ಯಾವ ಕ್ರೈಂ ಥ್ರಿಲ್ಲರ್ ಸಿನಿಮಾಗೂ ಕಡಿಮೆಯಿಲ್ಲ ಗೋಬಿಮಂಚೂರಿ ವಿಚಾರದಲ್ಲಿ ನಡೆದ ಕೊಲೆ ಸ್ಟೋರಿ
ಗೋಬಿ ಮಂಚೂರಿ ವಿಚಾರಕ್ಕೆ ತನ್ನ ಅಜ್ಜಿಯನ್ನು ಕೊಲೆ ಮಾಡಿದ ಮೊಮ್ಮಗ ಮತ್ತು ಆತನ ತಾಯಿ ಸೇರಿದಂತೆ ಒಟ್ಟು ಮೂವರನ್ನು ಬೆಂಗಳೂರಿನ ಕೆಂಗೇರಿ ಪೊಲೀಸರು ಐದು ವರ್ಷಗಳ ನಂತರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು: ನಗರದಲ್ಲಿ ನಡೆದ ಒಂದು ಅಪರಾಧ ಕೃತ್ಯವು ಯಾವುದೇ ಕ್ರೈಂ ಥ್ರಿಲ್ಲರ್ ಸಿನಿಮಾಗೂ ಕಡಿಮೆಯಿಲ್ಲ. ಮನೆ ಸದಸ್ಯೆಯನ್ನ ಕೊಂದು ಮನೆಯಲ್ಲೇ ಹೂತಿಟ್ಟ ಕಥೆ ಇದು. ಇದೀಗ ಆರು ತಿಂಗಳ ಬಳಿಕ ಕೊಲೆ ರಹಸ್ಯ ಬಯಲಾಗಿದ್ದು, ಆರೋಪಿಗಳು ಮಹಾರಾಷ್ಟ್ರ ಕೊಲ್ಹಾಪುರದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ಮನೆಯ ಸದಸ್ಯೆಯನ್ನು ಕೊಲೆ ಮಾಡಿದ ಹಂತಕರು ಆರು ತಿಂಗಳು ಶವದೊಂದಿಗೆ ಮನೆಯಲ್ಲೇ ಇದ್ದರು. ನಂತರ ಆರೋಪಿಗಳು ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದರು. 2016ರ ಆಗಸ್ಟ್ ತಿಂಗಳಲ್ಲಿ ಕೆಂಗೇರಿ ಸ್ಯಾಟಲೈಟ್ನಲ್ಲಿ ನಡೆದಿದ್ದ ಹತ್ಯೆ ಇದಾಗಿದೆ.
ವೃದ್ದೆ ಶಾಂತಕುಮಾರಿ (69) ಮಗಳು ಶಶಿಕಲಾ, ಮೊಮ್ಮಗ ಸಂಜಯ್ ಜೊತೆ ವಾಸವಿದ್ದರು. ಶಾಂತಕುಮಾರಿ ಅತಿಯಾದ ಮಡಿವಂತಿಕೆ, ಶಿಸ್ತಿನಿಂದಿರುತ್ತಿದ್ದ ಇರುತ್ತಿದ್ದರು. ಒಂದು ದಿನ ಏರೋನಾಟಿಕ್ಸ್ ಇಂಜಿನಿಯರಿಂಗ್ ಪ್ರತಿಭಾವಂತನಾಗಿದ್ದ ಸಂಜಯ್ ಕಾಲೇಜಿನಿಂದ ಬರುವಾಗ ಅಜ್ಜಿಗೆ ಗೋಬಿ ಮಂಚೂರಿ ತಂದುಕೊಟ್ಟಿದ್ದ. ಆದರೆ ಶಿಸ್ತಿನಿಂದ ಇರುತ್ತಿದ್ದ ಶಾಂತಮ್ಮ ಗೋಬಿ ಮಂಚೂರಿ ಬೇಡ ಎಂದು ಮೊಮ್ಮಗನ ಮುಖಕ್ಕೆ ಎಸೆದಿದ್ದಾರೆ. ಇದು ಸಂಜಯ್ನನ್ನು ಕೆರಳಿಸಿದೆ. ಪರಿಣಾಮವಾಗಿ ಲಟ್ಟಣಿಗೆಯಿಂದ ಬಲವಾಗಿ ಅಜ್ಜಿಗೆ ಹೊಡೆದಿದ್ದ. ಇದರಿಂದಾಗಿ ರಕ್ತಸ್ರಾವವಾಗಿ ಶಾಂತಮ್ಮ ಮೃತಪಟ್ಟಿದ್ದಾರೆ.
