ಮಂಗಳೂರು / ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Popular Front of India – PFI) ಸಂಘಟನೆಯ ಆಯ್ದ ಕೆಲ ಕಾರ್ಯಕರ್ತರಿಗೆ ಬಂಟ್ವಾಳ ತಾಲ್ಲೂಕಿನ ಮಿತ್ತೂರಿನಲ್ಲಿ ಬಂದೂಕು ಮತ್ತು ಪಿಸ್ತೂಲ್ಗಳ ಬಗ್ಗೆ ‘ಓರಲ್ ಟ್ರೇನಿಂಗ್’ ನೀಡಲಾಗಿತ್ತು ಎನ್ನುವ ಸಂಗತಿ ಇದೀಗ ಬಹಿರಂಗಗೊಂಡಿದೆ. ಮಿತ್ತೂರಿನ ಫ್ರೀಡಂ ಕಮ್ಯನಿಟಿ ಹಾಲ್ನಲ್ಲಿ ಪಿಸ್ತೂಲ್ ಹಾಗೂ ಬಂದೂಕುಗಳ ಫೋಟೊ ಹಾಗೂ ವಿಡಿಯೊಗಳನ್ನು ತೋರಿಸಿ ಅವುಗಳ ಬಳಕೆ ಹೇಗೆ ಎಂಬುದನ್ನು ವಿವರಿಸಲಾಗಿತ್ತು. ಅಲ್ಲಿ ಬಂದೂಕು ಬಳಕೆಯ ತರಬೇತಿ ಕೊಡುತ್ತಿರಲಿಲ್ಲ. ಮಿತ್ತೂರಿನಲ್ಲಿ ಓರಲ್ ಕ್ಲಾಸ್ ಪಡೆದ ಅಭ್ಯರ್ಥಿಗಳಿಗೆ ಕೇರಳದ ನಿಗೂಢ ಸ್ಥಳದಲ್ಲಿ ಬಂದೂಕು ಬಳಕೆಯ ತರಬೇತಿ ನೀಡಲಾಗಿತ್ತು ಎಂದು ‘ಟಿವಿ9’ಗೆ ಎನ್ಐಎ ಉನ್ನತ ಮೂಲಗಳು ಹೇಳಿವೆ.
ಸತ್ಯಮಂಗಲ ಅರಣ್ಯದ ಸಂಬಂಧ
ಬಂಧಿತ ಪಿಎಫ್ಐ ಕಾರ್ಯಕರ್ತರ ವಿಚಾರಣೆ ಪ್ರಗತಿಯಲ್ಲಿದ್ದು, ಈ ವೇಳೆ ಹೊಸದೊಂದು ಸಂಗತಿ ಬೆಳಕಿಗೆ ಬಂದಿದೆ. ಕೇರಳ, ಮಂಗಳೂರು ಮತ್ತು ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಪೊಲೀಸರಿಗೆ ಸಿಕ್ಕ ಒಂದು ಫೋಟೊ ತನಿಖೆಯಲ್ಲಿ ಹಲವು ತಿರುವುಗಳಿಗೆ ಕಾರಣವಾಗಿದೆ. ಬಂಧಿತರ ಮೊಬೈಲ್ನಲ್ಲಿದ್ದ ಫೋಟೊದಲ್ಲಿದ್ದ ಸ್ಥಳದ ಬಗ್ಗೆ ಪೊಲೀಸರು ಹೆಚ್ಚು ಗಮನ ಕೊಟ್ಟಿದ್ದರು. ತನಿಖೆ ವೇಳೆ ಇಬ್ಬರು ಆರೋಪಿಗಳು ಬಾಯ್ಬಿಟ್ಟ ನಂತರ ರಾತ್ರೋರಾತ್ರಿ ಮಹಜರಿಗೆ ಕರೆದೊಯ್ದರು. ಈ ಫೋಟೊದಲ್ಲಿ ಪಿಎಫ್ಐನ 20 ಮಂದಿ ಕ್ರಿಕೆಟ್ ಆಡಿದ್ದ ವಿವರಗಳಿದ್ದವು. ಆರಂಭದಲ್ಲಿ ಮಂಗಳೂರಿನ ಜಾಗ ಎಂದು ಹೇಳಲಾಗಿತ್ತು, ನಂತರ ಸತ್ಯಮಂಗಲ ಅರಣ್ಯ ಎಂಬುದು ತಿಳಿದುಬಂತು. ಸತ್ಯಮಂಗಲ ಅರಣ್ಯದಲ್ಲಿ ‘ಕೇಡರ್’ ಎಂಬ ಹೆಸರಿನಲ್ಲಿ ಯುವಕರಿಗೆ ವಿಶೇಷ ತರಬೇತಿ ನಡೆಯುತ್ತಿತ್ತು.
