ಬೆಂಗಳೂರು: ಏರುತ್ತಲೇ ಇರುವ ಇಂಧನ ಬೆಲೆಯಿಂದಾಗಿ ಜನಸಾಮಾನ್ಯರ ಬದುಕಿಗೆ ಬರೆ ಎಳೆದಂತಾಗಿದೆ. ಕಳೆದ ನವೆಂಬರ್ನಿಂದ ಏರಿಕೆಯತ್ತ ಮುಖಮಾಡಿರುವ ಪೆಟ್ರೋಲ್ ಡೀಸೆಲ್ ದರ ಇಂದು ಮತ್ತೆ ಹೆಚ್ಚಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಇಂದು (ಜ.27) 27 ಪೈಸೆ ಏರಿಕೆಯಾಗಿದೆ.
ಡೀಸೆಲ್, ಪ್ರತಿ ಲೀಟರ್ ಮೇಲೆ 25 ಪೈಸೆ ಹೆಚ್ಚಳವಾಗಿದೆ. ಕಳೆದ ವಾರದಿಂದ ಮತ್ತೆ ನಿರಂತರವಾಗಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಇಂದು ಪೆಟ್ರೋಲ್ ಬೆಲೆ 90ರ ಗಡಿಯತ್ತ ಬಂದು ನಿಂತಿದೆ. ರಾಜ್ಯ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 89.21 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 81.10 ರೂಪಾಯಿಗಳಾಗಿದೆ.
ವರ್ಷದ ಆರಂಭದ ದಿನ, ಜನವರಿ 1ರಂದು ಡೀಸೆಲ್ ಬೆಲೆ 78.31 ಆಗಿತ್ತು ಹಾಗೂ ಜನವರಿ 1ರಂದು ಪೆಟ್ರೋಲ್ ದರ 86.51 ಆಗಿತ್ತು. ಇದೀಗ ತಿಂಗಳ ಅಂತ್ಯದ ವೇಳೆ ಇಂಧನ ದರ ತಲಾ 3 ರೂಪಾಯಿಗಳಷ್ಟು ಹೆಚ್ಚಳವಾಗಿದೆ. ಒಂದು ವಾರದಿಂದ ಏರಿಕೆಯತ್ತ ಮುಖಮಾಡಿರುವ ಇಂಧನ ದರ, ಜನವರಿ ಮುಕ್ತಾಯವಾಗುವ ವೇಳೆ 90 ರೂಪಾಯಿ ಗಡಿ ದಾಟುವ ಸೂಚನೆ ಲಭ್ಯವಾಗಿದೆ. ಕೆಲವು ದಿನಗಳ ಇಂಧನ ಬೆಲೆ ಏರಿಕೆಯ ಚಿತ್ರಣವನ್ನು ಗಮನಿಸಿದರೆ, ಮೂರು ದಿನಕ್ಕೆ ಒಮ್ಮೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಿರುವುದು ಕಾಣುತ್ತಿದೆ.
ಕೊರೊನಾ, ಲಾಕ್ಡೌನ್ ಕಾರಣದಿಂದ ಜನಜೀವನ ಅತಂತ್ರವಾಗಿತ್ತು. ಇದೀಗ ಹೊಸ ವರ್ಷದಲ್ಲಿ, ಹೊಸ ಜೀವನ ಸುಸೂತ್ರವಾಗಿ ನಡೆಯುವ ಆಶಾಭಾವನೆ ವ್ಯಕ್ತವಾಗಿತ್ತು. ಆದರೆ, ತೈಲಬೆಲೆ ಏರಿಕೆ ಜನಸಾಮಾನ್ಯರನ್ನು ಆರ್ಥಿಕ ಸಂಕಷ್ಟಕ್ಕೆ ಈಡು ಮಾಡಿದೆ. ನಾವು ಮಾರುಕಟ್ಟೆಯಲ್ಲಿ ನೀಡುವ ತೈಲಬೆಲೆಯ 60 ಪ್ರತಿಷತ ದರವು ತೆರಿಗೆ ಮೊತ್ತವಾಗಿರುತ್ತದೆ.
ಇದೀಗ ಅಧಿಕ ಮಟ್ಟದಲ್ಲಿ ಏರಿಕೆಯಾಗುತ್ತಿರುವ ತೈಲಬೆಲೆಯ ಕಾರಣದಿಂದ, ತೆರಿಗೆ ಮೊತ್ತವನ್ನು ಖಡಿತಗೊಳಿಸಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ. ಬೆಂಗಳೂರು ಮಾತ್ರವಲ್ಲದೆ, ದೇಶದ ಮುಖ್ಯ ನಗರಗಳಾದ ದೆಹಲಿ, ಮುಂಬೈ ಮುಂತಾದೆಡೆ ಪೆಟ್ರೋಲ್ ದರ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಪೆಟ್ರೋಲ್ ದರ ಈಗಾಗಲೇ 90ರ ಗಡಿ ದಾಟಿದೆ.
ಪೆಟ್ರೋಲ್, ಡೀಸೆಲ್ ದರ ಏರಿಕೆಯ ವಿಚಾರವಾಗಿ ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಕಳೆದ ವಾರ ಹೇಳಿಕೆ ನೀಡಿದ್ದರು. ತೈಲ ಉತ್ಪಾದಿಸುವ ದೇಶಗಳು, ಕೊವಿಡ್-19 ಕಾರಣದಿಂದ ತೈಲ ತಯಾರಿಕೆಯ ಪ್ರಮಾಣವನ್ನು ಮೊಟಕುಗೊಳಿಸಿವೆ. ಕಡಿಮೆ ಇಂಧನ ಉತ್ಪಾದನೆ, ಇಂಧನ ಬೇಡಿಕೆ ಹಾಗೂ ಪೂರೈಕೆಯ ಅಸಮತೋಲನದ ಕಾರಣದಿಂದ ತೈಲ ಬೆಲೆ ಏರಿಕೆಯಾಗುತ್ತಿದೆ ಎಂದು ಬೆಲೆ ಏರಿಕೆಯ ಬಗ್ಗೆ ಕಾರಣ ನೀಡಿದ್ದರು.
ಜನರಿಗೆ ಬರೆ.. ಆದರೆ ಪೆಟ್ರೋಲ್, ಡೀಸೆಲ್ ಮಾರಾಟದಿಂದ ಕೇಂದ್ರಕ್ಕೆ ಭರ್ಜರಿ ಲಾಭ!
Published On - 12:09 pm, Wed, 27 January 21