ಕೊವಿಡ್-19 ನಿರ್ವಹಣೆ: ದೇವೇಗೌಡರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ

| Updated By: Digi Tech Desk

Updated on: Apr 27, 2021 | 11:14 AM

‘ನಾವು ಒಂದು ದೇಶವಾಗಿ ಈ ಸಮಸ್ಯೆಯನ್ನು ಎದುರಿಸಬೇಕಿದೆ. ಎಲ್ಲ ಬಗೆಯ ರಚನಾತ್ಮಕ ಕ್ರಮಗಳನ್ನು ನಾವು ಬೆಂಬಲಿಸಬೇಕು. ಜನರ ಸಂಕಷ್ಟ ಕಡಿಮೆ ಮಾಡಲು ಮತ್ತು ಜೀವ ಉಳಿಸಲು ಎಲ್ಲರೂ ಒಂದಾಗಿ ಶ್ರಮಿಸಬೇಕು’ ಎಂದು ದೇವೇಗೌಡರು ಹೇಳಿದ್ದರು.

ಕೊವಿಡ್-19 ನಿರ್ವಹಣೆ: ದೇವೇಗೌಡರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ
ಎಚ್​.ಡಿ.ದೇವೇಗೌಡ ಮತ್ತು ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರೊಂದಿಗೆ ಮಾತನಾಡಿ, ಕೊವಿಡ್-19 ಪಿಡುಗಿನ ನಿರ್ವಹನೆ ವಿಚಾರವಾಗಿ ಚರ್ಚಿಸಿದರು. ಈ ಕುರಿತು ದೇವೇಗೌಡ ಟ್ವೀಟ್ ಮಾಡಿ, ಪ್ರಧಾನಿ ತಮಗೆ ಕರೆ ಮಾಡಿದ್ದರು ಎಂದು ದೃಢಪಡಿಸಿದ್ದಾರೆ. ನಿನ್ನೆಯಷ್ಟೇ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕೊರೊನಾ ಸೋಂಕು ನಿರ್ವಹಣೆ ಬಗ್ಗೆ ಸಲಹೆ ನೀಡಿದ್ದರು.

ತಮ್ಮ 4 ಪುಟಗಳ ಪತ್ರವನ್ನು ಟ್ವೀಟ್ ಮಾಡಿದ್ದ ದೇವೇಗೌಡ, ‘ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿನ್ನೆ ಪತ್ರ ಬರೆದಿದ್ದೆ. ಕೊರೊನಾ ಪಿಡುಗು ನಿರ್ವಹಣೆಗೆ ಸಂಬಂಧಿಸಿದಂತೆ ಕೆಲ ಸಲಹೆಗಳನ್ನೂ ನೀಡಿದ್ದೇನೆ. ಇದು ರಾಷ್ಟ್ರೀಯ ಬಿಕ್ಕಟ್ಟು ಮತ್ತು ನಾವು ಒಂದು ದೇಶವಾಗಿ ಈ ಸಮಸ್ಯೆಯನ್ನು ಎದುರಿಸಬೇಕಿದೆ. ಎಲ್ಲ ಬಗೆಯ ರಚನಾತ್ಮಕ ಕ್ರಮಗಳನ್ನು ನಾವು ಬೆಂಬಲಿಸಬೇಕು. ಜನರ ಸಂಕಷ್ಟ ಕಡಿಮೆ ಮಾಡಲು ಮತ್ತು ಜೀವ ಉಳಿಸಲು ಎಲ್ಲರೂ ಒಂದಾಗಿ ಶ್ರಮಿಸಬೇಕು’ ಎಂದು ಹೇಳಿದ್ದರು.

