ಪ್ರಧಾನಿ ಮೋದಿಗೆ ಅಪೂರ್ವ ಉಡುಗೊರೆ: ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಸ್ವಾಮಿ ವಿವೇಕಾನಂದರ ಮಾರ್ಬಲ್ ಮೂರ್ತಿ ಸಮರ್ಪಣೆ
ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ಸಂದರ್ಭದಲ್ಲಿ, ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಸ್ವಾಮಿ ವಿವೇಕಾನಂದರ ಏಕಶಿಲಾ ಮೂರ್ತಿಯನ್ನು ವಿಶೇಷ ಉಡುಗೊರೆಯಾಗಿ ಸ್ವೀಕರಿಸಿದರು. ಸುಮಾರು 8.5 ಕೆಜಿ ತೂಕದ, 1.5 ಅಡಿ ಎತ್ತರದ, ವಿಯೆಟ್ನಾಂ ಮಾರ್ಬಲ್‌ನಿಂದ ಕೆತ್ತಿದ ಈ ಮೂರ್ತಿಯನ್ನು ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಅವರು ಪ್ರಧಾನಿಗೆ ಸಮರ್ಪಿಸಿದರು.
ಮೈಸೂರು, ಆ.1: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಆಶ್ರಮದ ವತಿಯಿಂದ ವಿಶೇಷ ಉಡುಗೊರೆಯನ್ನು ಸ್ವೀಕರಿಸಿದರು. ಅಯೋಧ್ಯೆಯ ಶ್ರೀ ರಾಮಲಲ್ಲಾ ಮೂರ್ತಿಯನ್ನು ಕೆತ್ತಿ ಖ್ಯಾತಿ ಗಳಿಸಿರುವ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರು ಕೆತ್ತಿದ ಸ್ವಾಮಿ ವಿವೇಕಾನಂದರ ಸುಂದರ ಏಕಶಿಲಾ ಮೂರ್ತಿಯನ್ನು ಪ್ರಧಾನಿಗೆ ಸಮರ್ಪಿಸಲಾಯಿತು. ಈ ಮೂರ್ತಿಯು ಸುಮಾರು 8.5 ಕೆಜಿ ತೂಕವನ್ನು ಹೊಂದಿದ್ದು, 1.5 ಅಡಿ ಎತ್ತರವಿದೆ. ವಿಯೆಟ್ನಾಂ ಮಾರ್ಬಲ್‌ನಿಂದ ನಿರ್ಮಿಸಲಾಗಿರುವ ಈ ಮೂರ್ತಿಯು ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್ ಮಾದರಿಯನ್ನು ಆಧರಿಸಿದೆ. ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಈ ಅಮೂಲ್ಯ ಉಡುಗೊರೆಯನ್ನು ಹಸ್ತಾಂತರಿಸಿದರು. ಶಿಲ್ಪಿ ಅರುಣ್ ಯೋಗಿರಾಜ್ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರವಾದ ವಿವೇಕ ಸ್ಮಾರಕದ ಉದ್ಘಾಟನಾ ಸಮಾರಂಭದ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದು ಮಾನವ ನಿರ್ಮಾಣ ಮತ್ತು ರಾಷ್ಟ್ರ ನಿರ್ಮಾಣದ ಸ್ವಾಮಿ ವಿವೇಕಾನಂದರ ಆಶಯಗಳನ್ನು ಮುಂದಕ್ಕೆ ಕೊಂಡೊಯ್ಯುವ ಬದ್ಧತೆಯನ್ನು ಪುನರುಚ್ಚರಿಸುವ ಮಹತ್ವದ ಸಂದರ್ಭವಾಗಿತ್ತು. ಸಾವಿರಾರು ವಿವೇಕಾನಂದರ ಅಭಿಮಾನಿಗಳು ಒಂದು ದಶಕದಿಂದಲೂ ಈ ಕ್ಷಣಕ್ಕಾಗಿ ಕಾತುರದಿಂದ ಕಾಯುತ್ತಿದ್ದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

