ಕೊಪ್ಪಳ: ಮದುವೆಯಾಗಲು ಹುಡುಗಿ ಹುಡುಕಿ ಕೊಡಿ ಎಂದು ಡಿಸಿಗೆ ಮನವಿ ಮಾಡಿದ ರೈತ

ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಇಂದು ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಕುಡಿಯುವ ನೀರು, ರಸ್ತೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಜನಸ್ಪಂದನದಲ್ಲಿ ಅಧಿಕಾರಿಗಳಿಗೆ ಅರ್ಜಿ ನೀಡಿದರೆ ಓರ್ವ ಯುವಕ ಮಾತ್ರ ನನಗೆ ಕನ್ಯಾ ಹುಡುಕಿ ಎಂದು ಅರ್ಜಿ ನೀಡಿದ್ದಾನೆ. ರೈತರ ಮಕ್ಕಳಿಗೆ ಯಾರು ಕನ್ಯಾ ಕೊಡ್ತಿಲ್ಲಾ ಅಂತ ನೋವು ತೋಡಿಕೊಂಡಿದ್ದಾನೆ.

ಕೊಪ್ಪಳ: ಮದುವೆಯಾಗಲು ಹುಡುಗಿ ಹುಡುಕಿ ಕೊಡಿ ಎಂದು ಡಿಸಿಗೆ ಮನವಿ ಮಾಡಿದ ರೈತ
ಮದ್ವೆಯಾಗಲು ಹುಡುಗಿ ಹುಡುಕಿ ಕೊಡಿ ಎಂದು ಡಿಸಿಗೆ ಮನವಿ ಮಾಡಿದ ರೈತ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಗಂಗಾಧರ​ ಬ. ಸಾಬೋಜಿ

Updated on: Jun 26, 2024 | 10:36 PM

ಕೊಪ್ಪಳ, ಜೂನ್ 26: ಅಲ್ಲಿ ಜನಸ್ಪಂದನ (janaspandana) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ (DC) ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಜನರ ಸಂಕಷ್ಟಗಳನ್ನು ಕೇಳಿ ಅಲ್ಲಿಯೇ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತಿದ್ದರು. ಆದರೆ ಇದೇ ಜನಸ್ಪಂದನ ಕಾರ್ಯಕ್ರಮಕ್ಕೆ ಯುವಕನೋರ್ವ ಅರ್ಜಿ ಹಿಡಿದು ಬಂದು, ಜಿಲ್ಲಾಧಿಕಾರಿಗೆ ತನ್ನ ನೋವನ್ನು ಹೇಳಿಕೊಂಡಿದ್ದು, ಅರ್ಜಿದಾರನ ಸಮಸ್ಯೆಯನ್ನು ಕೇಳಿ ಸ್ವತ ಜಿಲ್ಲಾಧಿಕಾರಿಯೇ ಶಾಕ್ ಆಗಿದ್ದಾರೆ. ಯಾಕಂದ್ರೆ ಆತ ಅರ್ಜಿ ಹಿಡಿದು ಬಂದಿದ್ದು ಮದುವೆಯಾಗಲು ಕನ್ಯಾ ಕೊಡಿಸಿ ಅಂತ.

ಕನಕಗಿರಿ ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಇಂದು ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯಶೋಧಾ ವಂಟಗೋಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಯಾಗಿದ್ದರು. ಕಾರ್ಯಕ್ರಮದಲ್ಲಿ ನೂರಾರು ಜನರು ತಮ್ಮ ಸಂಕಷ್ಟಗಳನ್ನು ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದರು.

ದಯವಿಟ್ಟು ರೈತರ ಮಕ್ಕಳಿಗೆ ಕನ್ಯಾ ಹುಡುಕಿ ಕೊಡಿ

ಬಹುತೇಕರ ಸಮಸ್ಯೆಗಳು ಕುಡಿಯುವ ನೀರು, ಗ್ರಾಮಕ್ಕೆ ರಸ್ತೆ ಸೇರಿದಂತೆ ಅನೇಕ ರೀತಿಯ ಸಮಸ್ಯೆಗಳನ್ನು ಜನರು ಹೊತ್ತು ತಂದಿದ್ದರು. ಆದರೆ ಇದೇ ಸಮಯದಲ್ಲಿ ವೇದಿಕೆಗೆ ಸಂಗಪ್ಪ ಎಂಬ ಯುವಕ ಬಂದು ಅರ್ಜಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿ, ದಯವಿಟ್ಟು ರೈತರ ಮಕ್ಕಳಿಗೆ ಕನ್ಯಾ ಹುಡುಕಿ ಕೊಡಿ ಅಂತ ಮನವಿ ಮಾಡಿದ್ದಾನೆ.

