ಬೆಳಗಾವಿ: ತವರು ಮನೆಯಿಂದ ಬಾರದ ಹಿನ್ನೆಲೆ ಪತ್ನಿ ಮೇಲೆ ಪತಿ ಗುಂಡು ಹಾರಿಸಿದ್ದ ಘಟನೆ ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಸೆ.11ರಂದು ನಡೆದಿದೆ. ಶಿವಾನಂದ ಎಂಬುವವರು ತನ್ನ ಪತ್ನಿ ಪ್ರೀತಿ ಮೇಲೆ ಗುಂಡು ಹಾರಿಸಿದ್ದರು. ಲೋಕೋಪಯೋಗಿ ಇಲಾಖೆಯಲ್ಲಿ ಗುತ್ತಿಗೆದಾರರಾಗಿರುವ ಶಿವಾನಂದ ಕಾಲೆಬಾಗನನ್ನು ಪೊಲೀಸರು ಬಂಧಿಸಿದ್ದಾರೆ. ಅದೃಷ್ಟವಶಾತ್ ಪ್ರೀತಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
4 ವರ್ಷದ ಹಿಂದೆ ಶಿವಾನಂದನನ್ನು ಪ್ರೀತಿ ಮದುವೆಯಾಗಿದ್ದರು. ಅನೈತಿಕ ಸಂಬಂಧ ಹೊಂದಿದ್ದ ಶಿವಾನಂದ ನಿತ್ಯವೂ ಹೆಂಡತಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ಪ್ರೀತಿ ಗಂಡನ ಮನೆಯಿಂದ ತವರು ಮನೆ ಸೇರಿದ್ದರು. ಆದ್ರೆ ಸೆ.11ರ ರಾತ್ರಿ ಏಕಾಏಕಿ ಮನೆಗೆ ಬಂದು ತನ್ನೊಟ್ಟಿಗೆ ಬರುವಂತೆ ಶಿವಾನಂದ ಒತ್ತಾಯಿಸಿದ್ದಾರೆ. ಈ ವೇಳೆ ಬರುವುದಿಲ್ಲ ಅಂದಿದ್ದಕ್ಕೆ ತನ್ನಲ್ಲಿದ್ದ ಪಿಸ್ತೂಲ್ ನಿಂದ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ್ದಾರೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.
ಇನ್ನು ಆತ್ಮರಕ್ಷಣೆಗಾಗಿ ಪಡೆದುಕೊಂಡಿದ್ದ ಲೈಸೆನ್ಸ್ ರಿವಾಲ್ವಾರ್, ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಉಪಯೋಗಿಸಬೇಕು. ನಿಯಮ ಉಲ್ಲಂಘನೆ ಮಾಡಿ ರಿವಾಲ್ವರ್ ಬಳಕೆ ಮಾಡಿದ್ದರಿಂದ ಹಾಗೂ ಹೆಂಡತಿ ಮೇಲೆ ಎರಡು ಸುತ್ತು ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ್ದಾನೆ ಎಂದು ಕ್ರಮ ಕೈಗೊಳ್ಳುವಂತೆ ವಿಜಯಪುರ ಎಸ್‌ಪಿಗೆ ಬೆಳಗಾವಿ ಎಸ್‌ಪಿ ಪತ್ರ ಬರೆದಿದ್ದರು.
