Prahlad Modi: ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ, ಇತರರು ನಾಳೆ ಆಸ್ಪತ್ರೆಯಿಂದ ಬಿಡುಗಡೆ

| Updated By: Ganapathi Sharma

Updated on: Dec 28, 2022 | 9:23 AM

ಸಚಿವ ನಾರಾಯಣಗೌಡ, ಶಾಸಕ ಜಿ.ಟಿ. ದೇವೇಗೌಡ ಸೇರಿ ಹಲವರು ಮಂಗಳವಾರ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

Prahlad Modi: ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ, ಇತರರು ನಾಳೆ ಆಸ್ಪತ್ರೆಯಿಂದ ಬಿಡುಗಡೆ
ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕಾರು ಅಪಘಾತ (ಸಂಗ್ರಹ ಚಿತ್ರ)
Follow us on

ಮೈಸೂರು: ತಾಲೂಕಿನ ಕಡಕೊಳ ಬಳಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೈಸೂರಿನ ಜೆಎಸ್​ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಪ್ರಧಾನಿ ನರೇಂದ್ರ ಮೋದಿ (Narendra Modi) ಸಹೋದರ ಪ್ರಹ್ಲಾದ್ ಮೋದಿ (Prahlad Modi) ಹಾಗೂ ಇತರರು ನಾಳೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಗಾಯಾಳುಗಳ ಆರೋಗ್ಯದ ಕುರಿತು ಮುಖ್ಯಮಂತ್ರಿ ಹಾಗೂ ಪ್ರಧಾನಿ ಕಾರ್ಯಾಲಯಕ್ಕೆ ಕ್ಷಣಕ್ಷಣದ ಅಪ್​ಡೇಟ್ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಳುಗಳು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಎರಡು ದಿನ ಮೈಸೂರಿನಲ್ಲೇ ವಾಸ್ತವ್ಯ ಹೂಡುವ ಸಾಧ್ಯತೆ ಇದೆ. ಕಾರಿನಲ್ಲಿದ್ದ ಮಗುವಿನ ಕಾಲಿಗೆ ಏಟಾಗಿರುವ ಕಾರಣ ಇಂದು ಹಾಗೂ ನಾಳೆ ಚಿಕಿತ್ಸೆ ಮುಂದುವರಿಯಲಿದೆ. ಸದ್ಯ ಗಾಯಾಳುಗಳು ತುರ್ತು ನಿಗಾ ಘಟಕದಿಂದ ವಾರ್ಡ್‌ಗೆ ಶಿಫ್ಟ್ ಆಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಸಚಿವ ನಾರಾಯಣಗೌಡ, ಶಾಸಕ ಜಿ.ಟಿ. ದೇವೇಗೌಡ ಸೇರಿ ಹಲವರು ಮಂಗಳವಾರ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ: Prahlad Modi: ಮೈಸೂರಿನಲ್ಲಿ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕಾರು ಅಪಘಾತ

ಪ್ರಹ್ಲಾದ್ ಮೋದಿ ಅವರ ಕಾರು ಬೆಂಗಳೂರಿನಿಂದ ಬಂಡೀಪುರಕ್ಕೆ ತೆರಳುತ್ತಿದ್ದ ವೇಳೆ ಮೈಸೂರು ತಾಲೂಕಿನ ಕಡಕೊಳ ಬಳಿ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಪ್ರಹ್ಲಾದ್ ಮೋದಿ ಪುತ್ರ ಹಾಗೂ ಸೊಸೆಗೆ ಗಂಭೀರ ಗಾಯಗಳಾಗಿತ್ತು. ಕಾರಿನಲ್ಲಿ ಪ್ರಹ್ಲಾದ್ ಮೋದಿ, ಅವರ ಮಗ, ಸೊಸೆ, ಮೊಮ್ಮಗ ಮತ್ತು ಚಾಲಕ ಇದ್ದರು. ಗಾಯಗೊಂಡಿರುವ ಅವರನ್ನು ಕೂಡಲೇ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಹ್ಲಾದ್ ಮೋದಿ ಅವರ ದವಡೆಗೆ ಗಾಯಗಳಾಗಿದ್ದು, ಅವರ ಸೊಸೆ ತಲೆಗೆ ಗಾಯವಾಗಿತ್ತು. ಇತರರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ್ದ ಮೈಸೂರು ಎಸ್​ಪಿ ಸೀಮಾ ಲಾಟ್ಕರ್, ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲದೆ ಮುಖ್ಯಮಂತ್ರಿಯವರ ಕಾರ್ಯಾಲಯಕ್ಕೂ ಮಾಹಿತಿ ನೀಡಿದ್ದರು. ಸಂಸದ ಪ್ರತಾಪ್ ಸಿಂಹ ಹಾಗೂ ಸುತ್ತೂರು ಶ್ರೀಗಳು ಆಸ್ಪತ್ರೆಗೆ ಭೇಟಿ ನೀಡಿ ಪ್ರಹ್ಲಾದ್ ಮೋದಿ ಕುಟುಂಬ ಸದಸ್ಯರ ಆರೋಗ್ಯ ವಿಚಾರಿಸಿದ್ದರು.

ಇನ್ನಷ್ಟು ಮೈಸೂರು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