ಬೆಂಗಳೂರು: ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ವಿರುದ್ಧದ ಪರ್ಸೆಂಟೇಜ್ ಭ್ರಷ್ಟಾಚಾರ (Corruption) ಆರೋಪ ಇಂದು ಮತ್ತೊಂದು ಮಜಲು ತಲುಪಿದೆ. ವಿರೋಧ ಪಕ್ಷಗಳು ಅದರಲ್ಲೂ ಕಾಂಗ್ರೆಸ್ ಪಕ್ಷ ಸೇರಿದಂತೆ ಕೆಲ ಗುತ್ತಿಗೆದಾರರು ರಾಜ್ಯ ಸರ್ಕಾರ ಶೇ. 40 ರಷ್ಟು ಕಮೀಷನ್ ಪಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ. ಇದರ ಮಧ್ಯೆ ಒಬ್ಬ ಗುತ್ತಿಗೆದಾರರು ಇದೇ ಆರೋಪ ಮಾಡುತ್ತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದು ಕೊನೆಗೆ ಸಚಿವರೊಬ್ಬರ ರಾಜೀನಾಮೆಗೂ ಕಾರಣವಾಗಿದೆ. ಪರಿಸ್ಥಿತಿ ಹೀಗಿರುವಾಗ ಇಂದು ಸ್ವಾಮೀಜಿಯೋರ್ವರು ಮಠಗಳಿಂದಲೂ ಕಮಿಷನ್ ಕೇಳುವ ರಾಜ್ಯ ಸರ್ಕಾರ ಎಂದು ಗಂಭೀರ ಅರೋಪ ಮಾಡಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ ಅವರಿಂದ ಈ ಆರೋಪ ಹೊರಬೀಳುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು (Basavaraj Bommai) ಕೆಂಡಾಮಂಡಲರಾಗಿದ್ದು, ದಿಂಗಾಲೇಶ್ವರ ಸ್ವಾಮೀಜಿಗಳ (Dingaleshwar swamiji) ಮಾತಿಗೆ ಬೆಲೆ ಕೊಡುತ್ತೇವೆ. ಯಾವ ಮಠಾಧೀಶರು ಯಾರಿಗೆ ಕೊಟ್ಟಿದ್ದಾರೆ ಎಂಬ ದಾಖಲೆ ನೀಡಲಿ. ಎಲ್ಲಿ, ಯಾರಿಗೆ, ಎಷ್ಟು ಪರ್ಸೆಂಟ್ ಕೊಟ್ಟಿದ್ದಾರೆ? ಎಂಬುದರ ಕುರಿತು ದಾಖಲೆ ಕೊಡಲಿ ಎಂದು ತರುಗೇಟು ನೀಡಿದ್ದಾರೆ.
ದಿಂಗಾಲೇಶ್ವರ ಸ್ವಾಮೀಜಿಗಳು ಭ್ರಷ್ಟಾಚಾರದ ವಿರುದ್ಧ ದಾಖಲೆ ನೀಡಿದರೆ ಆ ಕುರಿತು ಸಂಪೂರ್ಣ ತನಿಖೆ ಮಾಡ್ತೇವೆ. ಅದರ ಆಳಕ್ಕೆ ಹೋಗ್ತೇವೆ, ಸಂಪೂರ್ಣ ತನಿಖೆ ಮಾಡುತ್ತೇವೆ. ದಿಂಗಾಲೇಶ್ವರ ಶ್ರೀ ಉತ್ತಮ ಸ್ವಾಮೀಜಿ, ದೊಡ್ಡ ತಪಸ್ವಿಗಳು. ದಿಂಗಾಲೇಶ್ವರ ಸ್ವಾಮೀಜಿಗಳಿಗೆ ಒಳ್ಳೆಯ ಹಿನ್ನೆಲೆ ಇದೆ ಎಂದೂ ಸ್ವಾಮೀಜಿಯ ಹಿನ್ನೆಲೆ ಪ್ರಸ್ತಾಪ ಮಾಡುತ್ತಾ, ಸಿಎಂ ಬೊಮ್ಮಾಯಿ ಅವರು ಸವಾಲು ರೂಪದಲ್ಲಿ ಚೆಂಡನ್ನು ದಿಂಗಾಲೇಶ್ವರ ಸ್ವಾಮೀಜಿಯ ಅಂಗಳದತ್ತ ಒಗೆದಿದ್ದಾರೆ.
ಮಠಗಳಿಂದಲೂ ಕಮಿಷನ್ ಎಂದು ದಿಂಗಾಲೇಶ್ವರ ಶ್ರೀ ಆರೋಪ ಮಾಡಿರುವುದಕ್ಕೆ ವಜ್ರದೇಹಿ ಸ್ವಾಮೀಜಿ ತಿರುಗೇಟು ನೀಡಿದ್ದಾರೆ. ಮಠ ಮಾನ್ಯಗಳಿಂದಲೂ ಕಮಿಷನ್ ಎಂದು ಅನಗತ್ಯವಾಗಿ ಆರೋಪ ಮಾಡಲಾಗಿದೆ. ದಿಂಗಾಲೇಶ್ವರ ಸ್ವಾಮೀಜಿ ಆರೋಪ ಅಪ್ಪಟ ಸುಳ್ಳು. ಇದನ್ನು ನಾನು ಖಡಾಖಂಡಿತವಾಗಿ ಹೇಳುತ್ತೇನೆ ಎಂದು ವಜ್ರದೇಹಿ ಸ್ವಾಮೀಜಿ ಗುಡುಗಿದ್ದಾರೆ.