ಹಳೇ ವೈಷಮ್ಯ ಹಿನ್ನೆಲೆ ಹಲ್ಲೆ
ಬೆಂಗಳೂರಿನ ಶೇಷಾದ್ರಿಪುರಂನ ನಟರಾಜ್ ಥಿಯೇಟರ್ ಮುಂದೆ ಹಳೇ ವೈಷಮ್ಯ ಹಿನ್ನೆಲೆ ವ್ಯಕ್ತಿ ಮೇಲೆ ಹಲ್ಲೆ ನಡೆಸಲಾಗಿದೆ. ಬೆಳಗ್ಗೆ 8ರ ಸುಮಾರಿಗೆ ಆಟೋದಲ್ಲಿ ಬಂದಿದ್ದ ನಾಲ್ವರು ರೌಡಿಶೀಟರ್ ಗಣೇಶ್ ಮೇಲೆ ಲಾಂಗ್ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿದ್ದ ಗಣೇಶ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವಕ ನಾಪತ್ತೆ
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣಕ್ಕೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವಕ ಮೇನ್ ಬೀಚ್‌ನಲ್ಲಿ ನಾಪತ್ತೆಯಾಗಿದ್ದಾನೆ. ಕಲಬುರಗಿ ಮೂಲದ ಶಿವಕುಮಾರ ಹುಚ್ಚಣ್ಣ ನಾಪತ್ತೆಯಾದವರು. ಸದ್ಯ ನಾಪತ್ತೆಯಾದ ಶಿವಕುಮಾರ ಹುಚ್ಚಣ್ಣಗಾಗಿ ಹುಡುಕಾಟ ನಡೆಯುತ್ತಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆರೆಯಲ್ಲಿ ಈಜಲು ತೆರಳಿದ್ದ ಮೆಡಿಕಲ್ ಕಾಲೇಜು ವೈದ್ಯ ನಾಪತ್ತೆ
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಾವತ್ತೂರು ಕೆರೆಯಲ್ಲಿ ಈಜಲು ತೆರಳಿದ್ದ ದಯಾನಂದ ಸಾಗರ್ ಮೆಡಿಕಲ್ ಕಾಲೇಜು ವೈದ್ಯ ನಾಪತ್ತೆಯಾಗಿದ್ದಾರೆ. ನಿನ್ನೆ ಸಂಜೆ ಸ್ನೇಹಿತರ ಜೊತೆ ಕೆರೆ ನೋಡಲು ಹೋಗಿದ್ದ ಸಚಿನ್, ಕೆರೆಯಲ್ಲಿ ಈಜಲು ಹೋಗಿ ಏಕಾಏಕಿ ನಾಪತ್ತೆಯಾಗಿದ್ದಾರೆ. ಬಾದಾಮಿ ಮೂಲದ ಸಚಿನ್ ಕುಮಾರ್ಗಾಗಿ ಹುಡುಕಾಟ ನಡೆಯುತ್ತಿದೆ.
ಬೆಂಗಳೂರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಸೆರೆ
ಜಯನಗರ ಪೊಲೀಸರು ಬೆಂಗಳೂರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಯಾಜ್ ಪಾಷಾ, ಸಾಗರ್ ಸಾಹೋ, ಶೇಷಗಿರಿ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಹಶೀಷ್ ಆಯಿಲ್ ಹಾಗೂ ಗಾಂಜಾ ಮಾರುತ್ತಿದ್ದರು. ಈ ಹಿಂದೆ ಗಾಂಜಾ ಸೇವನೆ ಪ್ರಕರಣದಲ್ಲಿ ನಯಾಜ್ ಅರೆಸ್ಟ್ ಆಗಿದ್ದ. ವಿಚಾರಣೆ ವೇಳೆ ಗಾಂಜಾ ಸರಬರಾಜು ಬಗ್ಗೆ ಮಾಹಿತಿ ನೀಡಿದ್ದ. ಮಾಹಿತಿ ಆಧರಿಸಿ ಪೊಲೀಸರು ಆಂಧ್ರಪ್ರದೇಶದ ಶ್ರೀಕಾಕುಲಂಗೆ ತೆರಳಿ ಮತ್ತಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 20 ಲಕ್ಷ ರೂ. ಮೌಲ್ಯದ 50 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. 3 ಕೋಟಿ ರೂ. ಮೌಲ್ಯದ 6 ಕೆಜಿ ಹಶೀಷ್ ಆಯಿಲ್ ಜಪ್ತಿ ಮಾಡಲಾಗಿದೆ.
Published On - 11:32 am, Tue, 13 September 22