ತೀವ್ರಗೊಂಡ ವಿಚಾರಣೆ
ರಿಟ್ರೀವ್ ರಿಪೋರ್ಟ್ ಮುಂದಿಟ್ಟು ವಿಚಾರಣೆ ಮಾಡಿದರೂ ಆರೋಪಿಗಳು ಬಾಯಿಬಿಡುತ್ತಿಲ್ಲ. ಹೇಳಿಕೆಗೆ ಸಹಿಯನ್ನೂ ಹಾಕುತ್ತಿಲ್ಲ. ಇನ್ಸ್ಪೆಕ್ಟರ್ ದರ್ಜೆಯ ಒಬ್ಬ ಅಧಿಕಾರಿಗೆ ಇಬ್ಬರು ಆರೋಪಿಗಳ ವಿಚಾರಣೆ ನಡೆಸುವ ಹೊಣೆಗಾರಿಕೆ ನೀಡಲಾಗಿದೆ. ಕೆ.ಜೆ.ಹಳ್ಳಿ, ಬೈಯಪ್ಪನಹಳ್ಳಿ, ಗೋವಿಂದಪುರ, ಪುಲಕೇಶಿನಗರ, ಕಮರ್ಷಿಯಲ್ ಸ್ಟ್ರೀಟ್, ಜೆ.ಬಿ.ನಗರ, ರಾಮಮೂರ್ತಿ ನಗರ, ಅಮೃತಹಳ್ಳಿ, ಆಡುಗೋಡಿ ಠಾಣೆಯ ಇನ್ಸ್ಪೆಕ್ಟರ್ಗಳಿಗೆ ತನಿಖೆಯ ಹೊಣೆ ಒಪ್ಪಿಸಲಾಗಿದೆ.
ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆ
ಬೆಂಗಳೂರಿನಲ್ಲಿ 15 ಪಿಎಫ್ಐ ಮುಖಂಡರ ವಿಚಾರಣೆಯನ್ನು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿ ಬೆಂಗಳೂರಿನ 10ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಬಂಧಿತ ಪಿಎಫ್ಐ ಕಾರ್ಯಕರ್ತರ ವಿರುದ್ಧ ಯುಪಿಪಿಎ ಕಾಯ್ದೆಯ (UNLAWFUL ACTIVITIES (PREVENTION) ACT – UAPA) ಅನ್ವಯ ಪ್ರಕರಣ ದಾಖಲಿಸಲು ಬೆಂಗಳೂರು ಪೊಲೀಸರು ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ವಿಶೇಷ ನ್ಯಾಯಾಲಯಕ್ಕೆ ಪ್ರಕರಣ ವರ್ಗಾಯಿಸಲು ಸಮ್ಮತಿಸಿತು. ಅಕ್ಟೋಬರ್ 6ಕ್ಕೆ ಎನ್ಐಎ ನ್ಯಾಯಾಲಯದಲ್ಲಿಯೇ ವಿಚಾರಣೆಗೆ ಆರೋಪಿಗಳನ್ನು ಹಾಜರುಪಡಿಸಬೇಕು ಎಂದು ಎಸಿಎಂಎಂ ನ್ಯಾಯಾಲಯವು ಆದೇಶ ಮಾಡಿದೆ.