ಅಮೃತ್​​ ಯೋಜನೆಯಡಿ ನವೀಕೃತಗೊಂಡ ಕರ್ನಾಟಕದ 4 ರೈಲ್ವೇ ನಿಲ್ದಾಣಗಳನ್ನು ವರ್ಚುವಲ್​​ ಮೂಲಕ ಉದ್ಘಾಟಿಸಿದ ಮೋದಿ

ಪ್ರಧಾನಿ ಮೋದಿ ಅವರು ಅಮೃತ ಭಾರತ್‌ ಯೋಜನೆಯಡಿ ನವೀಕೃತಗೊಂಡ ದೇಶದ 75 ರೈಲ್ವೇ ನಿಲ್ದಾಣಗಳನ್ನು ಉದ್ಘಾಟಿಸಿದ್ದು, ಇದರಲ್ಲಿ ಕರ್ನಾಟಕದ ಬಾದಾಮಿ, ಅಳ್ನಾವರ, ಕೊಪ್ಪಳ ಹಾಗೂ ಬಂಟ್ವಾಳ ನಿಲ್ದಾಣಗಳು ಕೂಡ ಸೇರಿವೆ. ಸ್ಥಳೀಯ ಸಂಸ್ಕೃತಿ ಮತ್ತು ವಾಸ್ತುಶಿಲ್ಪದಿಂದ ಪ್ರೇರಿತವಾಗಿ ನಿಲ್ದಾಣಗಳ ಕಟ್ಟದ ವಿನ್ಯಾಸ ಮಾಡಲಾಗಿದ್ದು, ವಿಶ್ವ ದರ್ಜೆಯ ಮತ್ತು ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಇವು ಹೊಂದಿವೆ. ಜೊತೆಗೆ ಡಿಜಿಟಲ್​​ ಸ್ಪರ್ಶ ಪಡೆದಿವೆ.

ಅಮೃತ್​​ ಯೋಜನೆಯಡಿ ನವೀಕೃತಗೊಂಡ ಕರ್ನಾಟಕದ 4 ರೈಲ್ವೇ ನಿಲ್ದಾಣಗಳನ್ನು ವರ್ಚುವಲ್​​ ಮೂಲಕ ಉದ್ಘಾಟಿಸಿದ ಮೋದಿ
ನವೀಕೃತಗೊಂಡ ರೈಲ್ವೇ ನಿಲ್ದಾಣಗಳನ್ನು ವರ್ಚುವಲ್​​ ಮೂಲಕ ಉದ್ಘಾಟಿಸಿದ ಮೋದಿ
Image Credit source: Narendra Modi X Account

Updated on: Jul 17, 2026 | 6:52 PM

ಮುಖ್ಯಾಂಶಗಳು

  • ಅಮೃತ್​​ ಯೋಜನೆಯಡಿ ನವೀಕೃತಗೊಂಡ ದೇಶದ 75 ರೈಲ್ವೇ ನಿಲ್ದಾಣಗಳು
  • ಕರ್ನಾಟಕದ 4 ಸೇರಿ ಎಲ್ಲ ನಿಲ್ದಾಣಗಳನ್ನು ಉದ್ಘಾಟಿಸಿದ ನರೇಂದ್ರ ಮೋದಿ
  • ವರ್ಚುವಲ್​​ ಮೂಲಕ ಉದ್ಘಾಟನೆ ನೆರವೇರಿಸಿರುವ ಪ್ರಧಾನ ಮಂತ್ರಿಗಳು

