಾವಣೆಯನ್ನು ಕೂಡ ಸಲ್ಲಿಸಿದ್ದರು. ಜೊತೆಗೆ ಬೆಳಗಾವಿ ಅಧಿವೇಶನದಲ್ಲಿ ಇಲ್ಲಿನ ಅನೇಕ ಜನಪ್ರತನಿಧಿಗಳು ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಹೀಗಾಗಿ ರಾಜ್ಯ ಸರ್ಕಾರ ಕಳೆದ ಪೆಬ್ರವರಿ ತಿಂಗಳಲ್ಲಿ ಕೊಪ್ಪಳ ಜಿಲ್ಲೆಯ ಕೆಲ ಭಾಗವನ್ನು ಕರಿಡಿ ಸಂರಕ್ಷಿತ ಪ್ರದೇಶ ಅಂತ ಘೋಷಿಸಿದೆ. ಕೊಪ್ಪಳ ತಾಲೂಕಿನ ಅರಸಿನಕೇರಿ, ಚಿಲಕಮುಕಿ ಸೇರಿದಂತೆ ಗಂಗಾವತಿ ತಾಲೂಕಿನ ಹೀರೆ ಸುಳಿಕೇರಿ ಪ್ರದೇಶವನ್ನು ಸರ್ಕಾರ ಕರಡಿ ಸಂರಕ್ಷಿತ ಪ್ರದೇಶ ಅಂತ ಘೋಷಿಸಿದೆ.
ಇದನ್ನೂ ಓದಿ: ಕೊಪ್ಪಳದ 415 ಶಾಲಾ ಕೊಠಡಿಗಳಿಗೆ ಬೇಕಿದೆ ದುರಸ್ತಿ ಭಾಗ್ಯ!
ಸರಿಸುಮಾರು 2918 ಹೆಕ್ಟೇರ್ ಪ್ರದೇಶವನ್ನು ಕರಡಿ ಸಂರಕ್ಷಿತ ಪ್ರದೇಶ ಅಂತ ಘೋಷಣೆ ಮಾಡಿದೆ. ಜೊತೆಗೆ ಕರಡಿ ಸಂರಕ್ಷಿತ ಪ್ರದೇಶದ ಸುತ್ತಮುತ್ತಲಿನ ಹತ್ತು ಕಿಲೋ ಮೀಟರ ಪ್ರದೇಶವನ್ನು ಸೂಷ್ಮ ಪ್ರದೇಶ ಅಂತ ಮ್ಯಾಪಿಂಗ್ ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಇನ್ನು ಸಂರಕ್ಷಿತ ಪ್ರದೇಶ ಅಂತ ಘೋಷಣೆ ಮಾಡೋದರಿಂದ, ಕೊಪ್ಪಳ ಜಿಲ್ಲೆಯಲ್ಲಿ ಕೂಡಾ ಶೆಡ್ಯೂಲ್ ಒಂದರಲ್ಲಿ ಬರುವ ಸಂರಕ್ಷಿತ ಪ್ರಾಣಿಗಳು ಇವೆ ಅನ್ನೋದು ಗೊತ್ತಾಗುತ್ತದೆ. ಜೊತೆಗೆ ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತದೆ.
ಅವುಗಳ ಬೇಟಿಯಾಡುವದು, ಅವುಗಳಿಗೆ ತೊಂದರೆಯನ್ನುಂಟು ಮಾಡುವವರ ವಿರುದ್ದ ಕಠೀಣ ಕ್ರಮ ಕೈಗೊಳ್ಳಲು ಅನಕೂಲವಾಗುತ್ತದೆ. ಆದ್ರೆ ಕರಡಿ ಸಂರಕ್ಷಿತ ಪ್ರದೇಶ ಅಂತ ಘೋಷಣೆ ಮಾಡಿರುವ ಸರ್ಕಾರ, ಇನ್ನು ಅದನ್ನು ಆರಂಭಿಸಿಲ್ಲ. ಹೌದು ಹಣಕಾಸಿನ ಕೊರತೆ ಸೇರಿದಂತೆ ಕೆಲ ನೆಪಗಳನ್ನು ಹೇಳಿಕೊಂಡು, ಇನ್ನು ಸರ್ಕಾರ ಕರಡಿ ಸಂರಕ್ಷಿತ ಪ್ರದೇಶವನ್ನು ಇನ್ನು ಆರಂಭಿಸಿಲ್ಲ. ಇದೇ ಕಾರಣಕ್ಕೆ ಕರಡಿಗಳು ಆಹಾರ ಹುಡುಕಿಗೊಂಡು ಜನವಸತಿ ಪ್ರದೇಶಗಳಿಗೆ ಬರುತ್ತಿವೆ.
ಕೇವಲ ಕರಡಿ ಸಂರಕ್ಷಿತ ಪ್ರದೇಶ ಘೋಷಣೆ ಮಾಡಿದ್ರೆ ಸಾಲದು, ಕರಡಿ ಧಾಮವನ್ನು ನಿರ್ಮಾಣ ಮಾಡಬೇಕು. ಕರಡಿಗಳು ಸಂರಕ್ಷಿತ ಪ್ರದೇಶದಿಂದ ಹೊರಬಾರದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಅನ್ನೋದು ಸಾರ್ವಜನಿಕರ ಆಗ್ರಹವಾಗಿದೆ. ಆದರೆ ಈ ಸರ್ಕಾರ ಇನ್ನು ಹಣ ಬಿಡುಗಡೆ ಮಾಡದೇ ಇರೋದು ಯೋಜನೆ ವಿಳಂಬಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಸರ್ಕಾರ ಮತ್ತು ಅರಣ್ಯ ಇಲಾಖೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.