ಪೊಲೀಸ್ ದಾಳಿ: ಬೆಂಗಳೂರಿನಲ್ಲಿ 10 ರಿಂದ 15 ಸಾವಿರಕ್ಕೆ ರೆಮ್ಡೆಸಿವರ್ ಮಾರುತ್ತಿದ್ದವರ ಬಂಧನ
ರೆಮ್ಡೆಸಿವರ್ ಚುಚ್ಚುಮದ್ದಿಗೆ ಬೇಡಿಕೆ ಹೆಚ್ಚಾಗಿರುವುದನ್ನೇ ಬಂಡವಾಳ ಮಾಡಿಕೊಂಡ ಕೆಲವರು ₹2,000ದಿಂದ ₹2,500 ಬೆಲೆ ಬಾಳುವ ಔಷಧವನ್ನು ₹10ಸಾವಿರದಿಂದ ₹15 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಬೆಂಗಳೂರಿನ ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ಹಲವು ಕಡೆ ರೈಡ್ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಬೆಂಗಳೂರು: ಕೊರೊನಾ ಸೋಂಕಿನಿಂದ ಗಂಭೀರಾವಸ್ಥೆಗೆ ತಲುಪಿದವರಿಗೆ ಅಗತ್ಯ ಔಷಧ ಎಂದು ಪರಿಗಣಿಸಲಾಗಿರುವ ರೆಮ್ಡೆಸಿವರ್ ಇಂಜೆಕ್ಷನ್ ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 16 ಜನರನ್ನು ಬಂಧಿಸಿರುವುದಾಗಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ. ದಾಳಿ ವೇಳೆ 55 ರೆಮ್ಡೆಸಿವಿರ್ ಪತ್ತೆಯಾಗಿದ್ದು, ಮೆಡಿಕಲ್ ಶಾಪ್ನಲ್ಲಿ ಕೆಲಸ ಮಾಡುತ್ತಿರುವವರು, ಡಿಸ್ಟ್ರಿಬ್ಯೂಟರ್ಸ್ ಈ ಅಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ.
ರೆಮ್ಡೆಸಿವರ್ ಚುಚ್ಚುಮದ್ದಿಗೆ ಬೇಡಿಕೆ ಹೆಚ್ಚಾಗಿರುವುದನ್ನೇ ಬಂಡವಾಳ ಮಾಡಿಕೊಂಡ ಕೆಲವರು ₹2,000ದಿಂದ ₹2,500 ಬೆಲೆ ಬಾಳುವ ಔಷಧವನ್ನು ₹10ಸಾವಿರದಿಂದ ₹15 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಬೆಂಗಳೂರಿನ ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ಹಲವು ಕಡೆ ರೈಡ್ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸಿಸಿಬಿ ದಾಳಿ ಮುಂದುವರೆಯುತ್ತದೆ. ಸಾರ್ವಜನಿಕರಿಗೆ ಅಕ್ರಮ ನಡೆಯುತ್ತಿರುವುದು ಗಮನಕ್ಕೆ ಬಂದರೆ ನಮಗೆ ತಿಳಿಸಬಹುದು ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಶೇ.50ರಷ್ಟು ಬೆಡ್ ನೀಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಖಾಸಗಿ ಅಸ್ಪತ್ರೆಗಳಿಗೆ ಶೇ.50ರಷ್ಟು ಬೆಡ್ ಮೀಸಲಿಡುವಂತೆ ಸರ್ಕಾರ ಹೇಳಿದ್ದರೂ ಕೆಲ ಆಸ್ಪತ್ರೆಗಳು ಅದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಇಂದು ಈ ಬಗ್ಗೆ ಪರಿಶೀಲನೆಗಿಳಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಬೆಂಗಳೂರಿನಲ್ಲಿರುವ ಕೆಲ ಖಾಸಗಿ ಆಸ್ಪತ್ರೆಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳ ಪರಿಶೀಲನೆ ವೇಳೆ ಶಿಫಾ ಆಸ್ಪತ್ರೆಯ ಮೋಸ ಬಯಲಾಗಿದ್ದು, ಗೌರವ್ ಗುಪ್ತಾ ಎಚ್ಚರಿಕೆಗೆ ತಬ್ಬಿಬ್ಬಾದ ಶಿಫಾ ಆಸ್ಪತ್ರೆ ಸಿಬ್ಬಂದಿ ಈಗಲೇ ಶೇ.50ರಷ್ಟು ಬೆಡ್ ಕೊಡ್ತೇವೆ ಸರ್ ಎಂದು ತಡಬಡಾಯಿಸಿದ್ದಾರೆ.
ಅಂತೆಯೇ, ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯೂ ನಿಯಮ ಉಲ್ಲಂಘನೆ ಕಂಡುಬಂದಿದ್ದು, ಬೆಡ್ ನೀಡದ ವಿಕ್ರಂ ಆಸ್ಪತ್ರೆಗೆ ಗೌರವ್ ಗುಪ್ತಾ ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ: ಅಮ್ಮ, ಮಗನ ದೂರ ಮಾಡಿದ ಕೊರೊನಾ; ಮಗನಿಗೆ ತಾಯಿಯ ಸಾವಿನ ಸುದ್ದಿ ಹೇಳದೆ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬಸ್ಥರು