ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಲೇಡಿಗಾಗಿ ಆರ್​ಟಿ ನಗರದಲ್ಲಿ ಮಹಿಳಾ ಪಿಜಿಗಳನ್ನೆಲ್ಲಾ ಜಾಲಾಡಿದ ಖಾಕಿ ಪಡೆ!

|

Updated on: Mar 06, 2021 | 7:14 PM

ರಮೇಶ್ ಜಾರಕಿಹೊಳಿ CD ಬಹಿರಂಗ ಪ್ರಕರಣದಲ್ಲಿ ವಿಡಿಯೋದಲ್ಲಿದ್ದ ಸಂತ್ರಸ್ತೆ R.T.ನಗರ ವ್ಯಾಪ್ತಿಯ ಪಿ.ಜಿಯಲ್ಲಿ ನೆಲೆಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ಈ ಬಗ್ಗೆ ಉಲ್ಲೇಖವಾದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರದ ಖಾಕಿ ಪಡೆ R.T.ನಗರದ ವ್ಯಾಪ್ತಿಯಲ್ಲಿರುವ 45 ಪಿ.ಜಿಗಳಲ್ಲಿ ಹುಡುಕಾಟ ನಡೆಸಿ ಪರಿಶೀಲನೆ ಮಾಡಿದರು.

ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಲೇಡಿಗಾಗಿ ಆರ್​ಟಿ ನಗರದಲ್ಲಿ ಮಹಿಳಾ ಪಿಜಿಗಳನ್ನೆಲ್ಲಾ ಜಾಲಾಡಿದ ಖಾಕಿ ಪಡೆ!
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ರಮೇಶ್ ಜಾರಕಿಹೊಳಿ CD ಬಹಿರಂಗ ಪ್ರಕರಣದಲ್ಲಿ ವಿಡಿಯೋದಲ್ಲಿದ್ದ ಸಂತ್ರಸ್ತೆ R.T.ನಗರ ವ್ಯಾಪ್ತಿಯ ಪಿ.ಜಿಯಲ್ಲಿ ನೆಲೆಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ಈ ಬಗ್ಗೆ ಉಲ್ಲೇಖವಾದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು R.T.ನಗರದ ವ್ಯಾಪ್ತಿಯಲ್ಲಿರುವ 45 ಪಿ.ಜಿ.ಗಳಲ್ಲಿ ಹುಡುಕಾಟ ನಡೆಸಿ ಪರಿಶೀಲನೆ ಮಾಡಿದರು. ಕಬ್ಬನ್ ಪಾರ್ಕ್ ಮತ್ತು R.T.ನಗರ ಠಾಣಾ ಪೊಲೀಸರಿಂದ ಪರಿಶೀಲ‌ನೆ ನಡೆಸಲಾಯಿತು.

ಪೊಲೀಸರು ಪಿಜಿಯಲ್ಲಿದ್ದವರ ID ಕಾರ್ಡ್​ ಮತ್ತು ದಾಖಲೆಗಳ ಪರಿಶೀಲನೆ ನಡೆಸಿದರು. ಆದರೆ, ಪಿ.ಜಿ. ರಿಜಿಸ್ಟರ್ ಹಾಗೂ ಲೆಡ್ಜರ್ ಪುಸ್ತಕಗಳ ಪರಿಶೀಲನೆ ವೇಳೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಟಿವಿ9ಗೆ ಉನ್ನತ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಪೊಲೀಸರ ಪರಿಶೀಲನೆ ವೇಳೆ ಯಾವುದೇ ದಾಖಲೆ ಸಿಕ್ಕಿಲ್ಲ ಎಂಬ ಮಾಹಿತಿ ಸಿಕ್ಕಿದೆ.