ಬೆಂಗಳೂರು, ಜುಲೈ 17: ಕೇಂದ್ರ ಬಿಜೆಪಿ ಸರ್ಕಾರದ ಅಮೃತ ಭಾರತ್‌ ಯೋಜನೆಯಡಿಯಲ್ಲಿ ನವೀಕೃತಗೊಂಡಿರುವ ಕರ್ನಾಟಕದ ನಾಲ್ಕು ರೈಲು ನಿಲ್ದಾಣಗಳು ಸೇರಿ ದೇಶಾದ್ಯಂತ ಒಟ್ಟು 75 ರೈಲ್ವೇ ಸ್ಟೇಷನ್​​ಗಳನ್ನು ಪ್ರಧಾನಿ ನರೇಂದ್ರ ಮೋದಿ ಪಂಜಾಬ್​ನ ಜಲಂಧರ್​ ಕಂಟೋನ್ಮೆಂಟ್​​ ರೈಲು ನಿಲ್ದಾಣದಿಂದ​ ವರ್ಚುವಲ್​​ ಮೂಲಕ ಇಂದು (ಜುಲೈ 17) ಉದ್ಘಾಟಿಸಿದ್ದಾರೆ. ಸ್ಥಳೀಯ ಸಂಸ್ಕೃತಿ ಮತ್ತು ವಾಸ್ತುಶಿಲ್ಪದಿಂದ ಪ್ರೇರಿತವಾಗಿ ನಿಲ್ದಾಣಗಳ ಕಟ್ಟದ ವಿನ್ಯಾಸ ಮಾಡಲಾಗಿದ್ದು, ವಿಶ್ವ ದರ್ಜೆಯ ಮತ್ತು ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಇವು ಹೊಂದಿವೆ. ಅಮೃತ ಭಾರತ್‌ ಯೋಜನೆಯಡಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಕೊಪ್ಪಳ, ಧಾರವಾಡದ ಅಳ್ನಾವರ ಮತ್ತು ಬಾಗಲಕೋಟೆಯ ಬಾದಾಮಿ ರೈಲ್ವೇ ನಿಲ್ದಾಣಗಳು ಸಹ ನವೀಕೃತಗೊಂಡಿವೆ.

ನವೀಕೃತಗೊಂಡ ಬಾದಾಮಿ ರೈಲ್ವೇ ನಿಲ್ದಾಣದ ವಿಶೇಷತೆ

ಅಮೃತ್ ಭಾರತ ಯೋಜನೆಯಡಿ ಬಾದಾಮಿ ರೈಲ್ವೇ ನಿಲ್ದಾಣಕ್ಕೆ ಹೊಸ ರೂಪ ನೀಡಲಾಗಿದ್ದು, 15.10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗಿದೆ. 2 ಫ್ಲಾಟ್​​ಫಾರಂಗಳ ಸಂಖ್ಯೆಯನ್ನು 3ಕ್ಕೆ ಏರಿಸಲಾಗಿದ್ದು, ಟಿಕೆಟ್​​ ಕೌಂಟರ್​​ಗಳ ಸಂಕ್ಯೆಯೂ ಒಂದರಿಂದ ನಾಲ್ಕ್ಕೆ ಹೆಚ್ಚಳಗೊಂಡಿದೆ. ವಿಕಲಚೇತನರಿಗೆ, ದೃಷ್ಟಿಹೀನರಿಗಾಗಿ ಪ್ರತ್ಯೇಕ ಟಿಕೆಟ್ ಕೌಂಟರ್ ನಿರ್ಮಿಸಲಾಗಿದೆ. ನಿಲ್ದಾಣದಲ್ಲಿ 200 ಚಮೀ ಹೊಸ ಕಟ್ಟಡ ನಿರ್ಮಿಸಲಾಗಿದ್ದು, 12 ಮೀಟರ್​​ ಅಗಲದ ಮೇಲ್ಸೇತುವೆ, ಮುಂಭಾಗದಲ್ಲಿ ದೀಪಾಲಂಕಾರ, ದಿವ್ಯಾಂಗ ಪ್ರಯಾಣಿಕರಿಗೆ ಅನುಕೂಲವಾಗುವ ರೀತಿ ಸೌಲಭ್ಯ, ಕುಡಿಯುವ ನೀರಿನ ಬೂತ್, ದೃಷ್ಟಿಹೀನರಿಗೆ ಸ್ಪರ್ಷಮಾರ್ಗಗಳು, ಕಾಯ್ದಿರಿಸಿದ ಪಾರ್ಕಿಂಗ್, ವಿಶೇಷ ಶೌಚಾಲಯಗಳು, 2 ಪ್ರಯಾಣಿಕರ ಲಿಫ್ಟ್​​ಗಳು, ತಾಯಂದಿರಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ ಒಳಗೊಂಡಂತೆ 1 ಹವಾನಿಯಂತ್ರಿತ ಕಾಯುವ ಕೊಠಡಿ ಸೇರಿ ಒಟ್ಟು ಐದು ಕಾಯುವ ಕೊಠಡಿಗಳು, ಸೋಲಾರ್ ವ್ಯವಸ್ಥೆ, ವೈಫೈ ಸೌಲಭ್ಯ ಸೇರಿ ಹಲವು ಆಧುನಿಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಇದನ್ನೂ ಓದಿ: ಉದ್ಘಾಟನೆಗೂ ಮುನ್ನವೇ ಸೋರುತ್ತಿದೆ ಕೊಪ್ಪಳ ರೈಲು ನಿಲ್ದಾಣ!

17.20 ಕೋಟಿ ವೆಚ್ಚದಲ್ಲಿ ಅಳ್ನಾವರ ರೈಲು ನಿಲ್ದಾಣ ನವೀಕರಣ

ಅಳ್ನಾವರ ರೈಲು ನಿಲ್ದಾಣ ನಿಲ್ದಾಣದ ಮುಖ್ಯ ಕಟ್ಟಡವನ್ನು ವಿಸ್ತರಿಸಲಾಗಿದ್ದು, ಪ್ರಾದೇಶಿಕ ಕಲೆ ಮತ್ತು ಸಾಂಸ್ಕೃತಿಕ ಸೊಗಡನ್ನು ಬಿಂಬಿಸುವ ಆಕರ್ಷಕ ಪ್ರವೇಶ ದ್ವಾರ ಹಾಗೂ ಮುಂಭಾಗದ ವಿನ್ಯಾಸವನ್ನು ಮಾಡಲಾಗಿದೆ. ಸುಮಾರು 4,500 ಚದರ ಮೀಟರ್ ಪ್ರದೇಶದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಮತ್ತು ಸುಸಜ್ಜಿತ ಪಾರ್ಕಿಂಗ್‌ಗಾಗಿ ವಿಶಾಲವಾದ ಜಾಗವನ್ನು ಅಭಿವೃದ್ಧಿಪಡಿಸಲಾಗಿದೆ. ಸಾರ್ವಜನಿಕರಿಗೆ ಟಿಕೆಟ್ ಪಡೆಯಲು ಅನುಕೂಲವಾಗುವಂತೆ 200 ಚದರ ಮೀಟರ್ ವಿಸ್ತೀರ್ಣದ ಸುಸಜ್ಜಿತ ಡಿಜಿಟಲ್ ಟಿಕೆಟ್ ಕೌಂಟರ್‌ಗಳನ್ನು ಸ್ಥಾಪಿಸಲಾಗಿದ್ದು, ಪ್ರಯಾಣಿಕರು ವಿಶ್ರಮಿಸಲು ಹವಾನಿಯಂತ್ರಿತ (AC) ಕಾಯುವ ಕೋಣೆಗಳು, ಮಹಿಳೆಯರಿಗಾಗಿ ಪ್ರತ್ಯೇಕ ಬೇಬಿ-ಫೀಡಿಂಗ್ ಕೊಠಡಿ ಮತ್ತು ಪ್ರತ್ಯೇಕ ಎಕ್ಸಿಕ್ಯೂಟಿವ್ ಲೌಂಜ್‌ಗಳನ್ನು ನಿರ್ಮಿಸಲಾಗಿದೆ. ಅಲ್ಲದೆ, ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಪಡೆಯಲು ಪ್ಲಾಟ್‌ಫಾರ್ಮ್ 1 ಮತ್ತು 2ಕ್ಕೆ ಸುಧಾರಿತ ರೂಫ್ ಶೆಲ್ಟರ್‌ಗಳನ್ನು ಅಳವಡಿಸಲಾಗಿದ್ದು, ನಿಲ್ದಾಣ ಹಾಗೂ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ವಚ್ಛ ಹಾಗೂ ಅತ್ಯಾಧುನಿಕ ಶೌಚಾಲಯ ಬ್ಲಾಕ್‌ಗಳನ್ನು ನಿರ್ಮಿಸಲಾಗಿದೆ.ಹಿರಿಯ ನಾಗರಿಕರು ಮತ್ತು ರೋಗಿಗಳ ಅನುಕೂಲಕ್ಕಾಗಿ 2 ಹೊಸ ಲಿಫ್ಟ್‌, 12 ಮೀಟರ್ ಅಗಲದ ಪಾದಚಾರಿ ಮೇಲ್ಸೇತುವೆ, ದೈಹಿಕ ವಿಕಲಚೇತನರಿಗಾಗಿ ವಿಶೇಷ ರ‍್ಯಾಂಪ್‌ಗಳು ಮತ್ತು ಹೈ-ಸ್ಪೀಡ್ ಉಚಿತ ವೈ-ಫೈ ವ್ಯವಸ್ಥೆಯನ್ನು ಈ ನಿಲ್ದಾಣ ಒಳಗೊಂಡಿದೆ.

