ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ, ಬಾಯ್ ಒಲಿಸಾಕಿದ್ರೂನೆ – ಕೆಚ್ಚೆದೆಯ, ಕನ್ನಡ ಅಭಿಮಾನಕ್ಕೆ ಜಿಪಿ ರಾಜರತ್ನಂ ಆದರ್ಶ

|

Updated on: Oct 31, 2023 | 7:00 PM

Kannada Rajyotsava 2023: ದೇವರೇ ಬಂದು ಕನ್ನಡ ಮಾತಾಡ್ಬೇಡ ಅಂದ್ರೆ ದೇವರಂತನೂ ನೋಡದೇ ಅವನಿಗೆ ಖತ್ನಾ ಮಾಡ್ತೀನಿ. ಕನ್ನಡದ ಸುದ್ದಿಗೇನಾದ್ರು ಬಂದ್ರೆ ಮಾನ ಉಳಿಸೋದಿಲ್ಲ ಎಂದು ಕನ್ನಡ ಪದ್​ಗಳನ್ನು ಹಾಡುತ್ತ ಕನ್ನಡವನ್ನು ಮೆರೆಸಿದ ಸಾಹಿತಿ ರಾಜರತ್ನಂ. ಇವರು ಹುಟ್ಟಿದ್ದು ಡಿಸೆಂಬರ್​ನಲ್ಲಾದರೂ (ಒಂದು ತಿಂಗಳ ಮುಂಚೆಯೇ!) ನವೆಂಬರ್ ಬಂದ್ರೆ ಇವರನ್ನು ನೆನೆಯಲೇ ಬೇಕು.

ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ, ಬಾಯ್ ಒಲಿಸಾಕಿದ್ರೂನೆ - ಕೆಚ್ಚೆದೆಯ, ಕನ್ನಡ ಅಭಿಮಾನಕ್ಕೆ ಜಿಪಿ ರಾಜರತ್ನಂ ಆದರ್ಶ
ಜಿಪಿ ರಾಜರತ್ನಂ
Follow us on
‘ಕನ್ನಡ ಪದಗೋಳ್ ಆಡೋದ್ನೆಲ್ಲ
ನಿಲ್ಲೀಸ್ ಬುಡಬೇಕ್ ರತ್ನ !’
ಅಂತ್ ಔನ್ ಅಂದ್ರೆ – ದೇವ್ರ್ ಆದ್ರ್ ಏನು !
ಮಾಡ್ತೀನ್ ಔನ್ಗೆ ಖತ್ನ !

ಆಗ್ನೆ ಮಾಡೋ ಐಗೋಳ್ ಎಲ್ಲಾ
ದೇವ್ರೆ ಆಗ್ಲಿ-ಎಲ್ಲ !
ಕನ್ನಡ್ ಸುದ್ದೀಗ್ ಏನ್ರ ಬಂದ್ರೆ
ಮಾನಾ ಉಳಸಾಕಿಲ್ಲ !

ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೆ-
ಮೂಗ್ನಲ್ ಕನ್ನಡ್ ಪದವಾಡ್ತೀನಿ !
ನನ್ ಮನಸನ್ ನೀ ಕಾಣೆ !