ಇತ್ತ ತಾಯಿಯನ್ನು ಮಗ ಕೊಲೆ ಮಾಡಿದ್ದಕ್ಕೆ ಆಕ್ರೋಶಗೊಂಡ ಸಂಜಯ್ ತಾಯಿ ಶಶಿಕಲಾ, ಮಗನ ಕೃತ್ಯವನ್ನ ಪೊಲೀಸರಿಗೆ ತಿಳಿಸಲು ಮುಂದಾಗಿದ್ದಾಳೆ. ಈ ವೇಳೆ ಸೆಂಟಿಮೆಂಟ್ ಡೈಲಾಗ್ ಹೊಡೆದ ಸಂಜಯ್, ‘ನಿನ್ನ ಮಗನನ್ನ ನೀನೇ ಜೈಲಿಗೆ ಕಳಿಸ್ತೀಯಾ?’ ಎಂದು ಗೋಗರೆದಿದ್ದಾನೆ. ತಾಯಿಯ ಮನಸ್ಸು ಕರಗಿತು. ಬಳಿಕ ಕೃತ್ಯ ಮುಚ್ಚಿಹಾಕುವ ತಂತ್ರವನ್ನು ತಾಯಿಮಗ ಸೇರಿಕೊಂಡು ಹೂಡಿದ್ದಾರೆ. ಇದಕ್ಕೆ ಸಾಥ್ ನೀಡಿದವನು ಸಂಜಯ್ ಸ್ನೇಹಿತ ನಂದೀಶ್. ಈ ಮೂವರು ಸೇರಿಕೊಂಡು ಶಾಂತಮ್ಮನ ಮೃತದೇಹವನ್ನು ಕೆಮಿಕಲ್ ಹಾಕಿ ಕಬೋರ್ಡ್ನಲ್ಲಿ ಶವ ಇರಿಸಿ ಸಿಮೆಂಟ್ ಪ್ಲಾಸ್ಟರಿಂಗ್ ಮಾಡಿದ್ದರು. ಅಲ್ಪ ದಿನಗಳ ಬಳಿಕ ಶವದ ವಾಸನೆ ಬರಲಾರಂಭಿಸಿತ್ತು. ಹೀಗಾಗಿ ಆರೋಪಿಗಳು ಪುನಃ ಮೃತದೇಹಕ್ಕೆ ಬಣ್ಣ ಬಳಿದು ಪ್ಲಾಸ್ಟರಿಂಗ್ ಮಾಡಿದ್ದರು.
ಬಳಿಕ ಊರಿಗೆ ಹೋಗಿ ಬರುತ್ತೇವೆ ಅಂತಾ ಮನೆ ಮಾಲೀಕನಿಗೆ ಹೇಳಿದ್ದ ಅರೋಪಿಗಳು ಆರು ತಿಂಗಳುಗಳು ಕಳೆದರೂ ವಾಪಾಸ್ ಬಂದಿರಲಿಲ್ಲ. ಹೀಗಾಗಿ ಮನೆ ಮಾಲೀಕ ರಿಪೇರಿ ಕೆಲಸಕ್ಕಾಗಿ ಮನೆಯ ಬೀಗ ತೆರೆದಾಗ ರಕ್ತಸಿಕ್ತ ಸೀರೆ ಪತ್ತೆಯಾಗಿತ್ತು. ಹೀಗೆ ಪರಿಶೀಲನೆ ನಡೆಸಿದಾಗ ಕೊಲೆ ರಹಸ್ಯ ಬಯಲಿಗೆ ಬಂದಿದೆ. ಕಬೋರ್ಡ್ ಮುಚ್ಚಿರುವುದನ್ನ ಕಂಡು ತೆರೆದು ನೋಡಿದಾಗ ಶವದ ಕಳೇಬರ ಪತ್ತೆಯಾಗಿತ್ತು. ಹತ್ಯೆ ವಿಚಾರ ಮೇ 7ರಂದು ಪತ್ತೆಯಾಗಿದ್ದು, ಕೂಡಲೇ ಮನೆ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮನೆ ಮಾಲೀಕನ ದೂರಿನ ಮೇರೆಗೆ ಸ್ಥಳಕ್ಕೆ ಆಗಮಿಸಿದ ಕೆಂಗೇರಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ತನಿಖೆಯ ಭಾಗವಾಗಿ ಸಂಜಯ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ನಂದೀಶ್ನನ್ನ ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸಿದರು. ಈ ವೇಳೆ ಹತ್ಯೆಯ ಸಂಪೂರ್ಣ ವಿಚಾರ ಬಯಲಾಗಿದೆ.
ಐದು ವರ್ಷಗಳಿಂದಲೂ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ ಆರೋಪಿಗಳು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನೆಲೆಸಿದ್ದರು. ಜೀವನಕ್ಕಾಗಿ ಸಂಜಯ್ ಹೊಟೇಲ್ ಒಂದರಲ್ಲಿ ಸರ್ವರ್ ಆಗಿ ಕೆಲಸ ಮಾಡಿಕೊಂಡಿದ್ದನು. ಈ ಎಲ್ಲ ವಿಚಾರ ತಿಳಿದ ಕೆಂಗೇರಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