ಬೆಂಗಳೂರು: ಕೊರೊನಾ ಎರಡನೇ ಅಲೆ ದೇಶದಲ್ಲಿ ಅತ್ಯಂತ ವೇಗವಾಗಿ ಹಬ್ಬುತ್ತಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಜೊತೆಗೆ ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದ್ದು, ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಪರಿಸ್ಥಿತಿಯನ್ನು ಹತೋಟಿಗೆ ತರಲು ರಾಜ್ಯ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಈ ಬೆನ್ನೆಲ್ಲೆ ದಿನಗೂಲಿ ಕಾರ್ಮಿಕರು, ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆದರೆ ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದ ಖಾಸಗಿ ಶಾಲೆಗಳು ಮಾತ್ರ ಶುಲ್ಕ ಕಟ್ಟಿಸಿಕೊಳ್ಳಲು ಮುಂದಾಗಿದೆ.
ಮೇ 24ರವರೆಗೆ ಶಾಲೆಗಳ ಬಂದ್ಗೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಇದನ್ನು ಪರಿಗಣಿಸದ ಖಾಸಗಿ ಶಾಲಾ ಆಡಳಿತ ಮಂಡಳಿ ಶಾಲೆ ಓಪನ್ ಮಾಡಿ ಪುಸ್ತಕ ಖರೀದಿಗೆ ಆಹ್ವಾನ ನೀಡಿದೆ. ಮೇ 20 ರ ಒಳಗೆ ಪುಸ್ತಕ ಖರೀದಿಸಬೇಕು ಎಂದು ಪೋಷಕರಿಗೆ ತಿಳಿಸಿರುವ ಬೆಂಗಳೂರು ಜಯನಗರದ ಎನ್ಪಿಎಸ್ (NATIONAL PUBLIC SCHOOL) ಶಾಲೆಯ ವಿರುದ್ಧ ಸದ್ಯ ಪೋಷಕರು ತಿರುಗಿ ಬಿದ್ದಿದ್ದಾರೆ.
2020-21ನೇ ವರ್ಷದ ಶುಲ್ಕದ ಸಮಸ್ಯೆಯೇ ಇನ್ನೂ ಬಗೆಹರಿಯದೆ ಕೋರ್ಟ್ನಲ್ಲಿದೆ. ಇದರ ನಡುವೆ 2021-22ನೇ ಸಾಲಿನ ಶುಲ್ಕ ಪಾವತಿಗೆ ಒತ್ತಡ ಹೇರಲಾಗುತ್ತಿದೆ. ಈಗ ಪೂರ್ತಿ ಶುಲ್ಕ ಕಟ್ಟಿ, ಕೋರ್ಟ್ ಆದೇಶ ಬಂದರೆ ಮುಂದೆ ತೀರ್ಮಾನ ಮಾಡೋಣ ಎಂದಿರುವ ಎನ್ಪಿಎಸ್ ಶಾಲೆ, ಶುಲ್ಕ ಪಾವತಿಸುವಂತೆ ನಿತ್ಯ ಮೆಸೇಜ್
ಮೆಸೇಜ್ ಮತ್ತು ಮೇಲ್ ಮೂಲಕ ಒತ್ತಡ ಹೇರುತ್ತಿವೆ ಎಂದು ಪೋಷಕರು ತಿಳಿಸಿದ್ದಾರೆ.
ಇದಷ್ಟೇ ಅಲ್ಲದೆ ಎಲ್ಕೆಜಿ ಮಗುವಿಗೆ ಮೊದಲ ಕಂತು ಶುಲ್ಕ ಕಟ್ಟುವಂತೆ ಒತ್ತಡ ಹೇರಿರುವ ಖಾಸಗಿ ಶಾಲಾ ಮಂಡಳಿ, ಮೊದಲ ಕಂತಿನಲ್ಲಿ 1 ಲಕ್ಷ ಪಾವತಿಸುವಂತೆ ಸೂಚನೆ ನೀಡಿದೆ. ಬಾಕಿ ಹಣವನ್ನ ಎರಡನೇ ಕಂತಿನಲ್ಲಿ ಪಾವತಿಗೆ ಅವಕಾಶ ನೀಡಿದ್ದು, ಹಣ ಪಾವತಿಸಿದ ರಸೀದಿ ತೋರಿಸಿ ಪುಸ್ತಕ ಖರೀದಿಸುವಂತೆ ಸೂಚಿಸಿದೆ. ಸರ್ಕಾರ ಅಗತ್ಯ ಸಾಮಾಗ್ರಿಗಳ ಖರೀದಿಗೆ ಅವಕಾಶ ಕೊಟ್ಟಿದೆ. ಈ ಸಂದರ್ಭದಲ್ಲಿ ಪುಸ್ತಕ ಖರೀದಿಗೆ ಹೇಗೆ ಹೋಗುವುದು ಎನ್ನುವ ಗೊಂದಲ ಶುರುವಾಗಿದ್ದು, ಶುಲ್ಕ ಪಾವತಿಯ ಒತ್ತಡ ಮತ್ತು ಪುಸ್ತಕ ಖರೀದಿಯ ಪೀಕಲಾಟದಿಂದ ತಪ್ಪಿಸುವಂತೆ ಪೋಷಕರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:
ಸರ್ಕಾರದ ಆದೇಶ ಉಲ್ಲಂಘಿಸಿ ಶುಲ್ಕ ಹೆಚ್ಚಳ: ಖಾಸಗಿ ಶಾಲೆ ವಿರುದ್ಧ ಪೋಷಕರ ಆಕ್ರೋಶ
ಪೂರ್ತಿ ಶುಲ್ಕ ಪಾವತಿಗೆ ಒತ್ತಡ ಹೇರಬೇಡಿ ಎಂದು ಖಾಸಗಿ ಶಾಲೆಗಳ ಒಕ್ಕೂಟದಿಂದ ಮನವಿ: ಸಚಿವ ಸುರೇಶ್ ಸ್ವಾಗತ