ನರಕಕ್ಕೆ ಕಳಿಸಿ, ನಾಲಿಗೆ ಸೀಳಿಸಿ, ಬಾಯಿ ಹೊಲಿಸಿ ಹಾಕಿದ್ರೂ ಮೂಗಿನಲ್ಲಿ ಕನ್ನಡ ಪದಗಳನ್ನು ಮಾತನಾಡುವೆ ಎಂದು ಆರ್ದ್ರವಾಗಿ ಹೇಳುವ ಮೂಲಕ ತಮ್ಮ ಕನ್ನಡಾಭಿಮಾನವನ್ನು ವ್ಯಕ್ತಪಡಿಸಿದ ಜಿ.ಪಿ.ರಾಜರತ್ನಂ ಅವರ ಕೆಚ್ಚೆದೆಯ ಭಾಷಾಭಿಮಾನಕ್ಕೆ ಆದರ್ಶ. ದೇವರೇ ಬಂದು ಕನ್ನಡ ಮಾತಾಡ್ಬೇಡ ಅಂದ್ರೆ ದೇವರಂತನೂ ನೋಡದೇ ಅವನಿಗೆ ಖತ್ನಾ ಮಾಡ್ತೀನಿ. ಕನ್ನಡದ ಸುದ್ದಿಗೇನಾದ್ರು ಬಂದ್ರೆ ಮಾನ ಉಳಿಸೋದಿಲ್ಲ ಎಂದು ಕನ್ನಡ ಪದ್​ಗಳನ್ನು ಹಾಡುತ್ತ ಕನ್ನಡವನ್ನು ಮೆರೆಸಿದ ಸಾಹಿತಿ ರಾಜರತ್ನಂ. ಇವರು ಹುಟ್ಟಿದ್ದು ಡಿಸೆಂಬರ್​ನಲ್ಲಾದರೂ (ಒಂದು ತಿಂಗಳ ಮುಂಚೆಯೇ!) ನವೆಂಬರ್ ಬಂದ್ರೆ ಇವರನ್ನು ನೆನೆಯಲೇ ಬೇಕು. ಏಕೆಂದರೆ ಸಾಹಿತ್ಯ ಲೋಕದಲ್ಲಿ ಹೆಂಡ, ಹೆಂಡ್ತಿ, ಕನ್ನಡ ಪದಗಳ ಬಗ್ಗೆ ಅಪರೂಪದ ಕಲೆಯನ್ನು ಕಲಾ ರಸಿಕರಿಗೆ ಉಣ ಒಡಿಸಿದ ಖ್ಯಾತಿ ರಾಜತ್ನಂ ಅವರಿಗೆ ಸಲ್ಲುತ್ತದೆ.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ: ‘ಕನ್ನಡ ನುಡಿಯನ್ನು ನನ್ನ ವಿದ್ಯಾರ್ಥಿಗಳಲ್ಲಿ ಗಟ್ಟಿಗೊಳಿಸುವುದೇ ಮೊದಲ ಆದ್ಯತೆ’

ತಾಯಿಯ ಮಮತೆಯಿಂದ ವಂಚಿತರಾಗಿ, ತಂದೆಯ ವಾತ್ಸಲ್ಯದಲ್ಲಿ, ಅಜ್ಜಿಯ ಅಕ್ಕರೆಯಲ್ಲಿ ಬೆಳೆದ ಜಿ. ಪಿ. ರಾಜರತ್ನಂ ಅಯ್ಯಂಗಾರ್ ಅವರು ಹುಟ್ಟಿದ್ದು 1905, ಡಿಸೆಂಬರ್ 5 ರಂದು. 1931 ರಲ್ಲಿ ಕನ್ನಡದಲ್ಲಿ ಎಂ. ಎ. ಮುಗಿಸಿದ ಇವರು ಸಾಹಿತ್ಯ ಲೋಕಕ್ಕೆ ಅಪಾರ ಕೊಡಿಗೆ ಕೊಟ್ಟಿದ್ದಾರೆ. ಅದರಲ್ಲೂ ಕನ್ನಡದ ಬಗ್ಗೆ ಇವರಲ್ಲಿದ್ದ ಅಭಿಮಾನ ಹೇಳತೀರದ್ದು. ಕನ್ನಡ, ಸಂಸ್ಕೃತ, ಇಂಗ್ಲಿಷ್, ಪಾಳಿ, ಹಿಂದಿ, ಪ್ರಾಕೃತ, ತೆಲುಗು ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದರೂ ಕನ್ನಡ ಅಂದ್ರೆ ವಿಶೇಷ ಪ್ರೀತಿ.

ಯೆಂಡ ಓಗ್ಲಿ ! ಯೆಡ್ತಿ ವೋಗ್ಲಿ !
ಎಲ್ಲಾ ಕೊಚ್ಕೊಂಡ್ ವೋಗ್ಲಿ !
ಪರ್ಪಂಚ್ ಇರೋತನಕ ಮುಂದೆ
ಕನ್ನಡ್ ಪದಗೋಳ್ ನುಗ್ಲಿ!

