ಚಿತ್ರದುರ್ಗ: ಪೋಕ್ಸೋ ಕಾಯ್ದೆಯಡಿ ಬಂಧಿತರಾಗಿರುವ ಮುರುಘಾ ಮಠದ ಸ್ವಾಮೀಜಿ ಡಾ.ಶಿವಮೂರ್ತಿ ಶರಣರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಸಂತ್ರಸ್ತೆಯರ ಹೇಳಿಕೆ ಸಂಬಂಧ ಆರೋಪಿಯ ವಿಚಾರಣೆ ನಡೆಸಬೇಕಾಗಿರುವ ಹಿನ್ನೆಲೆ ಮೂರು ದಿನ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಆದರೆ ವೈದ್ಯಕೀಯ ಚಿಕಿತ್ಸೆ ಬಗ್ಗೆ ಯಾವುದೇ ನಿರ್ದೇಶನವನ್ನು ಕೋರ್ಟ್ ನೀಡಿಲ್ಲ. ಈ ನಡುವೆ ಆರೋಪಿ ಸ್ವಾಮೀಜಿಗೆ ಮಠದ ಊಟ ನೀಡಲು ಅನುಮತಿ ನೀಡಬೇಕು ಎಂದು ವಕೀಲರು ಕೋರ್ಟ್ ಮುಂದೆ ಮನವಿ ಮಾಡಿದ್ದು, ಮೆಮೋ ಸಲ್ಲಿಸುವಂತೆ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಸೂಚಿಸಿದೆ.
ಮುರುಘಾ ಶ್ರೀಗಳನ್ನು ಕಸ್ಟಡಿಗೆ ಪಡೆದಿರುವ ಬಗ್ಗೆ ಮಾಹಿತಿ ನೀಡಿದ ಚಿತ್ರದುರ್ಗ ಜಿಲ್ಲೆಯ ಎಸ್ಪಿ ಕೆ.ಪರಶುರಾಮ್, ಮುರುಘಾಶ್ರೀಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಕೋರ್ಟ್ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಶ್ರೀಗಳ ಆರೋಗ್ಯ ಸ್ಥಿರವಾಗಿದ್ದರೆ ಆಸ್ಪತ್ರೆಯಿಂದ ಶಿಫ್ಟ್ ಮಾಡುತ್ತೇವೆ, ಆಸ್ಪತ್ರೆಯಿಂದ ಶಿಫ್ಟ್ ಮಾಡಿ ವಿಚಾರಣೆ ಮುಂದುವರಿಸಲಾಗುವುದು. ಪ್ರಕರಣದ ಉಳಿದ ಆರೋಪಿಗಳ ವಿಚಾರಣೆ ಮುಂದುವರಿಸಿದ್ದೇವೆ ಎಂದರು.
ಕಟ್ಟ ಕಟ್ಟೆ ಹತ್ತಲು ಹಿಂದೇಟು ಹಾಕಿದ ಶ್ರೀಗಳು
ಪೊಲೀಸರು ಶ್ರೀಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಶ್ರೀಗಳು ಕಟ್ಟ ಕಟ್ಟೆಯಲ್ಲಿ ನಿಲ್ಲಲು ಹಿಂದೇಟು ಹಾಕಿದ ಪ್ರಸಂಗ ನಡೆಯಿತು. ಶ್ರೀಗಳು ಕಟ್ಟಕಟ್ಟೆ ಹತ್ತಲು ಒಲ್ಲೆ ಎಂದಿರುವುದನ್ನು ನೋಡಿದ ನ್ಯಾಯಾಧೀಶರು, ಕಟ್ಟ ಕಟ್ಟೆಗೆ ಬರುವಂತೆ ಸೂಚಿಸಿದ್ದಾರೆ. ನ್ಯಾಯಾಧೀಶರ ಸೂಚನೆಯಂತೆ ಶ್ರೀಗಳು ಕಟಕಟ್ಟೆಗೆ ಹತ್ತಿದ ಶ್ರೀಗಳು ಕಣ್ಣೀರು ಇಟ್ಟರು.
ಬಂಧನಕ್ಕೂ ಮುನ್ನ ಮುರುಘಾ ಶ್ರೀಗಳು ಹೇಳಿದ್ದೇನು?
ಮುರುಘಾಶ್ರೀ ಬಂಧನ ಹಿನ್ನೆಲೆ ಮುರುಘಾಮಠದ ಪೂಜೆ ಪುನಸ್ಕಾರ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೆಬ್ಬಾಳಶ್ರೀಗಳಿಗೆ ನೀಡಲಾಗಿದೆ. ಮುರುಘಾಮಠದ ಶಾಖಾಮಠ ಹೆಬ್ಬಾಳು ಮಠದ ಮಹಾಂತರುದ್ರ ಶ್ರೀ ಅವರಿಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ. ಮುರುಘಾ ಶ್ರೀಗಳು ತಮ್ಮ ಬಂಧನಕ್ಕೂ ಮುನ್ನ ಈ ಬಗ್ಗೆ ಸೂಚಿಸಿದ್ದರು. ಈ ಬಗ್ಗೆ ಮುರುಘಾ ಮಾಠದ ಮೂಲಗಳಿಂದ ಟಿವಿ9ಗೆ ಮಾಹಿತಿ ಲಭ್ಯವಾಗಿದೆ.
ಮತ್ತಷ್ಟು ಚಿತ್ರದುರ್ಗದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:35 pm, Fri, 2 September 22