ಮೈಸೂರು: ಬರೋಬ್ಬರಿ ಮೂರು ದಶಕಗಳ ಹಿಂದೆ ನಡೆದಿದ್ದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಪೊಲೀಸರು ಆರೋಪಿಯನ್ನು ಕೊನೆಗೂ ಬಂಧಿಸಿದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ. 31 ವರ್ಷಗಳ ಹಿಂದೆ ಅಂದರೆ 1983 ನೇ ಇಸವಿಯಲ್ಲಿ ನಡೆದ ಕಳ್ಳತನ ಪ್ರಕರಣ ಇದಾಗಿದ್ದು, ಆರೋಪಿ ನಾಗರಾಜ್ ಎಂಬಾತನನ್ನು ಪತ್ತೆ ಹಚ್ಚಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕಳ್ಳತನದ ನಂತರ ತಲೆಮರೆಸಿಕೊಂಡಿದ್ದ ನಾಗರಾಜ್ ನ್ಯಾಯಾಲಯಕ್ಕೂ ಹಾಜರಾಗದೇ, ಪೊಲೀಸರ ಕಣ್ಣಿಗೂ ಬೀಳದೆ ನಾಪತ್ತೆಯಾಗಿದ್ದ. ಆದರೆ, ಇದೀಗ ಪೊಲೀಸರು ಆತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಕೀರನಹಳ್ಳಿ ಗ್ರಾಮದ ಬಸಪ್ಪ ಎಂಬುವವರ ಮನೆಯಲ್ಲಿ 1983ರಲ್ಲಿ ಕಳ್ಳತನ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಆ ಸಂದರ್ಭದಲ್ಲೇ ದೂರು ದಾಖಲಾಗಿತ್ತಾದರೂ ಆರೋಪಿ ನಾಗರಾಜ್ ತಲೆಮರೆಸಿಕೊಂಡಿದ್ದ. ಸುಮಾರು 31 ವರ್ಷಗಳ ಕಾಲ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದ ಆರೋಪಿ ನಾಗರಾಜ್ ಕೊನೆಗೂ ಪತ್ತೆಯಾಗಿದ್ದು, ಇದೀಗ ಆತನನ್ನು ಹಿಡಿದಿರುವ ಪಿರಿಯಾಪಟ್ಟಣ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಖತರ್ನಾಕ್ ಸರಗಳ್ಳನ ಬಂಧನ
ಮೈಸೂರು: ಮೈಸೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಸರಗಳ್ಳತನ ನಡೆಸಿ ಪೊಲೀಸರಿಗೆ ತಲೆನೋವಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರು ಗ್ರಾಮಾಂತರ ಸಿಪಿಐ ಕಾರ್ಯಾಚರಣೆ ವೇಳೆ ಆರೋಪಿ ಗಿರೀಶ್ ಕುಮಾರ್ ಹೆಚ್.ಬಿ ಬಲೆಗೆ ಬಿದ್ದಿದ್ದು, ಆತನಿಂದ ಬೆಲೆ ಬಾಳುವ ಚಿನ್ನದ ಒಡವೆಗಳು ಹಾಗೂ ಬೈಕ್ ಒಂದನ್ನು ವಶಕ್ಕೆ ಪಡೆಯಲಾಗಿದೆ.
ಗಿರೀಶ್ ಕುಮಾರ್ ಹೆಚ್.ಬಿ ಹಲವು ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಇಲವಾಲ, ಜಯಪುರ, ಮೈಸೂರು ಗ್ರಾಮಾಂತರ, ಕೆ.ಆರ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣ ಹಾಗೂ ವರುಣಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಕಳ್ಳತನ ಸೇರಿ ಒಟ್ಟು ಆರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆತನಿಂದ 147 ಗ್ರಾಂ ತೂಕದ ಚಿನ್ನದ ಒಡವೆಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಮೋಟಾರ್ ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ದಾಬಸ್ಪೇಟೆಯ 3 ಅಂಗಡಿಗಳಲ್ಲಿ ಸರಣಿ ಕಳ್ಳತನ; ಅಂಗಡಿಗಳ ಶೆಟರ್ ಮುರಿದು ನಗದು ದೋಚಿರುವ ಕಳ್ಳರು