
ಬೆಂಗಳೂರು, (ಆಗಸ್ಟ್ 10): ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು (Bengaluru To Belagavi Vande Bharat Express Train) ಸಂಚಾರಕ್ಕೆ ಚಾಲನೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ (PM Narenadra Modi) ಅವರೇ ಇಂದು (ಆಗಸ್ಟ್ 10) ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೇಲ್ವೇ ನಿಲ್ದಾಣದಲ್ಲಿ ಬೆಂಗಳೂರು-ಬೆಳಗಾವಿ ಸೇರಿದಂತೆ ಒಟ್ಟು ಮೂರು ಒಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದಾರೆ. ಅಮೃತಸರ-ಶ್ರೀಮಾತಾ ವೈಷ್ಣೋದೇವಿ ಕತ್ರಾ , ನಾಗಪುರ(ಅಜ್ನಿ)-ಪುಣೆ ಜೊತೆ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿದರು. ಇದರೊಂದಿಗೆ ಬೆಳಗಾವಿಗರ ಬಹುದಿನಗಳ ಕನಸು ನನಸಾಗಿದೆ. ನಿರಂತರ ಪ್ರಯತ್ನ ಮತ್ತು ಜನಪ್ರತಿನಿಧಿಗಳ ಒತ್ತಾಯದ ಫಲವಾಗಿ ಈ ರೈಲು ಸೇವೆ ಆರಂಭವಾಗಿದ್ದು, ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇನ್ನು ಈ ರೈಲು ಆಗಸ್ಟ್ 11ರಿಂದ ನಿಯಮಿತ ಸಂಚಾರ ಆರಂಭವಾಗಲಿದ್ದು, ಬೆಳಗಾವಿ ಮತ್ತು ಬೆಂಗಳೂರು ನಡುವಿನ ಸಂಪರ್ಕ ಸುಲಭವಾಗಲಿದೆ.
ನಾಳೆಯಿಂದ ಅಂದರೆ ಆಗಸ್ಟ್ 11ರಿಂದ ಈ ರೈಲು ಸಂಚಾರ ಪ್ರಾರಂಭವಾಗಲಿದೆ. ಬೆಳಗಾವಿ -ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (26751) ರೈಲು ಬೆಳಗಾವಿಯಿಂದ ಬೆಳಗ್ಗೆ 5.20ಕ್ಕೆ ಹೊರಟು, ಮಧ್ಯಾಹ್ನ 1.50ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನ ಕೆಎಸ್‌ಆರ್ ನಿಲ್ದಾಣದಿಂದ ಮಧ್ಯಾಹ್ನ 2.20ಕ್ಕೆ ಹೊರಡುವ ರೈಲು (26752), ರಾತ್ರಿ 10.40ಕ್ಕೆ ಬೆಳಗಾವಿ ತಲುಪಲಿದೆ. ಈ ರೈಲು 8 ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದು, ಬುಧವಾರ ಹೊರತುಪಡಿಸಿ ವಾರದ 6 ದಿನ ಈ ರೈಲು ಸಂಚರಿಸಲಿದೆ. ಕಿತ್ತೂರು ಕರ್ನಾಟಕ, ದಕ್ಷಿಣ ಕರ್ನಾಟಕ ಮೂಲಕ ರಾಜ್ಯ ರಾಜಧಾನಿ ಸಂಪರ್ಕಿಸಲಿದೆ. ಧಾರವಾಡ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ತುಮಕೂರು, ಯಶವಂತಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಈ ಹೊಸ ಮಾರ್ಗದಲ್ಲಿ ಚೇರ್‌ಕಾರ್ (CC) ಹಾಗೂ ಎಕ್ಸಿಕ್ಯೂಟಿವ್ ಚೇರ್‌ಕಾರ್ (EC) ದರ್ಜೆಯ ಪ್ರಯಾಣಿಕರಿಗೆ ಯೋಗ್ಯ ದರಗಳಲ್ಲಿ ಟಿಕೆಟ್ ಲಭ್ಯವಿದೆ. ಹಳೆ ವಂದೇ ಭಾರತ್ ಸೇವೆಗಳ ಜೊತೆ ಹೋಲಿಸಿದರೆ ದರಗಳು ಸಾಕಷ್ಟು ಕಡಿಮೆ ಇದೆ.
ಒಟ್ಟಿನಲ್ಲಿ ಈ ವಂದೇ ಭಾರತ್ ರೈಲು 8 ಗಂಟೆ 50 ನಿಮಿಷಗಳಲ್ಲಿ 611 ಕಿಲೋ ಮೀಟರ್ ದೂರ ಕ್ರಮಿಸಲಿದ್ದು, ರಾಜ್ಯದ ರೈಲ್ವೆ ಇತಿಹಾಸದಲ್ಲಿ ಮೈಲುಗಲ್ಲಾಗಿದೆ.