ಕರ್ನಾಟಕದ ಕಾಫಿಗೆ ಸಿಗಲಿದೆಯೇ ಚಿನ್ನದ ಬೆಲೆ? ಕೇಂದ್ರ ಸಚಿವ ಪೀಯೂಷ್ ಗೋಯಲ್ ಕೊಟ್ಟರು ಮಹತ್ವದ ಭರವಸೆ

|

Updated on: Dec 24, 2024 | 7:00 AM

ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಕರ್ನಾಟಕದ ಕಾಫಿ ಬೆಳೆಗಾರರಿಗೆ ಮಹತ್ವದ ಭರವಸೆ ನೀಡಿದ್ದಾರೆ. ಕಾಫಿ ಬೆಳೆಗೆ ಚಿನ್ನದಂತಹ ಮೌಲ್ಯ, ಬೆಲೆ ಬರಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸಮಗ್ರ ಕಾಫಿ ಅಭಿವೃದ್ಧಿ ಯೋಜನೆ ಮರು ಆರಂಭ, ಹೊಸ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆ ಹಾಗೂ ಹೆಚ್ಚುವರಿ ಅನುದಾನದ ಭರವಸೆ ನೀಡಲಾಗಿದೆ. ವಿವರಗಳು ಇಲ್ಲಿವೆ.

ಕರ್ನಾಟಕದ ಕಾಫಿಗೆ ಸಿಗಲಿದೆಯೇ ಚಿನ್ನದ ಬೆಲೆ? ಕೇಂದ್ರ ಸಚಿವ ಪೀಯೂಷ್ ಗೋಯಲ್ ಕೊಟ್ಟರು ಮಹತ್ವದ ಭರವಸೆ
ಪೀಯೂಷ್ ಗೋಯಲ್
Follow us on

ಸಕಲೇಶಪುರ, ಡಿಸೆಂಬರ್ 24: ಕೋಲಾರ ಚಿನ್ನದ ಗಣಿಯ ನಂತರ ಇದೀಗ ಕರ್ನಾಟಕದ ಪಾಲಿಗೆ ಕಾಫಿ ಬೆಳೆಯೂ ಚಿನ್ನವಾಗಿ ಪರಿಣಮಿಸಲಿದೆ! ಅದಕ್ಕೆ ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಭರವಸೆ ನೀಡಿದ್ದಾರೆ. ಇದರಿಂದ, ಕರ್ನಾಟಕದ ಕಾಫಿಗೂ ಚಿನ್ನದ ಬೆಲೆ ಬರಬಹುದೇ ಎಂಬ ನಿರೀಕ್ಷೆ ಗರಿಗೆದರಿದೆ. ಸಕಲೇಶಪುರದಲ್ಲಿ ಕಾಫಿ ಬೆಳೆಗಾರರ ​​ಒಕ್ಕೂಟ ಆಯೋಜಿಸಿದ್ದ ಕಾಫಿ ಬೆಳೆಗಾರರ ​​ಸಮಾವೇಶವನ್ನು ಉದ್ಘಾಟಿಸಿ ಅವರು ಸೋಮವಾರ ಮಾತನಾಡಿದ್ದ ವೇಳೆ ಈ ಭರವಸೆ ನೀಡಿದ್ದಾರೆ.

2011ರಿಂದ ಸ್ಥಗಿತಗೊಂಡಿದ್ದ ಸಮಗ್ರ ಕಾಫಿ ಅಭಿವೃದ್ಧಿ ಯೋಜನೆ ಮರು ಅನುಷ್ಠಾನಗೊಳಿಸಲಾಗುವುದು. ಇದು ಕಾಫಿ ಗುಣಮಟ್ಟ ಹಾಗೂ ಯಾಂತ್ರೀಕರಣಕ್ಕೆ ಒತ್ತು ನೀಡಲಿದೆ. ಜತೆಗೆ, ರೈತ ಉತ್ಪಾದಕ ಕಂಪನಿಗಳ ಮೂಲಕ ಅಗತ್ಯ ಪರಿಕರಗಳನ್ನು ಒದಗಿಸಲು ಅನುಕೂಲವಾಗಲಿದೆ. ಇದರಿಂದ ಕಾಫಿಯ ಮೌಲ್ಯವರ್ಧನೆಯಾಗಲಿದೆ ಎಂದು ಗೋಯಲ್ ಹೇಳಿದ್ದಾರೆ.

ಬಾಳೆಹೊನ್ನೂರಿನಲ್ಲಿ ಕಾಫಿ ಕೌಶಲ ಅಭಿವೃದ್ಧಿ ಕೇಂದ್ರ

ಕಾಫಿ ಅಭಿವೃದ್ಧಿಗಾಗಿ ಸ್ಟಾರ್ಟಪ್‌ಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ಬಾಳೆಹೊನ್ನೂರಿನಲ್ಲಿ ಕಾಫಿ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಅಗತ್ಯ ಅನುದಾನ ನೀಡಲು ಕೇಂದ್ರ ಬದ್ಧವಾಗಿದೆ ಎಂದು ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಕಾಫಿ ಬೆಳೆಗಾರರಿಗೆ ಸಹಾಯಧನಕ್ಕಾಗಿ 100 ಕೋಟಿ ರೂ. ಹೆಚ್ಚುವರಿ ಅನುದಾನ

ಕಾಫಿ ಬೆಳೆಗಾರರಿಗೆ ಸಹಾಯಧನ ನೀಡಲು 100 ಕೋಟಿ ರೂ. ಹೆಚ್ಚುವರಿ ಅನುದಾನದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು. ಈಗಾಗಲೇ ಸಲ್ಲಿಕೆಯಾಗಿರುವ 21,000 ಅರ್ಜಿಗಳಿಗೆ ಸಹಾಯಧನ ನೀಡಲಾಗುವುದು ಎಂದು ಗೋಯಲ್ ಮಾಹಿತಿ ನೀಡಿದ್ದಾರೆ.

ಹಾಸನ ಪ್ರದೇಶದಲ್ಲಿ ಮಾನವ-ಪ್ರಾಣಿ ಸಂಘರ್ಷದ ಕುರಿತು ಮಾತನಾಡಿದ ಗೋಯಲ್, ಈ ಕುರಿತ ಅಧ್ಯಯನಕ್ಕೆ ಐಐಎಸ್‌ಸಿ ಬೆಂಗಳೂರು ಪ್ರೊಫೆಸರ್ ಸುರೇಂದ್ರ ವರ್ಮಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದು. ಸಮಿತಿ ವರದಿ ಆಧರಿಸಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಹೆಚ್​ಡಿ ಕುಮಾರಸ್ವಾಮಿ ಗುಡ್ ನ್ಯೂಸ್

40 ವರ್ಷಗಳ ಬಳಿಕ ಪಿಯೂಷ್ ಗೋಯಲ್ ಅವರು ಸಕಲೇಶಪುರಕ್ಕೆ ಭೇಟಿ ನೀಡಿದ ಮೊದಲ ಕೇಂದ್ರ ಸಚಿವರಾಗಿದ್ದು, ಮುಂಬರುವ ಬಜೆಟ್​ನಲ್ಲಿ ಕಾಫಿ ಬೆಳೆಗಾರರ ​​ಹಿತ ಕಾಪಾಡಲು ಈಗಾಗಲೇ ಯೋಜನೆ ರೂಪಿಸಿದ್ದಾರೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