ಹೈಟೆಕ್​​ ಸ್ಪರ್ಶ ಕಂಡ ಕೊಪ್ಪಳದ ರೈಲು ನಿಲ್ದಾಣ

21.14 ಕೋಟಿ ವೆಚ್ಚದಲ್ಲಿ ಕೊಪ್ಪಳ ರೈಲು ನಿಲ್ದಾಣವನ್ನು ನವೀಕರಣಗೊಳಿಸಲಾಗಿದ್ದು, ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸಲು 1508 ಚದರ ಮೀಟರ್ ವಿಸ್ತೀರ್ಣದ ಜಿ+1 ಹೊಸ ನಿಲ್ದಾಣ ಕಟ್ಟಡ ನಿರ್ಮಿಸಲಾಗಿದೆ.ಟಿಕೆಟ್ ಬುಕ್ಕಿಂಗ್ ಕಚೇರಿ, ನಿರೀಕ್ಷಣಾ ಕೊಠಡಿಗಳು, 600 ಚದರ ಮೀಟರ್ ವ್ಯಾಪ್ತಿಯ ಸುತ್ತಾಟ ಪ್ರದೇಶ ಅಭಿವೃದ್ಧಿಪಡಿಸಲಾಗಿದೆ. ಪ್ಲಾಟ್‌ಫಾರ್ಮ್‌ಗಳಲ್ಲಿ ಶೆಲ್ಟರ್ ನಿರ್ಮಾಣ, 12 ಮೀಟರ್ ಅಗಲದ ಹೊಸ ಕೇಂದ್ರ ಫುಟ್ ಓವರ್ ಬ್ರಿಡ್ಜ್ , ಪ್ರಯಾಣಿಕರ ಓಡಾಟಕ್ಕೆ 2 ಲಿಫ್ಟ್‌ಗಳು ಮತ್ತು 2 ಎಸ್ಕಲೇಟರ್‌ಗಳ ಸೌಲಭ್ಯ, ರೈಲು ನಿಲ್ದಾಣ ಹಾಗೂ ಸುತ್ತಲೂ ಎಲ್‌ಇಡಿ ಆಧಾರಿತ ಬೆಳಕಿನ ವ್ಯವಸ್ಥೆ, ಸುಲಭ್ ಶೌಚಾಲಯ, ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರ, ಹವಾನಿಯಂತ್ರಿತ ಕಾಯುವ ಕೋಣೆ, ಡಿಜಿಟಲ್ ಲಾಕರ್, ಶಿಶು ಆಹಾರ ಕೋಣೆಗಳ ಸೌಲಭ್ಯಗಳು ಈ ನಿಲ್ದಾಣದಲ್ಲಿವೆ.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು-ಉತ್ತರಗಳು (FAQ’s)

ಪ್ರಶ್ನೆ: ಪ್ರಧಾನಿ ನರೇಂದ್ರ ಮೋದಿಯಿಂದ ಇಂದು ಕರ್ನಾಟಕದ ಯಾವೆಲ್ಲ ನವೀಕೃತ ರೈಲು ನಿಲ್ದಾಣಗಳ ಉದ್ಘಾಟನೆ?

ಉತ್ತರ: ಬಂಟ್ವಾಳ, ಕೊಪ್ಪಳ, ಧಾರವಾಡದ ಅಳ್ನಾವರ ಮತ್ತು ಬಾಗಲಕೋಟೆಯ ಬಾದಾಮಿ ರೈಲು ನಿಲ್ದಾಣಗಳ ಉದ್ಘಾಟನೆ

ಪ್ರಶ್ನೆ: ಎಲ್ಲಿಂದ ವರ್ಚುವಲ್​​ ಮೂಲಕ ನವೀಕೃತ ರೈಲು ನಿಲ್ದಾಣಗಳನ್ನು ಮೋದಿ ಉದ್ಘಾಟಿಸಿದ್ದಾರೆ?

ಉತ್ತರ: ಪಂಜಾಬ್​​ನ ಜಲಂಧರ್​​ ಕ್ಯಾಂಟ್​​ ರೈಲು ನಿಲ್ದಾಣದಿಂದ ವರ್ಚುವಲ್​​ ಮೂಲಕ ಮೋದಿ ಉದ್ಘಾಟನೆ

ಪ್ರಶ್ನೆ: ದೇಶಾದ್ಯಂತ ಒಟ್ಟು ಎಷ್ಟು ನವೀಕೃತ ರೈಲು ನಿಲ್ದಾಣಗಳಿಗೆ ಇಂದು ಮೋದಿ ಚಾಲನೆ?

ಉತ್ತರ: ದೇಶಾದ್ಯಂತ ಒಟ್ಟು 75 ನವೀಕೃತ ರೈಲು ನಿಲ್ದಾಣಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ

 

Published On - 4:34 pm, Fri, 17 July 26

Follow Us