ಇದನ್ನೂ ಓದಿ: ರೈತರ ಮಕ್ಕಳಿಗೆ ಕನ್ಯೆ ಹುಡುಕಿ ಕೊಡಿ; ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ ಯುವಕ

ಕನಕಗಿರಿ ಪಟ್ಟಣದ ನಿವಾಸಿಯಾಗಿರುವ ಮೂವತ್ತೈದು ವರ್ಷದ ಸಂಗಪ್ಪ, ಜಿಲ್ಲಾಧಿಕಾರಿಗಳಿಗೆ ಇಂತಹದೊಂದು ಬೇಡಿಕೆಯನ್ನು ಇಡೇರಿಸುವಂತೆ ಲಿಖಿತವಾಗಿ ನೀಡಿ, ಮನವಿ ಮಾಡಿದ್ದಾನೆ. ತಾನು ರೈತನಿದ್ದೇನೆ. ಕಳೆದ ಹತ್ತು ವರ್ಷಗಳಿಂದ ಮದುವೆಯಾಗಲು ಕನ್ಯಾ ಹುಡುಕುತ್ತಿದ್ದೇನೆ. ಆದರೆ ನನಗೆ ಯಾರು ಕೂಡ ಕನ್ಯಾ ಕೊಡ್ತಿಲ್ಲಾ. ಇದರಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ನನ್ನಂತೆ ಅನೇಕ ರೈತರ ಮಕ್ಕಳಿಗೆ ಯಾರು ಕೂಡ ಕನ್ಯಾ ಕೊಡ್ತಿಲ್ಲಾ ಅಂತ ನೋವು ತೋಡಿಕೊಂಡಿರುವ ಸಂಗಪ್ಪ, ದಯವಿಟ್ಟು ಯಾವುದಾದ್ರು ಒಳ್ಳೆಯ ಯೋಜನೆ ರೂಪಿಸಿ ಕನ್ಯಾ ಸಿಗುವಂತೆ ಮಾಡಿ ಅಂತ ಅರ್ಜಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾನೆ.

ಅರ್ಜಿಯನ್ನು ನೋಡಿ ನೆರೆದಿರುವವರು ನಕ್ಕರು ಕೂಡ, ಸಂಕೋಚಪಡದ ಸಂಗಪ್ಪ, ಮೈಕ್ ಹಿಡಿದು ವೇದಿಕೆಯ ಮೇಲೆ ಜಿಲ್ಲಾಧಿಕಾರಿಗಳಿಗೆ ಮತ್ತೆ ತನ್ನ ನೋವನ್ನು ಹೇಳಿ, ಕನ್ಯಾ ಹುಡುಕಿ ಕೊಡುವಂತೆ ಮನವಿ ಮಾಡಿದ್ದಾನೆ. ಸಂಗಪ್ಪನ ನೋವನ್ನು ಕೇಳಿದ ಜಿಲ್ಲಾಧಿಕಾರಿ, ಪರಿಶೀಲನೆ ಮಾಡ್ತೇವೆ ಅಂತ ಹೇಳಿ, ಅರ್ಜಿ ಪಡೆದು ಸಂಗಪ್ಪನನ್ನು ಕಳುಹಿಸಿದ್ದಾರೆ.

ಇದನ್ನೂ ಓದಿ: ರೈತರ ಮಕ್ಕಳಿಗೆ ಯಾಕಯ್ಯ ಹೆಣ್ಣು ಕೊಡಲ್ಲ? ನಾನು ಮದುವೆಯಾಗಿಲ್ವಾ ಅಂತ ಸಿದ್ದರಾಮಯ್ಯ ಹೇಳಿದಾಗ ಸಭಿಕರಿಗೆ ಜೋರು ನಗು!

ಇದು ಕೇವಲ ಸಂಗಪ್ಪನ ಸ್ಥಿತಿ ಮಾತ್ರವಲ್ಲ. ರೈತರ ಗೋಳಾಗಿದೆ. ರಾಜ್ಯದಲ್ಲಿ ರೈತರ ಮಕ್ಕಳಿಗೆ ಕನ್ಯಾ ಸಿಗ್ತಿಲ್ಲಾ ಅಂತ ಈ ಹಿಂದೆ ರಾಜ್ಯದ ಅನೇಕ ಕಡೆ ಯುವಕರು ಪ್ರತಿಭಟನೆ ನಡೆಸಿದ್ದರು. ರೈತರ ಮಕ್ಕಳಿಗೆ ಯಾರು ಕೂಡ ತಮ್ಮ ಮಗಳನ್ನು ಕೊಡಲು ಹೆತ್ತವರು ಒಪ್ಪುತ್ತಿಲ್ಲ. ಯುವತಿಯರು ಕೂಡ ಮದುವೆಯಾಗುತ್ತಿಲ್ಲ. ಮದುವೆಯಾಗದೇ ನಾವು ಮುದುಕರಾಗುತ್ತಿದ್ದೇವೆ ಅಂತ ಗೋಳಾಡಿದ್ದರು. ಇದೀಗ ಸಂಗಪ್ಪ, ಅಂತವರ ಪರವಾಗಿ ಮತ್ತೆ ಬಹಿರಂಗವಾಗಿ ಧ್ವನಿ ಎತ್ತಿದ್ದಾನೆ. ಆದರೆ ಸಂಗಪ್ಪನ ನೋವಿಗೆ ಪರಿಹಾರ ಸಿಗುತ್ತಾ ಅನ್ನೋದು ಮಾತ್ರ ಕಾಲವೇ ಉತ್ತರ ಹೇಳಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.