ಬೆಂಗಳೂರು: ವಿಧಾನ ಪರಿಷತ್ನ ಕಲಾಪ ಆರಂಭಗೊಂಡಿದ್ದು, ನೂತನ ವಿಧಾನ ಪರಿಷತ್ ಬಿಜೆಪಿ ಸದಸ್ಯ ತುಳಸಿ ಮುನಿರಾಜುಗೌಡ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದ್ದಾರೆ. ಇನ್ನು ಮುನಿರಾಜುಗೌಡ ಭಗವಂತ ಮತ್ತು ಸತ್ಯ ನಿಷ್ಠೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಂತರ ವಿಧಾನ ಪರಿಷತ್ನಲ್ಲಿ ಪ್ರಶ್ನೋತ್ತರ ಪ್ರಕ್ರಿಯೆ ಆರಂಭವಾಗಿದ್ದು, ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ರೈತರ ಆತ್ಮಹತ್ಯೆ ಪರಿಹಾರ ಕುರಿತು ಪ್ರಶ್ನೆ ಕೇಳಲಾಯಿತು. ಬಳಿಕ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರಿಗೆ ಪ್ರಶ್ನೆಗಳನ್ನು ಕೇಳಲಾಯಿತು.
ವಿಧಾನ ಪರಿಷತ್ನಲ್ಲಿ ಸದಸ್ಯೆ ಭಾರತಿ ಶೆಟ್ಟಿ ಪ್ರಶ್ನೆಗೆ ಸಚಿವ ಪ್ರಭು ಚೌಹಾಣ್ ಉತ್ತರ ನೀಡಿದ್ದು, ರಾಜ್ಯದಲ್ಲಿ ಪ್ರಾಣಿಗಳಿಗಾಗಿ ಆ್ಯಂಬುಲೆನ್ಸ್‌ಗಳ ವ್ಯವಸ್ಥೆ ಇಲ್ಲ ಆದರೆ ಪಶು ಸಂಜೀವಿನಿ ವಾಹನಗಳ ಮೂಲಕ ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ದೇಶದಲ್ಲಿ ಮೊದಲ ಬಾರಿಗೆ ಪಶು ಸಂಜೀವಿನಿ ಕಾರ್ಯಕ್ರಮವನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ. ಈಗಾಗಲೇ 15 ಜಿಲ್ಲೆಗಳಲ್ಲಿ ಈ ಸೇವೆ ಒದಗಿಸಲಾಗಿದೆ. ಉಳಿದ ಜಿಲ್ಲೆಗಳಿಗೆ ಸೇವೆ ಕೊಡುವ ನಿಟ್ಟಿನಲ್ಲಿ ಪ್ರಸ್ತಾವನೆ ಇದೆ. ಈ ಬಗ್ಗೆ ಶೀಘ್ರವೇ ಕ್ರಮಕೈಗೊಳ್ಳುತ್ತೇವೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.
ಈ ವೇಳೆ ಪಶು ಸಂಜೀವಿನಿ ಬಗ್ಗೆ ಗ್ರಾಮಗಳಲ್ಲಿ ಜಾಗೃತಿ ಇಲ್ಲ. ಈ ಬಗ್ಗೆ ಜಾಗೃತಿ ಮೂಡಿಸಿ ಎಂದು ಭಾರತಿ ಶೆಟ್ಟಿ ಒತ್ತಾಯಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಚಿವ ಪ್ರಭು ಚೌಹಾಣ್ ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಲು ಕ್ರಮಕೈಗೊಳ್ಳುವುದಾಗಿ ನಮ್ಮ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಹೋಗುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಶಶೀಲ್ ನಮೋಶಿ ಪ್ರಶ್ನೆಗೆ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಉತ್ತರ ನೀಡಿದ್ದು, ಕಲ್ಯಾಣ ಕರ್ನಾಟಕ ಭಾಗದ ಪಶು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಹುದ್ದೆ ತುಂಬಲು ಹಣಕಾಸು ಇಲಾಖೆಗಳಿಗೆ ಕಡತಗಳನ್ನು ಕಳಿಸಲಾಗಿದೆ. ಕೊರೊನಾ ಹಿನ್ನೆಲೆ ನೇಮಕಾತಿ ಕಾರ್ಯ ಆಗಿಲ್ಲ. ಆದಷ್ಟು ಬೇಗ ಖಾಲಿ ಇರುವ ಹುದ್ದೆ ಭರ್ತಿಗೆ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ, ಸರ್ಕಾರ ರೈತರ ಜೊತೆ ಸದಾ ಇರುತ್ತದೆ: ಕಂದಾಯ ಸಚಿವ ಆರ್.ಅಶೋಕ್
ಇದನ್ನೂ ಓದಿ:ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಮಂಗಳವಾರ ಚುನಾವಣೆ