ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ ಧರಿಸಿಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಆದೇಶಿಸಿದೆ. ಆದರೆ, ನಮ್ಮ ಜನ ಮಾತ್ರ ಇದಕ್ಕೆ ಡೋಂಟ್ ಕೇರ್. ಹಾಗಾಗಿ ಜಾಣನಿಗೆ ಮಾತಿನ ಪೆಟ್ಟು, ಭಂಡನಿಗೆ ದಂಡದ ಪೆಟ್ಟು ಎಂಬಂತೆ ಅಧಿಕಾರಿಗಳು ಇದೀಗ ನಿಯಮ ಪಾಲಿಸದೆ ಬಿಂದಾಸ್ ಆಗಿ ಓಡಾಡೋರಿಗೆ ದಂಡ ವಿಧಿಸಲು ಮುಂದಾಗಿದೆ.
ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ವ್ಯಾಪ್ತಿಯಲ್ಲಿ 5 ದಿನದಲ್ಲಿ 250 ಕೇಸ್ ದಾಖಲು
ನಮ್ಮ ಸಿಲಿಕಾನ್ ಸಿಟಿ ಮಂದಿಯಂತೂ ಬಿಡಿ. ಎಷ್ಟೇ ತಿಳಿಹೇಳಿದ್ರೂ ಮಾಸ್ಕ್ ಹಾಕಿಕೊಳ್ಳದೇ ಓಡಾಡೋರ ಸಂಖ್ಯೆನೇ ಜಾಸ್ತಿ. ಹಾಗಾಗಿ ನಮ್ಮ ಪೊಲೀಸರು ಹಾಗೂ ಬಿಬಿಎಂಪಿ ಮಾರ್ಷಲ್ಗಳು ಇಂಥವರನ್ನ ಹಿಡಿದು ಫೈನ್ ಹಾಕುತ್ತಿದ್ದಾರೆ.
ಇದಕ್ಕೆ ಪೂರಕವಾಗಿ ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿ ಕಳೆದ ಐದು ದಿನದಲ್ಲಿ ಸರಿಸುಮಾರು 250ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಏರಿಯಾದ ಹೋಟೆಲ್, ಬೇಕರಿ ಸೇರಿ ಹಲವೆಡೆ ಗಸ್ತು ತಿರುಗುತ್ತಿರುವ ಪೊಲೀಸರು ಹಾಗೂ ಬಿಬಿಎಂಪಿ ಮಾರ್ಷಲ್ಗಳು ನಿಯಮ ಪಾಲಿಸದವರಿಗೆ ದಂಡ ವಿಧಿಸುತ್ತಿದ್ದಾರೆ. ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬಂದವರಿಗಂತೂ ದಂಡದ ಜೊತೆ ಸರಿಯಾದ ಮಾಸ್ಕ್ ಹಾಕಿಕೊಳ್ಳುವಂತೆ ಅಧಿಕಾರಿಗಳು ಬುದ್ಧಿಮಾತು ಸಹ ಹೇಳಿದರು.
ರಾಯಚೂರಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ FIR
ರಾಯಚೂರಿನಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ ಪೊಲೀಸರು FIR ಕೂಡ ದಾಖಲಿಸಿದ್ದಾರೆ. ಇದುವರೆಗೂ ಕೊವಿಡ್ ನಿಯಮ ಉಲ್ಲಂಘಿಸಿದ ಸುಮಾರು 12 ಜನರ ವಿರುದ್ಧ FIR ದಾಖಲಾಗಿದೆ. ಮಾಸ್ಕ್ ಧರಿಸದೆ ಅಂಗಡಿಯಲ್ಲಿ ವ್ಯಾಪಾರ ಮತ್ತು ಸಾಮಾಜಿಕ ಅಂತರ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದಡಿ ರಾಯಚೂರಿನಲ್ಲಿ 6, ಸಿಂಧನೂರಿನಲ್ಲಿ 4 ಹಾಗೂ ಲಿಂಗಸುಗೂರಿನಲ್ಲಿ 2 ಅಂಗಡಿ ಮಾಲೀಕರು ವಿರುದ್ಧ ಕೇಸ್ ದಾಖಲಿಸಲಾಗಿದೆ. ಜೊತೆಗೆ, ಮಾಸ್ಕ್ ಹಾಕಿಕೊಳ್ಳದೆ ಓಡಾಡುತ್ತಿದ್ದ 501 ಬೈಕ್ ಸವಾರರಿಗೂ ದಂಡ ವಿಧಿಸಲಾಗಿದೆ. ನಿನ್ನೆ ಒಂದೇ ದಿನ ನಿಯಮ ಉಲ್ಲಂಘಿಸಿದವರಿಂದ ಒಟ್ಟು 82,200 ರೂಪಾಯಿ ದಂಡ ವಸೂಲಿಯಾಗಿದೆ.
ಕಾಫಿನಾಡಲ್ಲಿ ನಿಯಮ ಪಾಲಿಸದವರಿಗೆ ಫೈನ್..!
ಕಾಫಿನಾಡು ಚಿಕ್ಕಮಗಳೂರಿನಲ್ಲಿಯೂ ಹೀಗೆ ಮಾಸ್ಕ್ ಹಾಕದೆ ರಸ್ತೆಯಲ್ಲಿ ಓಡಾಡುತ್ತಿದ್ದ ಜನರಿಗೆ 200 ರೂಪಾಯಿ ದಂಡ ವಿಧಿಸಿದ್ದಾರೆ. ಜೊತೆಗೆ ಕೊರೊನಾದ ವಿರುದ್ಧ ಎಚ್ಚರ ವಹಿಸುವ ಬಗ್ಗೆ ಜಾಗೃತಿ ಸಹ ಮೂಡಿಸಿದ್ದಾರೆ.
Published On - 8:10 am, Sat, 27 June 20