ಬೆಂಗಳೂರು: ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಹಾಗೂ ಕೆಂಪೇಗೌಡ ಥೀಮ್ ಪಾರ್ಕ್ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ.
ಇಂದು(ಅ.06) ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ 6ನೇ ಸಭೆಯಲ್ಲಿ ಬಸವರಾಜ ಬೊಮ್ಮಾಯಿ, ಪ್ರಧಾನಿ ಬರುವ ಮಾಹಿತಿಯನ್ನು ಅಧಿಕಾರಿಗಳಿಗೆ ತಿಳಿಸಿದ್ದು, ಸೂಕ್ತ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಆದ್ರೆ, ಮೋದಿ ಅವರು ಯಾವಾಗ ಬರುತ್ತಾರೆ ಎನ್ನುವುದು ಅಧಿಕತವಾಗಿ ದಿನಾಂಕ ಫಿಕ್ಸ್ ಆಗಿಲ್ಲ. ಮೋದಿ ಅವರ ಸಮಯವಕಾಶವನ್ನು ನೀಡಿ ಉದ್ಘಾಟನೆ ಕಾರ್ಯಕ್ರಮದ ದಿನವನ್ನು ನಿಗದಿಪಡಿಸಲು ಬೊಮ್ಮಾಯಿ ತೀರ್ಮಾನಿಸಿದ್ದಾರೆ.
ನಾಡಿನ ವಿವಿಧ ಸ್ಥಳಗಳಿಂದ ಪವಿತ್ರ ಮೃತ್ತಿಕೆ ಹಾಗೂ ಜಲಸಂಗ್ರಹಿಸುವ ಅಭಿಯಾನದಲ್ಲಿ ತಾಲೂಕು ಕೇಂದ್ರಗಳಿಗೆ ಮಣ್ಣನ್ನು ತಲುಪಿಸುವಂತೆ ಸೂಚನೆ ನೀಡಿ, ಅಲ್ಲಿಂದ ಜಿಲ್ಲಾ ಕೇಂದ್ರಕ್ಕೆ ತರಿಸುವಂತೆ ಸೂಚಿಸಿದರು. ಕೆಂಪೇಗೌಡರ ಜೀವನ ಚರಿತ್ರೆಯನ್ನು ಬಿಂಬಿಸುವ ವಿಡಿಯೋ ಮ್ಯಾಪಿಂಗ್ ಹಾಗೂ ನೃತ್ಯ ರೂಪಕ ಆಯೋಜಿಸಲು ಅನುಮತಿ ನೀಡಿದರು.
ಕೆಂಪೇಗೌಡರ ವೀರ ಸಮಾಧಿ ಅಭಿವೃದ್ಧಿಗೆ ಭೂಸ್ವಾಧೀನ ಪ್ರಕ್ರಿಯೆ, 46 ತಾಣಗಳಲ್ಲಿ ನಾಮಫಲಕಗಳ ಅಳವಡಿಕೆ, ಮಾಗಡಿ ಕೋಟೆ ಸಂರಕ್ಷಣೆ ಮುಂತಾದ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ಸಚಿವರಾದ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್, ಆರ್.ಅಶೋಕ್, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತಿತರರು ಉಪಸ್ಥಿತರಿದ್ದರು.
ಶಂಕುಸ್ಥಾಪನೆ ವೇಳೆ ಹೇಳಿದ್ದ ಸಿಎಂ
ಹೌದು… ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಕೆಂಪೇಗೌಡರ ಕಂಚಿನ ಪ್ರತಿಮೆ, ಥೀಮ್ ಪಾರ್ಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಅಲ್ಲದೇ ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ನವೆಂಬರ್ನಲ್ಲಿ ಉದ್ಘಾಟನೆ ಮಾಡಿಸಲಾಗುವುದು ಎಂದು ಹೇಳಿದ್ದರು. ಅದರಂತೆಯೇ ಇದೀಗ ಸಿಎಂ ಬೊಮ್ಮಾಯಿ ಅವರು ಕೆಂಪೇಗೌಡರ ಕಂಚಿನ ಪ್ರತಿಮೆ, ಥೀಮ್ ಪಾರ್ಕ್ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ಜು ಕರೆತರುತ್ತಿದ್ದಾರೆ.
64 ಕೋಟಿ ರೂ. ವೆಚ್ಚದಲ್ಲಿ, 98 ಕೆಜಿ ಕಂಚು, 120 ಕೆಜಿ ಸ್ಟೀಲ್ ಬಳಸಿ ಪ್ರತಿಮೆ ನಿರ್ಮಿಸಲಾಗುತ್ತಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಪ್ರತಿಮೆ ಉದ್ಘಾಟನಾ ಅಭಿಯಾನ ನಡೆಯಲಿದೆ ಎಂದು ಬೊಮ್ಮಾಯಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.