ಈ ಹಿಂದೆ ದಿನೇಶ್ ಕಲ್ಲಹಳ್ಳಿ ಏನು ಹೇಳಿದರು?
ದಿನೇಶ್ ಕಲ್ಲಹಳ್ಳಿ ಮೊದಲು ಪೊಲೀಸರಿಗೆ ಹೇಳಿದ್ದು ರಾಮಕೃಷ್ಣ ಲಾಡ್ಜಿನಲ್ಲಿ ಈ ಸಿಡಿಯನ್ನು ತನಗೆ ಕೊಟ್ಟರು ಎಂದು ಹೇಳಿದ್ದರು. ಅದೇ ಜಾಡನ್ನು ಹಿಡಿದು ಹೊರಟ ಪೊಲೀಸರು ಆ ಲಾಡ್ಜಿನಲ್ಲಿ ತಡಕಾಡಿ, ಸಿಸಿಟಿವಿ ನೋಡಿದರು. ಕೊನೆಗೆ ಅವರಿಗೆ ಕಲ್ಲಹಳ್ಳಿ ಹೇಳಿಕೆ ಸುಳ್ಳಿರಬಹುದು ಎಂಬ ಅನುಮಾನ ಬರುತ್ತಿದೆ. ನಿನ್ನೆ ಈ ಕುರಿತು ದಿನೇಶ್​ ಅವರನ್ನು ಪೊಲೀಸರು ಕೇಳಿದಾಗ ಅವರಲ್ಲಿ ಸರಿಯಾದ ಉತ್ತರ ಇರಲಿಲ್ಲ. ಆಥವಾ ಆ ಲಾಡ್ಜಿನಲ್ಲಿ ಯಾವ ದಿನ, ಯಾವ ವೇಳೆಗೆ ಭೇಟಿ ಆದಿರಿ ಎಂಬ ಪ್ರಶ್ನೆಗೆ ಕೂಡ ಸರಿಯಾದ ಉತ್ತರ ಬರಲಿಲ್ಲ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಯಾವಾಗ ಸಿಡಿ ಕೊಟ್ಟಿದ್ದು?
ಪೊಲೀಸರ ಈ ಪ್ರಶ್ನೆ ಕೂಡ ಸರಿಯಾದ ಉತ್ತರವನ್ನು ಕಲ್ಲಹಳ್ಳಿ ಅವರಿಂದ ಹೊರ ಬರುವಂತೆ ಮಾಡಲಿಲ್ಲ. ಸಾಂದರ್ಭಿಕ ಸಾಕ್ಷ್ಯಾಧಾರಿತ ಹೇಳಿಕೆ (circumstantial evidence) ಕೊಟ್ಟು ತಮ್ಮ ಹೇಳಿಕೆಯನ್ನು ಪುಷ್ಠಿಕರಿಸುತ್ತಾರೆ ಎಂದು ಪೊಲೀಸರು ನಂಬಿದ್ದರು. ಆದರೆ ದಿನೇಶ್ ಕಲ್ಲಹಳ್ಳಿ ಈ ಕುರಿತು ಮತ್ತೆ ಹಾರಿಕೆ ಉತ್ತರ ಕೊಟ್ಟ ಹಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಕಲ್ಲಹಳ್ಳಿ ಮೊದಮೊದಲು ಮೂರ್ನಾಲ್ಕು ದಿನಗಳ ಹಿಂದೆ ತನಗೆ ಈ ಸೀಡಿ ಸಿಕ್ಕಿತ್ತು ಎಂದು ಹೇಳುತ್ತಿದ್ದರು. ಈಗ ಇರುವ ಅಂದಾಜಿನ ಪ್ರಕಾರ, ಈ ಸೀಡಿಯನ್ನು ಸುಮಾರು ಒಂದು ತಿಂಗಳ ಹಿಂದೆಯೇ ದಿನೇಶ್​ ಕಲ್ಲಹಳ್ಳಿ ಅವರಿಗೆ ನೀಡಲಾಗಿದೆ. ಹಾಗಾದರೆ, ಈ ಒಂದು ತಿಂಗಳು ಕಲ್ಲಹಳ್ಳಿ ಈ ಸೀಡಿಯನ್ನು ಇಟ್ಟುಕೊಂಡು ಏನು ಮಾಡಿದರು? ಒಂದು ಅಂದಾಜಿನ ಪ್ರಕಾರ, ಕಲ್ಲಹಳ್ಳಿ ತಮ್ಮ ವಕೀಲರ ಜೊತೆ ಪರಾಮರ್ಶೆ ಮಾಡಿ ಆ ನಂತರ ಪೊಲೀಸರಿಗೆ ಕೊಡಲು ನಿರ್ಧರಿಸಿದ್ದಾರೆ. ಪೊಲೀಸರು ಕೇಳುವ ಪ್ರಶ್ನೆಗಳು ಅಥವಾ ಈ ಸೀಡಿ ಕೊಟ್ಟ ನಂತರ ಯಾವ ಬೆಳವಣಿಗೆಗಳು ಆಗಬಹುದು? ಅದಕ್ಕೆ ತಾನು ಹೇಗೆ ತಯಾರಾಗಿರಬೇಕು ಎಂಬುದನ್ನು ಪರಾಮರ್ಶಿಸಿದ ನಂತರ ಪೊಲೀಸರ ಬಳಿ ಬರಲು ನಿರ್ಧರಿಸಿರಬಹುದು ಎಂಬ ನಿರ್ಣಯಕ್ಕೆ ಪೊಲೀಸರು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಾರು ಕೊಟ್ಟರು?
ದಿನೇಶ್​ ಕಲ್ಲಹಳ್ಳಿ ಮಾಧ್ಯಮದ ಮುಂದೆ ಹೇಳಿದ್ದು: ಆ ಹೆಣ್ಣುಮಗಳಿಗೆ ಜೀವಕ್ಕೆ ತುಂಬಾ ಭಯ ಇದೆ. ಹಾಗಾಗಿ ಅವಳು ಈಗ ಹೊರಗೆ ಬರಲು ಸಾಧ್ಯವಿಲ್ಲ ಪೊಲೀಸ್​ ಸ್ಟೇಶನ್ನಗೆ ಕೂಡ ಬರಲು ಸಾಧ್ಯವಿಲ್ಲ. ಆದರೆ ಅಸಲಿನಲ್ಲಿ ನಡೆದಿದ್ದೇ ಬೇರೆ ಅಂತ ಕಾಣುತ್ತಿದೆ. ನಿನ್ನೆ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಕಲ್ಲಹಳ್ಳಿ ಕೊಟ್ಟ ಉತ್ತರಕ್ಕೂ, ಮೊದಲ ದಿನ ಫಿರ್ಯಾದು ಕೊಡಲು ಬಂದಾಗ ಕೊಟ್ಟ ಹೇಳಿಕೆಯಲ್ಲಿ ತುಂಬಾ ವ್ಯತ್ಯಾಸ ಇತ್ತು ಎಂಬುದನ್ನು ಪೊಲೀಸರು ಗಮನಿಸಿದ್ದಾರೆ. ಮೊದ ಮೊದಲು ಕುಟುಂಬದ ಸದಸ್ಯರು ಆ ಸೀಡಿ ಕೊಟ್ಟದ್ದಾರೆ ಎಂದು ಹೇಳತೊಡಗಿದ್ದ ಕಲ್ಲಹಳ್ಳಿ ಕೊನೆಗೆ ಮೂರನೇ ವ್ಯಕ್ತಿಯೊಬ್ಬರು ಅಂದರೆ ತನಗೆ ಬೇಕಾದ ಒಬ್ಬ ಗೆಳೆಯರು ಆ ಸೀಡಿ ಕೊಟ್ಟದ್ದಾರೆ ಎಂದು ಪೊಲೀಸರಿಗೆ ಹೇಳಿದ್ದಾರೆ. ಈ ಹೇಳಿಕೆಯನ್ನು ನೋಡಿದರೆ ಅವರದ್ದು, ಸಾಂದರ್ಭಿಕ ಸಾಕ್ಷ್ಯಾಧಾರಿತ ಹೇಳಿಕೆ ಆಗಿರಲಿಲ್ಲ ಎಂಬುದು ಸದ್ಯಕ್ಕೆ ಗೊತ್ತಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ CD ವಿಚಾರದಲ್ಲಿ ನನ್ನ ಹೆಸರು ಯಾಕೆ ಎಳೆದು ತರ್ತಿದ್ದಾರೆ ಗೊತ್ತಿಲ್ಲ -ಲಕ್ಷ್ಮೀ ಹೆಬ್ಬಾಳ್ಕರ್

Published On - 5:33 pm, Sat, 6 March 21