ಸಾಕ್ಷ್ಯ ರೂಪದಲ್ಲಿ ಮತ್ತೆ ಆರೋಪ ಮಾಡಿದ ದಿಂಗಾಲೇಶ್ವರ ಶ್ರೀ:
ನಮ್ಮ ಮಠದ ಕಟ್ಟಡದ ಕಾಮಗಾರಿಗೆ ಕಮಿಷನ್ ಕೇಳಿದ್ದಾರೆ ಎಂಬುದು ರಾಜ್ಯ ಸರ್ಕಾರದ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ನೇರ ಆರೋಪವಾಗಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರು ಗ್ರಾಮದಲ್ಲಿ ಟಿವಿ9 ಜೊತೆ ದಿಂಗಾಲೇಶ್ವರ ಶ್ರೀ ಮಾತನಾಡಿದ್ದು, ಮಠದ ಯಾತ್ರಿ ನಿವಾಸಕ್ಕೆ 75 ಲಕ್ಷ ರೂಪಾಯಿ ಅನುದಾನ ಪ್ರಕಟವಾಗಿತ್ತು. ಹೆಚ್ಡಿ ಕುಮಾರಸ್ವಾಮಿ ಸರ್ಕಾರದಲ್ಲಿ ಅನುದಾನ ಮಂಜೂರಾಗಿತ್ತು. 25 ಲಕ್ಷ ಹಣ ಕೊಟ್ರೆ ಮುಂದಿನ ಕೆಲಸ ಅಂದಿದ್ದರು ಅಧಿಕಾರಿಗಳು. ಇದಕ್ಕಿಂತ ಪಕ್ಕಾ ಸಾಕ್ಷಿ ಇನ್ನೇನು ಬೇಕು? ಎಂದ ದಿಂಗಾಲೇಶ್ವರ ಶ್ರೀ ಹೇಳಿದ್ದಾರೆ.
ಎಲ್ಲಾ ಇಲಾಖೆಗಳಲ್ಲೂ ಇದೆ ಪರಿಸ್ಥಿತಿ ಇದೆ ಎಂದೂ ಆರೋಪಿಸಿದ ಸ್ವಾಮೀಜಿ, ಮಠದ ಯಾತ್ರಿ ನಿವಾಸದ ಪೂರ್ಣ ಹಣ ಬಿಡುಗಡೆಯಾಗಿಲ್ಲ. BS ಯಡಿಯೂರಪ್ಪ ಅವರ ಅವಧಿಯಲ್ಲಿ ಬಿಡುಗಡೆಯಾದ ಅನುದಾನವನ್ನೂ ನೀಡಿಲ್ಲ ಎಂದೂ ಸಾಕ್ಷ್ಯ ರೂಪದಲ್ಲಿ ಹೇಳಿದರು.
ಗಾಳಿಯಲ್ಲಿ ಗುಂಡು ಹಾರಿಸಿದರೆ ಸರಿಯಲ್ಲ; ದಾಖಲೆ ಕೊಡಿ ಎಂದ ಗುರುಪುರದ ವಜ್ರದೇಹಿ ಸ್ವಾಮೀಜಿ:
ನಮ್ಮ ಮಠಕ್ಕೂ 50 ಲಕ್ಷ ಬಂದಿದೆ. ನಾವ್ಯಾರು ಒಂದು ನಯಾಪೈಸೆ ಕಮಿಷನ್ ನೀಡಿಲ್ಲ. ನಾವು ಯಾವುದೇ ಹಂತದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕಮಿಷನ್ ಕೊಟ್ಟಿಲ್ಲ. ಇಂತಹ ಸುಳ್ಳು ಸಂದೇಶ ಹಬ್ಬಿಸಬಾರದು. ಎಲ್ಲೋ ಆದ ಘಟನೆ ನಮ್ಮಲ್ಲೂ ಆಗಿದೆ ಎನ್ನುವುದು ಸರಿಯಲ್ಲ. ನನಗೆ ಗೊತ್ತಿರುವ ಯಾವುದೇ ಶ್ರೀಗಳು ಒಂದು ನಯಾಪೈಸೆ ಕಮಿಷನ್ ಕೊಟ್ಟಿಲ್ಲ. ಗಾಳಿಯಲ್ಲಿ ಗುಂಡು ಹಾರಿಸಿದರೆ ಸರಿಯಲ್ಲ; ದಾಖಲೆ ಕೊಡಿ ಎಂದು ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು ದಿಂಗಾಲೇಶ್ವರ ಸ್ವಾಮೀಜಿ ಆರೋಪವನ್ನು ಅಲ್ಲಗಳೆದಿದ್ದಾರೆ.
Published On - 6:48 pm, Mon, 18 April 22