ತಮ್ಮೊಡನೆ ಪ್ರಧಾನಿ ಮಾತನಾಡಿದ ವಿಚಾರವನ್ನೂ ದೇವೇಗೌಡರು ಟ್ವೀಟ್ ಮೂಲಕವೇ ತಿಳಿಸಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಈಗಷ್ಟೇ ನನ್ನೊಂದಿಗೆ ಮಾತನಾಡಿದರು. ನಾನು ಬರೆದ ಪತ್ರವನ್ನು ಸಂಪೂರ್ಣ ಓದಿದ್ದಾಗಿ ತಿಳಿಸಿದರು. ನನ್ನ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದ್ದಾರೆ. ಅವರ ಕಾಳಜಿ ಮತ್ತು ಶೀಘ್ರ ಪ್ರತಿಕ್ರಿಯೆಗಾಗಿ ಧನ್ಯವಾದ ಅರ್ಪಿಸುತ್ತೇನೆ. ಈ ಪಿಡುಗನ್ನು ಸೋಲಿಸಲು ನಾವು ಜೊತೆಗೂಡಿ ಕೆಲಸ ಮಾಡಬೇಕಿದೆ’ ಎಂದು ದೇವೇಗೌಡರು ಟ್ವೀಟ್ ಮಾಡಿದ್ದಾರೆ.

ಟ್ವಿಟರ್​ನಲ್ಲಿ ಮತ್ತೊಂದು ಆಯಾಮದ ಚರ್ಚೆ
ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಪತ್ರಕ್ಕೆ ಅಷ್ಟೊಂದು ಪ್ರಾಮುಖ್ಯತೆ ಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಮತ್ತೋರ್ವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪತ್ರವನ್ನೇಕೆ ನಿರ್ಲಕ್ಷಿಸಿದರು ಎಂದು ಟ್ವಿಟರ್​ನಲ್ಲಿ ಚರ್ಚೆಗಳು ಗರಿಗೆದರಿವೆ. ದೇವೇಗೌಡರ ಟ್ವೀಟ್​ಗೆ ಕಾಮೆಂಟ್ ಮಾಡಿರುವ ಹಲವರು ಈ ವಿಚಾರ ಪ್ರಸ್ತಾಪಿಸಿದ್ದಾರೆ.

‘ದೇವೇಗೌಡರಷ್ಟು ರಚನಾತ್ಮಕವಾಗಿ ಮನಮೋಹನ್ ಸಿಂಗ್ ಪತ್ರ ಬರೆದಿಲ್ಲ. ಸಿಂಗ್ ಅವರ ಪತ್ರದಲ್ಲಿ ರಾಜಕಾರಣದ ವಾಸನೆ ಢಾಳಾಗಿ ಇದೆ. ಸೋನಿಯಾ ಗಾಂಧಿ ಸೂಚನೆಯಂತೆ ಸಿಂಗ್ ಪತ್ರ ಬರೆದಂತೆ ಇದೆ’ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ರಾಜಾಮಣಿ ಎನ್ನುವವರು ಮಾತ್ರ, ‘ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಸೇರಿದಂತೆ ಇತರ ವಿರೋಧ ಪಕ್ಷಗಳು ರಚನಾತ್ಮಕವಾಗಿ ಕೆಲಸ ಮಾಡಲು ಮುಂದಾಗಬೇಕು. ಈ ಹಂತದಲ್ಲಿ ಕ್ಷುಲ್ಲಕ ರಾಜಕಾರಣ ಮಾಡಬಾರದು’ ಎಂದು ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: HD Devegowda: ಪ್ರಧಾನಿ ನರೇಂದ್ರ ಮೋದಿಗೆ 4 ಪುಟಗಳ ಸುದೀರ್ಘ ಪತ್ರ ಬರೆದ ಮಾಜಿ ಪ್ರಧಾನಿ ದೇವೇಗೌಡ

ಇದನ್ನೂ ಓದಿ: Karnataka Lockdown: ನಾಳೆ ಸಂಜೆಯಿಂದ ಕರ್ನಾಟಕದಲ್ಲಿ ಕೊವಿಡ್​ ಕರ್ಫ್ಯೂ​! ಕೊರೊನಾ ನಿಯಂತ್ರಣಕ್ಕಾಗಿ 14 ದಿನ ರಾಜ್ಯಕ್ಕೆ ಬೀಗ

Published On - 11:20 pm, Mon, 26 April 21