ರಾಜರತ್ನಂ ಅವರು ”ಎಂಡ್ ಕುಡುಕ ರತ್ನ” ಎಂಬ ಪದ್ಯ ಮಾಲೆ ರಚಿಸಿ ಅದರ ಮೂಲಕ ಒಬ್ಬ ಬಡವ, ಕುಡುಕ, ಅವನ ಪ್ರಿಯತಮೆ, ಅವನ ಕನ್ನಡ ಪ್ರೇಮ, ಅವನ ಸುತ್ತಲಿನ ಜಗತ್ತನ್ನು ಪದ್ಯದ ರೂಪದಲ್ಲಿ ಬಿಚ್ಚಿಟ್ಟರು. ಇವರ ಪದ್ಯದಲ್ಲಿ ಅಡಗಿದ್ದ ಹಳ್ಳಿ ಸೊಗಡಿನ ಭಾಷಾ ಪ್ರಯೋಗವು ಕನ್ನಡ ಭಾಷೆಯ ಸಿರಿವಂತಿಕೆಯನ್ನು ತೋರಿಸಿಕೊಟ್ಟಿದೆ. ಕುಡುಕ ಫುಲ್ ಟೈಟಾಗಿ ಬ್ಯಹ್ಮನ ಮೂಲಕ ಸರಸ್ವತಿ ತಾಯಿಗೆ ವಿದ್ಯೆ ಕೊಡು ಎಂದು ಕೇಳುವ ಪರಿಯ ಮೂಲಕ ಕನ್ನಡಿಗರ ಮುಗ್ಧ ಮನಸ್ಸಿನ ಅನಾವರಣವಾಗಿದೆ.

ಕಮಲದ್ ಹೂವಿನ್ ಕುರ್ಚಿ ಮ್ಯಾಗೆ ಜೋಕಾಗ್ ಕೂತ್ಕೋ ನೀನು
ನಾಕು ಮೂತೀಗ್ ನಾಕು ಬುಂಡೆ ಎಂಡ ತರ್ತೀನ್ ನಾನು
ಸರಸೋತಮ್ಮಂಗ್ ಏಳಾಕಿಲ್ಲ ನೀನೇನ್ ಎದರ್ಕೋ ಬ್ಯಾಡ
ಕೇಳಿದ್ ವರಾನ ಒಂದಿಸ್ ಕೊಟ್ರೆ ತಕ್ಕೋ ಎಂಡದ್ ಪೇಡ

ಪಿ. ಕಾಳಿಂಗ ರಾವ್, ಮೈಸೂರು ಅನಂತಸ್ವಾಮಿ, ರಾಜು ಅನಂತಸ್ವಾಮಿ ಸೇರಿದಂತೆ ಹಲವು ಗಾಯಕರು ರಾಜರತ್ನಂ ಅವರ ಸಾಹಿತ್ಯಕ್ಕೆ ಸಂಗೀತದ ಮೂಲಕ ಉಸಿರು ಧಾರೆಯೆರೆದಿದ್ದಾರೆ. ಅದಕ್ಕೇ… ಕನ್ನಡ, ಕನ್ನಡ ಅಭಿಮಾನ, ಕನ್ನಡ ಸಾಹಿತ್ಯದ ಬಗ್ಗೆ ಕೇಳಿದಾಗೆಲ್ಲ ಮೊದಲು ನೆನಪಿಗೆ ಬರೋದೆ ಈ ರಾಜರತ್ನಂ. ಮಕ್ಕಳಿಗೆ ಪಾಠ ಮಾಡುತ್ತ ಸಾಹಿತ್ಯ ಲೋಕ ಸಂಚಾರ ಮಾಡಿದ ರತ್ನಂಗೆ ಕನ್ನಡ ಸೇವೆಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರ ಪ್ರೋತ್ಸಾಹವಿತ್ತು. ರಾಷ್ಟ್ರಕವಿ ಶಿವರುದ್ರಪ್ಪ ಅವರ ಗುರುಗಳಾಗಿದ್ದರು.

ಇನ್ನು ಇಷ್ಟೇ ಅಲ್ಲದೆ, “ಬಣ್ಣದ ತಗಡಿನ ತುತ್ತೂರಿ, ನಾಯಿ ಮರಿ ತಿಂಡಿ ಬೇಕೇ, ನಮ್ಮ ಮನೆಯಲೊಂದು ಪುಟ್ಟ ಪಾಪ, ಕೂಸು ಮರಿ ಬೇಕೇ? ಕೂಸುಮರಿ” ಹೀಗೆ ಹತ್ತು ಹಲವು ಮಕ್ಕಳ ಪದ್ಯಗಳನ್ನು ರಾಜರತ್ನಂ ಮಕ್ಕಳಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈಗಲೂ ಕೂಡ ಮಕ್ಕಳು ಈ ಹಾಡುಗಳನ್ನು ಹೇಳಿ ಆನಂದಿಸುತ್ತಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