ಉತ್ತರ ಕನ್ನಡ: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಉಲ್ಬಣಿಸಿದ ಕಾರಣ ಸೋಂಕು ನಿಯಂತ್ರಣಕ್ಕೆ ತರುವ ಕುರಿತು ಚರ್ಚಿಸಲು ಕೇಂದ್ರ ಸರ್ಕಾರದ ವತಿಯಿಂದ ಪಾಸಿಟಿವಿಟಿ ಪ್ರಮಾಣ ಹೆಚ್ಚಾಗಿರುವ ಜಿಲ್ಲೆಗಳ ಪಟ್ಟಿ ಸಿದ್ಧವಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಪೈಕಿ ಈ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಯೇ ಮೊದಲ ಸ್ಥಾನದಲ್ಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಸಿಟಿವಿಟಿ ಪ್ರಮಾಣ ಹೆಚ್ಚಿರುವ ಜಿಲ್ಲೆಗಳ ಕುರಿತು ಚರ್ಚಿಸಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಜಿಲ್ಲೆಯಲ್ಲಿ ಸೋಂಕು ಹೆಚ್ಚಲು ಜಿಲ್ಲಾಡಳಿತದ ಸಂಪೂರ್ಣ ನಿರ್ಲಕ್ಷ್ಯವೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿದ್ದು, ಸರ್ಕಾರದ ಮಾರ್ಗಸೂಚಿಗೆ ಕಾಯುತ್ತಿದ್ದ ಜಿಲ್ಲಾಡಳಿತ ಆರಂಭದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಹೆಚ್ಚಾಗಿರುವ ಪಾಸಿಟಿವಿಟಿ ಪ್ರಮಾಣ ಏರಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶೇ.60ರಷ್ಟು ಜನ ಉದ್ಯೋಗ ನಿಮಿತ್ತ ಹೊರಜಿಲ್ಲೆ ಹಾಗೂ ರಾಜ್ಯಗಳಲ್ಲಿದ್ದು, ಲಾಕ್‌ಡೌನ್ ಘೋಷಿಸುತ್ತಿದ್ದಂತೆ ಜಿಲ್ಲೆಗೆ ವಾಪಸ್ಸಾಗಿದ್ದಾರೆ. ಬೆಂಗಳೂರು, ಗೋವಾ, ಮಹಾರಾಷ್ಟ್ರದಿಂದ ಅಧಿಕ ಪ್ರಮಾಣದ ಜನ ಆಗಮಿಸಿದ್ದು, ಈ ಸಂದರ್ಭದಲ್ಲಿ ಯಾವುದೇ ಕಟ್ಟುನಿಟ್ಟಿನ ಕ್ರಮಕೈಗೊಂಡಿಲ್ಲ ಎಂಬ ಆಪಾದನೆ ಕೇಳಿಬಂದಿದೆ. ಅಲ್ಲದೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಮದುವೆ, ಮುಂಜಿ ಸೇರಿದಂತೆ1000ಕ್ಕೂ ಹೆಚ್ಚು ಕಾರ್ಯಕ್ರಮಗಳಿಗೆ ಬೇಕಾಬಿಟ್ಟಿ ಅವಕಾಶ ನೀಡಲಾಗಿತ್ತು, ಯಾವ ಕಾರ್ಯಕ್ರಮಗಳಲ್ಲೂ ಕೊವಿಡ್ ನಿಯಮಾವಳಿಗಳನ್ನು ಪಾಲಿಸಿಲ್ಲ. ಹೀಗಾಗಿ ಸೋಂಕು ಉಲ್ಬಣಿಸಿದೆ ಎಂದು ಹೇಳಲಾಗುತ್ತಿದೆ.
ಸ್ವತಃ ಉತ್ತರ ಕನ್ನಡ ಜಿಲ್ಲಾಧಿಕಾರಿಯೇ ಕೊರೊನಾ ಸೋಂಕಿಗೆ ತುತ್ತಾಗಿದ್ದ ಕಾರಣ ಆ ವೇಳೆ ಪರಿಸ್ಥಿತಿ ನಿಭಾಯಿಸದೆ ಕಡೆಗಣಿಸಲಾಗಿತ್ತು. ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬಂದವರಿಂದಲೇ ಉತ್ತರ ಕನ್ನಡದಲ್ಲಿ ಸೋಂಕು ತೀವ್ರವಾಗಿದ್ದು ಜನರು ಬೇಕಾಬಿಟ್ಟಿ ಓಡಾಡುತ್ತಿದ್ದ ಕಾರಣ ಬೆಂಗಳೂರಿನ ಪರಿಸ್ಥಿತಿ ಇಲ್ಲೂ ನಿರ್ಮಾಣವಾಗುವಂತೆ ಆಗಿದೆ ಎಂಬ ಮಾತು ಕೇಳಿಬರುತ್ತಿದೆ. ಸದ್ಯ ದಾಂಡೇಲಿ, ಅಂಕೋಲಾದಂತಹ ಸಣ್ಣ ಪಟ್ಟಣಗಳಲ್ಲೂ ಪ್ರತ್ಯೇಕ ಲಾಕ್‌ಡೌನ್ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಇದು ಗಂಭೀರ ಪರಿಸ್ಥಿತಿಯಾಗಿರುವ ಕಾರಣ ಪ್ರಧಾನಿ ಮೋದಿಯೊಂದಿಗಿನ ಸಭೆಯಲ್ಲಿ ಈ ವಿಚಾರ ಪ್ರಮುಖವಾಗಿ ಪ್ರಸ್ತಾಪವಾಗಲಿದೆ ಎನ್ನಲಾಗಿದೆ.
ಇದನ್ನೂ ಓದಿ:
Covid-19 Positivity Rate: ಕೊವಿಡ್ ಪಾಸಿಟಿವಿಟಿ ರೇಟ್ನಲ್ಲಿ ಉತ್ತರ ಕನ್ನಡ ನಂ.1: ಇದು ಗಾಬರಿ ಹುಟ್ಟಿಸುವ ವಿಚಾರ
Published On - 9:21 am, Mon, 17 May 21